ದಿನದ ಸುದ್ದಿ
ದೇಣಿಗೆದಾರ’ರಿಗೆ ಮರುಪಾವತಿ ಮತ್ತು ‘ವೋಟುದಾರ’ರಿಗೆ ಬಲವಂತದ ಲೂಟಿ : ಭಾರಿ ಸದ್ದಿನ ಸುಧಾರಣೆಗಳ ವಿರುದ್ಧ ದುಡಿಮೆಗಾರರ ಐಕ್ಯತೆಯ ಬಲಪ್ರಯೋಗ-ಸಿಐಟಿಯು ಕರೆ
ಮೋದಿ-02 ಸರಕಾರ ಅಧಿಕಾರ ವಹಿಸಿಕೊಳ್ಳುತ್ತಿರುವಂತೆಯೇ ಅದು ಐದು ವರ್ಷಗಳ ಹಿಂದೆ ಸೃಷ್ಟಿಸಿದ ನೀತಿ ಆಯೋಗ ಕಾರ್ಮಿಕ ಕಾನೂನುಗಳ ಬದಲಾವಣೆಗಳಿಂದ ಹಿಡಿದು 46 ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣ ಅಥವ ಮುಚ್ಚುವ ಭಾರೀ ಸದ್ದಿನ ಸುಧಾರಣೆಗಳನ್ನು ತರುವುದಾಗಿ ಪ್ರಕಟಿಸಿದೆ. ಅವರು (ವಿದೇಶಿ ಹೂಡಿಕೆದಾರರು) ಸಂತೋಷ ಪಡುತ್ತಾರೆ. ಸರಕಾರ ವಿದೇಶಿ ಹೂಡಿಕೆದಾರರಿಗೆ ಕೊಡಮಾಡಲು ಸರಕಾರೀ ಜಮೀನಿನ ಒಂದು ದಾಸ್ತಾನು ಪಟ್ಟಿಯನ್ನು ತಯಾರಿಸುತ್ತದೆ ಎಂದು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಅತ್ತ ಅಮೆರಿಕನ್ ಖಾಸಗಿ ಕಾರ್ಪೊರೇಟ್‌ಗಳು ಭೂಮಿ ಮತ್ತು ಕಾರ್ಮಿಕ ಕಾನೂನುಗಳು ಇ-ವಾಣಿಜ್ಯದಲ್ಲಿ ಬದಲಾವಣೆಗಳು ಸೇರಿದಂತೆ ಧೀರ ಸುಧಾರಣೆಗಳನ್ನು ತರಬೇಕು ಎಂದು ಭಾರತದ ಹೊಸ ಸರಕಾರಕ್ಕೆ ಹೇಳಿರುವ ಹೇಳಿಕೆಯೊಂದಿಗೆ ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆಯನ್ನು ನೋಡಬೇಕು ಎಂದು ಸಿಐಟಿಯು ಹೇಳಿದೆ.
ದೇಶದ ಕಾರ್ಮಿಕ ವರ್ಗ ಮತ್ತು ರೈತಾಪಿಗಳು ವಿರೋಧಿಸಿರುವ ಧೋರಣೆಗಳನ್ನೇ ಮೋದಿ-02 ಸರಕಾರ ರಭಸದಿಂದ ಅನುಸರಿಸಲಿದೆ ಎಂಬುದರ ಒಂದು ಸ್ಪಷ್ಟ ಸಂಕೇತವನ್ನು ಕಾರ್ಮಿಕ ವರ್ಗಕ್ಕೆ ಮತ್ತು ಭಾರತದ ಶ್ರಮಜೀವಿಗಳಿಗೆ ನೀಡಲಾಗಿದೆ ಎಂದು ಅದು ಹೇಳಿದೆ.
ದುಡಿಮೆಗಾರರ ಮೇಲೆ ಗುಲಾಮಗಿರಿಯ ಪರಿಸ್ಥಿತಿಗಳನ್ನು ಹೇರಲು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳನ್ನು ನಿಖರವಾಗಿ ರೂಪಿಸಲಾಗುತ್ತಿದೆ. ಅದೇ ರೀತಿ, ಕೇಂದ್ರೀಯ ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣವು ರಾಷ್ಟ್ರೀಯ ಆಸ್ತಿಗಳನ್ನು ಸರಕಾರದ ಅತ್ಯಂತ ಪ್ರೀತಿಯ ಕಾರ್ಪೊರೇಟ್‌ಗಳ ಲೂಟಿ ಹೊಡೆಯಲು ಅವಕಾಶ ಮಾಡಿಕೊಡುತ್ತದೆ, ಮತ್ತು ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ದೇಶೀ ತಯಾರಿಕಾ ಸಾಮರ್ಥ್ಯವನ್ನು ನಾಶಮಾಡಲು ಹಾಗೂ ವಿಕೈಗಾರಿಕೀಕರಣಕ್ಕೆ ಹಾದಿ ಮಾಡಿ ಕೊಡುತ್ತದೆ ಎಂದು ಸಿಐಟಿಯು ಹೇಳಿದೆ.
ಮೋದಿ ಸರಕಾರದ ಭಾರೀ ಸದ್ದಿನ ಸುಧಾರಣೆ ಅದಕ್ಕೆ ಒಂದು ನಿರ್ಣಾಯಕ ಆದೇಶದ ನೀಡಿದ ಜನಸಮೂಹಗಳ ಜೀವನ ಮತ್ತು ಜೀವನಾಧಾರಗಳನ್ನೇ ಧ್ವಂಸಗೊಳಿಸುವತ್ತ ಒಯ್ಯುತ್ತದೆ. ದೇಶೀ ಮತ್ತು ವಿದೇಶೀ ದೇಣಿಗೆದಾರರಿಗೆ ಮರುಪಾವತಿ ಮತ್ತು ವೋಟುದಾರರಿಗೆ ಅಂದರೆ ಜನಸಾಮಾನ್ಯರಿಗೆ ಬಲವಂತದ ಲೂಟಿ- ಇದೇ ಮೋದಿ-02 ಸರಕಾರದ ಧ್ಯೇಯವಾಗಿದೆ ಎಂದು ಸಿಐಟಿಯು ಹೇಳಿದೆ.
ಸರಕಾರದ ಈ ವಿನಾಶಕಾರಿ ಜನ-ವಿರೋಧಿ ಮತ್ತು ದೇಶ-ವಿರೋಧಿ ನಡೆಯನ್ನು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಐಕ್ಯ ವೇದಿಕೆಯ ನೇತೃತ್ವದಲ್ಲಿ ಕಾರ್ಮಿಕ ಜನಸಮೂಹಗಳ ಐಕ್ಯ ಹೋರಾಟದ ಸಂಪೂರ್ಣ ಬಲಪ್ರಯೋಗದಿಂದ ವಿರೋಧಿಸಬೇಕು ಎಂದಿರುವ ಸಿಐಟಿಯು ದೇಶದ ಕಾರ್ಮಿಕ ವರ್ಗ ತಾನು ಶ್ರಮಪಟ್ಟು ಗಳಿಸಿರುವ ಹಕ್ಕುಗಳನ್ನು ಮತ್ತು ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ದೊಡ್ಡ ಹೋರಾಟಗಳಿಗೆ ಸನ್ನದ್ಧಗೊಳ್ಳಬೇಕು ಎಂದು ಕರೆ ನೀಡಿದೆ.
ಕೃಪೆ : ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243