ದಿನದ ಸುದ್ದಿ

ನಮೋ ಟಿವಿ ‘ಹಿಂದಿ ಸುದ್ದಿ ವಾಹಿನಿ’ ಅಲ್ಲ..!

Published

on

ಸುದ್ದಿದಿನ, ದೆಹಲಿ : ತೀವ್ರ ವಿವಾದ ಸೃಷ್ಟಿಸಿದ ‘ನಮೋ ಟಿವಿ’ ಕುರಿತಂತೆ ಡಿಟಿಎಚ್ ಸಂಸ್ಥೆ ಟಾಟಾ ಸ್ಕೈ ಈಗ ಸ್ಪಷ್ಟೀಕರಣ ನೀಡಿದೆ. ‘ನಮೋ ಟಿವಿ’ ಹಿಂದಿ ಸುದ್ದಿ ವಾಹಿನಿ ಅಲ್ಲ. ಅದು ಅಂತರ್ಜಾಲದ ಮೂಲಕ ನೀಡುವ ವಿಶೇಷ ಸೇವೆ, ಅದಕ್ಕೆ ಸರ್ಕಾರದ ಪರವಾನಗಿಯ ಅಗತ್ಯವಿಲ್ಲ ಎಂದು ವಿವರಣೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಮತ್ತು ಬಿಜೆಪಿ ಪರ ವಿಚಾರಗಳನ್ನು ಬಿಂಬಿಸಲೆಂದೇ ಇರುವ ಚಾನೆಲ್ ಅನ್ನು ಪ್ರಸಾರ ಮಾಡುತ್ತಿರುವ ಟಾಟಾ ಸ್ಕೈ, ಅದರ ಬಗ್ಗೆ ಮಾಡಿದ್ದ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ನಮೋ ಟಿವಿ ಹಿಂದಿ ಸುದ್ದಿ ವಾಹಿನಿಯಾಗಿದ್ದು, ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಇತ್ತೀಚಿನ ಬ್ರೇಕಿಂಗ್ ನ್ಯೂಸ್‌ಗಳನ್ನು ಒದಗಿಸುತ್ತದೆ’ ಎಂದು ಟಾಟಾ ಸ್ಕೈ ಈ ಮೊದಲು ಟ್ವೀಟ್ ಮಾಡಿತ್ತು. ಈ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಬಳಿಕ ಸ್ಪಷ್ಟೀಕರಣ ನೀಡಿರುವ ಟಾಟಾ ಸ್ಕೈ ಸಿಇಒ ಹರಿತ್ ನಾಗಪಾಲ್, ‘ನಮೋ ಟಿವಿ ಹಿಂದಿ ಸುದ್ದಿ ವಾಹಿನಿಯಲ್ಲ. ಟಾಟಾ ಸ್ಕೈನಲ್ಲಿ ಮುಂಚೂಣಿಯಲ್ಲಿರುವ ಯಾರಾದರೂ ಅದನ್ನು ಸುದ್ದಿ ವಾಹಿನಿಯೆಂದು ಟ್ವೀಟ್ ಮಾಡಿದ್ದರೆ ಅದು ತಪ್ಪು. ನಮೋ ಟಿವಿ ಯಾವುದೇ ಪ್ರಕಾರಕ್ಕೆ ಸೇರಿಲ್ಲ. ಅದು ಬಿಜೆಪಿಯಿಂದ ಅಂತರ್ಜಾಲದ ಮೂಲಕ ಬರುತ್ತಿದೆ’ ಎಂದು ತಿಳಿಸಿದ್ದಾರೆ.

ವಿಶೇಷ ಸೇವೆಗಳಿಗೆ ಯಾವುದೇ ಪರವಾನಗಿಯ ಅಗತ್ಯವಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ನಮೋ ಟಿವಿಯನ್ನು ಪ್ರಚಾರ ಮಾಡುವ ಸಲುವಾಗಿ ಬಿಜೆಪಿ ಬಳಸುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು. ಅಲ್ಲದೆ ಆಮ್ ಆದ್ಮಿ ಪಕ್ಷ ಕೂಡ ದೂರು ನೀಡಿತ್ತು. ಹೀಗಾಗಿ ಈ ಬಗ್ಗೆ ವರದಿ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಚುನಾವಣಾ ಆಯೋಗ ಕೇಳಿದೆ. ಅಲ್ಲದೆ ಮೈ ಭೀ ಚೌಕಿದಾರ್ ಕಾರ್ಯಕ್ರಮವನ್ನು ದೂರದರ್ಶನ ಗಂಟೆಗಟ್ಟಲೆ ಪ್ರಸಾರ ಮಾಡಿದ್ದು ಏಕೆ ಎಂಬ ಪ್ರಶ್ನೆಯನ್ನು ಸಹ ಚುನಾವಣಾ ಆಯೋಗ ಕೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version