ಲೋಕಾರೂಢಿ
2019 ರ ನಂತರ ‘ಸಬ್ ಕಾ ವಿಶ್ವಾಸ್’-ಮಾತು ಮತ್ತು ಕೃತಿಯ ಮೊದಲ ನೋಟ
ಐದು ವರ್ಷಗಳ ಹಿಂದೆ ಭಾರೀ ಬಹುಮತದಿಂದ ಗೆದ್ದಿದ್ದ ಬಿಜೆಪಿ-ಎನ್‌ಡಿಎ ಸರಕಾರದ ನೇತೃತ್ವ ವಹಿಸಲಿದ್ದ ನರೇಂದ್ರ ಮೋದಿಯವರು ಸಂಸದ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ತಮ್ಮ ಮೊದಲ ಭಾಷಣ ಮಾಡುವ ಮೊದಲು ಸಂಸದ್ ಭವನವನ್ನು ಅದರ ಮೆಟ್ಟಲಲ್ಲಿ ತಲೆಯಿಟ್ಟು ನಮಿಸಿ ಪ್ರವೇಶಿಸಿದ್ದರು. ಈ ಬಾರಿ ಇನ್ನಷ್ಟು ಬಹುಮತದಿಂದ ಮತ್ತೆ ಪ್ರಧಾನ ಮಂತ್ರಿಯಾಗುವ ಮೊದಲು ಅದೇ ಸೆಂಟ್ರಲ್ ಹಾಲ್‌ನಲ್ಲಿ ನವ-ಚುನಾಯಿತ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತಾಡುವ ಮೊದಲು ಭಾರತ ಗಣರಾಜ್ಯದ ಸಂವಿಧಾನಕ್ಕೆ ತಲೆಬಾಗಿ ನಮಿಸಿದರು ಎಂದು ವರದಿಯಾಗಿದೆ.
ನಂತರ ತಮ್ಮ ಭಾಷಣದಲ್ಲಿ ಅವರು ಎನ್‌ಡಿಎ ಸಂಸದರಿಗೆ ತಮಗೆ ಮತನೀಡಿದವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಮಾತ್ರವಲ್ಲ, ಮತ ನೀಡದವರ ವಿಶ್ವಾಸವನ್ನು ಕೂಡ ಗಳಿಸಿಕೊಳ್ಳಬೇಕು ಎಂದು ಬುದ್ದಿವಾದ ಹೇಳಿದರು. ವಿಶೇಷವಾಗಿ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಬೇಕು, ಏಕೆಂದರೆ ಇದುವರೆಗೆ ಪ್ರತಿಪಕ್ಷದವರು ತಮ್ಮ ಹುಸಿ ಜಾತ್ಯತೀತತೆಯ ಹೆಸರಲ್ಲಿ ಅವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಹೇಳುತ್ತ ಅವರು ತಮ್ಮ ಕಳೆದ ಬಾರಿಯ ‘ಸಬ್ ಕಾ ಸಾಥ್ ,ಸಬ್ ಕಾ ವಿಕಾಸ್ ‘ಘೋಷಣೆಗೆ ‘ಸಬ್ ಕಾ ವಿಶ್ವಾಸ್’ ಎಂಬುದನ್ನು ಸೇರಿಸಿದ್ದಾರೆ.
ಇದಕ್ಕೆ ಸಂಸದ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಾತ್ರವಲ್ಲ, ಹೊರಗೂ ಭಾರೀ ಕರತಾಡನವಾಗಿದೆ. ಕೆಲವು ವಿಶ್ಲೇಷಕರು ಇದೀಗ ಒಬ್ಬ ಮುತ್ಸದ್ದಿಯ ಮಾತು ಎಂದು ಅಭಿಮಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೋದಿಯವರು ತಮ್ಮ ಮೊದಲ ಐದು ವರ್ಷಗಳಿಂದ ನಿಜವಾಗಿಯೂ ಪಾಟ ಕಲಿತಿದ್ದಾರೆ ಎಂದರು, ಆದರೆ ಮತ್ತೆ ಕೆಲವರಿಗೆ ಗೊಂದಲ, ನಿಜವಾಗಿಯೂ ಪಾಟ ಕಲಿತಿದ್ದಾರೆಯೇ ಎಂದು. ಹಲವಾರು ಜುಮ್ಲಾಗಳ ಐದು ವರ್ಷಗಳ ನಂತರ ಇಂತಹ ಜಿಜ್ಞಾಸೆ ಸಹಜ ಎನ್ನುತ್ತಾರೆ ಮತ್ತೆ ಕೆಲವರು.
ಪ್ರಧಾನಿಗಳ ಈ ಹೊಸ ಘೋಷಣೆಯ ಬೆನ್ನಲ್ಲೇ, ಮೇ 23ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ಒಂದೇ ವಾರದೊಳಗೆ ಕನಿಷ್ಟ ಆರು ಇಂತಹ ‘ವಿಶ್ವಾಸ ಗಳಿಸುವ’ ಘಟನೆಗಳು ಮತ್ತು ಎರಡು ಬಿಜೆಪಿ ಸಂಸದರ ಹೇಳಿಕೆಗಳು ಈ ಗೊಂದಲ/ಜಿಜ್ಞಾಸೆಯನ್ನು ಮತ್ತಷ್ಟು ಹೆಚ್ಚಿಸಿವೆ.
- ಮೇ 23: ಗುಜರಾತಿನ ವಡೋದರಾ ಜಿಲ್ಲೆಯ ಮಹುವಾಡ್ ಹಳ್ಳಿಯಲ್ಲಿ ಮೋದಿಯವರ ಭಾಷಣದ ರಾತ್ರಿಯಂದೇ ಸುಮಾರು 200 ಮೇಲ್ಜಾತಿ ಜನಗಳು ಪ್ರವೀಣ್ ಮಕ್ವಾನ ಮತ್ತು ತರುಲತ ಮಕ್ವಾನ ಎಂಬ ದಲಿತ ದಂಪತಿಗಳನ್ನು ಥಳಿಸಿದರು. ಕಾರಣ ಎರಡು ದಿನಗಳ ಹಿಂದೆ ಪ್ರವೀಣ್ ಮಕ್ವಾನ ಊರ ದೇವಸ್ಥಾನವನ್ನು ಅಧಿಕಾರಿಗಳು ದಲಿತರಿಗೆ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಬಿಡುತ್ತಿಲ್ಲ ಎಂದು ದೂರಿದ್ದರು. ಪೋಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
- ಮೇ 24:ಗೋರಕ್ಷಕರೆಂದು ಹೇಳಿಕೊಳ್ಳುವವರ ಐದು ಜನಗಳ ಒಂದು ಗುಂಪು ಮಧ್ಯಪ್ರದೇಶದ ಸಿಯೊನಿ ಜಿಲ್ಲೆಯಲ್ಲಿ ಮೂವರು ಮುಸ್ಲಿಮರು ಗೋಮಾಂಸ ಒಯ್ಯುತ್ತಿದ್ದರು ಎಂಬ ಗುಮಾನಿಯ ಮೇಲೆ ದಾಳಿ ಮಾಡಿತು. ಇಬ್ಬರು ಗಂಡಸರನ್ನು ಮರಕ್ಕೆ ಕಟ್ಟಿ ಥಳಿಸಿತು. ಆಮೇಲೆ ಅವರನ್ನು ಬಿಡಿಸಿ ಅವರ ಜತೆಗಿದ್ದ ಮಹಿಳೆಗೆ ಜೈಶ್ರೀರಾಮ್ ಎನ್ನುತ್ತ ಅವರೇ ಚಪ್ಪಲಿನಿಂದ ಹೊಡೆಯಬೇಕೆಂದು ಆದೇಶಿಸುತ್ತಿದ್ದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆಯಂತೆ.
- ಮೇ 25 : ಸಂಜೆ, ಹರ್ಯಾಣದ ಗುರುಗ್ರಾಮದಲ್ಲಿ ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸಿದ್ದ ಒಬ್ಬ 25 ವರ್ಷದ ಯುವಕನನ್ನು ಒಂದು ಗುಂಪು ಅಟ್ಟಿಸಿಕೊಂಡು ಬಂತು. ಟೋಪಿ ತೆಗೆಯಲು ಹೇಳಿತು. ಆತ, ಮಹಮ್ಮದ್ ಬರ್ಕತ್, ತಾನು ಮಸೀದಿಯಿಂದ ನಮಾಜು ಮುಗಿಸಿ ಬರುತ್ತಿದ್ದೇನೆ ಎಂದ. ಟೋಪಿ ತೆಗೆದು ಭಾರತ್ ಮಾತಾಕೀ ಜೈ ಮತ್ತುಜೈಶ್ರೀರಾಮ್ಎನ್ನಲು ಆತನನ್ನು ತಾಕೀತು ಮಾಡಲಾಯಿತು, ಅತನನ್ನು ಥಳಿಸಿ ಶರ್ಟ್ ಹರಿದು ಆ ಗುಂಪು ಓಡಿ ಹೋಯಿತು.
- ಮೇ 25:ಝಾರ್ಖಂಡ್‌ನ ಜಮಷೇದ್‌ಪುರದ ಅಧ್ಯಾಪಕ ಜೀತ್ರಾಯ್ ಹಂಸ್‌ದಾ ಅವರನ್ನು ಪೋಲೀಸರು ಬಂಧಿಸಿದರು. ಕಾರಣ ಸಂತಾಲ್ ಬುಡಕಟ್ಟಿಗೆ ಸೇರಿದ ಈತ ಜೂನ್ 2017ರಲ್ಲಿ ಗೋಮಾಂಸದ ವಿರುದ್ಧ ಭಾವಾತಿರೇಕದ ಬಗ್ಗೆ ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು, ಸಂತಾಲರು ಭಾರತೀಯರಾದರೆ, ಅವರು ಹಿಂದೂ ಆಚರಣೆಗಳನ್ನು ಅಂಗೀಕರಿಸುವಂತೆ ಬಲವಂತ ಮಾಡುವ ಕಾನೂನು ತರಬಾರದು ಎಂದು ಬರೆದಿದ್ದರಂತೆ. ಎಬಿವಿಪಿ ಇದರ ವಿರುದ್ದ ಗಲಭೆ ಎಬ್ಬಿಸಿ ಎಫ್‌ಐಆರ್ ಹಾಕಿಸಿದ್ದರು, ಆದರೆ ಆಗ ಬಂಧಿಸಿರಲಿಲ್ಲ, 2018ರಲ್ಲಿ ನಿರೀಕ್ಷಣಾ ಜಾಮೀನು ಸಿಗದಿದ್ದರೂ ಬಂಧಿಸಿರಲಿಲ್ಲ, ಸಂತಾಲರ ಮತ ಕಳೆದುಕೊಳ್ಳುವಂತಾಗಬಾರದೆಂದು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದಂತಿತ್ತು ಎನ್ನಲಾಗಿದೆ.
- ಮೇ 26: ಒಬ್ಬ ಡಿಟರ್ಜೆಂಟ್ ಸೇಲ್ಸ್‌ಮನ್ ತನ್ನ ಬೈಕಿನಲ್ಲಿ ಬಿಹಾರದ ಬೇಗುಸರಾಯ್ ಜಿಲ್ಲೆಯ ಒಂದು ಹಳ್ಳಿಯ ಮೂಲಕ ಹಾದು ಹೋಗುವಾಗ ರಾಜೀವ್ ಯಾದವ್ ಎಂಬಾತ ಆತನನ್ನು ನಿಲ್ಲಿಸಿ ಹೆಸರು ಕೇಳಿದ. ಮಹಮ್ಮದ್ ಕಾಸಿಂ ಎಂಬ ಮಾತು ಕೇಳುತ್ತಲೇ ಆತನ ಮೇಲೆ ಗುಂಡು ಹಾರಿಸಿಯೇ ಬಿಟ್ಟ, ಇನ್ನೊಂದು ಗುಂಡು ಹೊಡೆಯಲು ಆತ ಸಿದ್ಧಮಾಡಿಕೊಳ್ಳುತ್ತಿದ್ದಾಗ ಕಾಸಿಂ ಆತನನ್ನು ಬದಿಗೆ ತಳ್ಳಿ ಅಲ್ಲಿಂದ ತಪ್ಪಿಸಿಕೊಂಡು ಈಗ ಆಸ್ಪತ್ರೆಯಲ್ಲಿದ್ದಾನೆ. ಅಲ್ಲಿದ್ದ ಯಾರೂ ತನ್ನ ನೆರವಿಗೆ ಬರಲಿಲ್ಲ ಎನ್ನುತ್ತಾನೆ.
ಇದು ದೂರದ ಒಂದು ಹಳ್ಳಿಯ ಘಟನೆಯಾದರೆ, ಅದೇ ದಿನ ದೇಶದ ರಾಜಧಾನಿಯ ಕೇಂದ್ರ ಭಾಗದಲ್ಲಿ ಕಾರ್ಯನಿಮಿತ್ತ ಪುಣೆಯಿಂದ ಬಂದಿದ್ದ ಪ್ರಖ್ಯಾತ ಸ್ತ್ರೀರೋಗತಜ್ಞ ಡಾ. ಅರುಣ್ ಗದ್ರೆಯವರನ್ನೂ ಇದೇ ರೀತಿ ಯುವಕರ ಗುಂಪೊಂದು ತಡೆದು ನಿಲ್ಲಿಸಿ ಅವರ ಧರ್ಮ ಯಾವುದೆಂದು ಕೇಳಿ ಜೈಶ್ರೀರಾಮ್ ಎಂದು ಹೇಳುವಂತೆ ಆಗ್ರಹಿಸಿದರು. ಇದನ್ನು ಅವರು ಪುಣೆಗೆ ಹೋದ ಮೇಲೆ ಮೇ 28ರಂದು ತಿಳಿಸುತ್ತ ಇದೊಂದು ಕ್ಷುಲ್ಲಕಘಟನೆ, ಇದರಿಂದ ಯಾವ ತೀರ್ಮಾನಕ್ಕೂ ಬರಬೇಡಿ ಎಂದು ಹೇಳಿರುವುದಾಗಿ ವರದಿಯಾಗಿದೆ.
ಬಹುಶಃ ಪ್ರಧಾನಿಗಳೂ ಹಾಗೆಯೇ ಭಾವಿಸಿರಬೇಕು, ಏಕೆಂದರೆ ಈ ಯಾವ ಘಟನೆಯ ಬಗ್ಗೆಯೂ ಅವರು ಕಳೆದ ಐದು ವರ್ಷಗಳಂತೆ , ಈಗವಿಶ್ವಾಸಗಳಿಸಿಕೊಳ್ಳುವಮುತ್ಸದ್ದಿತನದಸಲಹೆನೀಡಿದಮೇಲೂಏನೂ ಹೇಳಿರುವುದು/ಟ್ವೀಟ್ಮಾಡಿರುವುದು ವರದಿಯಾಗಿಲ್ಲ.
ಈ ಆರು ಘಟನೆಗಳ 9 ವ್ಯಕ್ತಿಗಳಲ್ಲಿ 5ಜನ ಮುಸ್ಲಿಮರು, ಇಬ್ಬರು ದಲಿತರು ಮತ್ತು ಒಬ್ಬರು ಆದಿವಾಸಿ ಕುಟುಂಬದವರು. ಎಲ್ಲ ಘಟನೆಗಳೂ ನಡೆದಿರುವುದು ಉತ್ತರ ಮತ್ತು ಮಧ್ಯ ಭಾರತದಲ್ಲಿ, ಅದಕ್ಕಿಂತ ಹೆಚ್ಚಾಗಿ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಪ್ರದೇಶಗಳಲ್ಲಿ. ಇವು ಕೇವಲ ಆಕಸ್ಮಿಕ ಸಂಗತಿಗಳೇ?
ಈ ನಡುವೆ, ಬಹುಶಃ ಪ್ರಧಾನಿಗಳ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ನವ ಚುನಾಯಿತ ಬಿಜೆಪಿಯ ದಿಲ್ಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಗುರುಗ್ರಾಮದ ಘಟನೆಯನ್ನು ಖಂಡಿಸುತ್ತ ಮಹಮ್ಮದ್ ಬರ್ಕತ್‌ನನ್ನು ಥಳಿಸಿದವರಿಗೆ ಮಾದರಿ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದ್ದಾರೆ. ತಮಾಷೆಯೆಂದರೆ ಬಹಳಷ್ಟು ಆತನ ಬಿಜೆಪಿ ಗೆಳೆಯರು ಅವರ ಬೆಂಬಲಕ್ಕೆ ಬಂದಿಲ್ಲ, ಆತನಿಗೆ ಅನುಭವ ಸಾಲದು ಎಂದು ದೂರವುಳಿದರು ಎಂದು ವರದಿಯಾಗಿದೆ.
ಅತ್ತ ಉತ್ತರಪ್ರದೇಶದ ಅಲಿಘಡ್‌ನಿಂದ ಪುನರಾಯ್ಕೆಗೊಂಡಿರುವ ಬಿಜೆಪಿ ಸಂಸದ ಸತೀಶ್ ಗೌತಮ್ ಮಾತ್ರ ತನ್ನ ಸರ್ವೋಚ್ಚ ಮುಖಂಡರ ಮಾತನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಇಲ್ಲ. ಕೋಟ್ಯಂತರ ಮಂದಿ ನರೇಂದ್ರ ಮೋದಿಯವರ ಜಾಣ ಮುಖಂಡತ್ವಕ್ಕೆ ಅನುಮೋದನೆಯ ಮುದ್ರೆ ಒತ್ತಿದ ಮೇಲೂ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಬಿಜೆಪಿಗೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರೆಸಿದರೆ ಆ ವಿಶ್ವವಿದ್ಯಾಲಯದ ಉಪಕುಲಪತಿಗಳು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ.
ಈ ಬಗ್ಗೆಯೂ ಪ್ರಧಾನಿಗಳ ಟಿಪ್ಪಣಿ ಕೇಳಬಂದಿಲ್ಲ. ಈ ಸಂದರ್ಭದಲ್ಲಿ ಆಮೆರಿಕಾದ ಪ್ರಖ್ಯಾತ ಪತ್ರಿಕೆ ಟೈಮ್ ಅವರನ್ನು ಕೆಲವುದಿನಗಳಹಿಂದೆಯಷ್ಟೇ‘ಮಹಾ ವಿಭಜನಕಾರ ‘ಎಂದು ಹೇಳಿರುವುದನ್ನು ನೆನಪಿಸಿಕೊಳ್ಳುತ್ತ, ನಮ್ಮ ಪ್ರಧಾನಿಗಳಿಗೆ ವಿದೇಶಗಳಲ್ಲಿ, ಅದರಲ್ಲೂ ಪಾಶ್ಚಿಮಾತ್ಯರ ನಡುವೆ ತಮ್ಮ ಇಮೇಜಿನ ಬಗ್ಗೆ ಭಾರೀ ಕಾಳಜಿ ಎಂದು ಒಬ್ಬ ಟಿಪ್ಪಣಿಗಾರರು ನೆನಪಿಸಿದ್ದಾರೆ. ಬಹುಶಃ ಇದು ಮೇಲೆ ಹೇಳಿದ ಗೊಂದಲವನ್ನು ಸ್ವಲ್ಪ ತಿಳಿಗೊಳಿಸಬಹುದು. ಈಗ ಅದೇ ಪತ್ರಿಕೆಯಲ್ಲಿ ಮಹಾ ಒಗ್ಗಟ್ಟು ತಂದವರು ಎಂಬರ್ಥದ ಮತ್ತೊಂದು ಲೇಖನ ಪ್ರಕಟವಾಗಿದೆ!
ಇಲ್ಲಿ ಇನ್ನೊಂದು ಪ್ರಶ್ನೆಯೂ ಎದ್ದಿದೆ. ಇದುವರೆಗೆ ‘ಜಾತ್ಯತೀತತೆ’ ಮೋದಿಯವರ ಪಕ್ಷಕ್ಕೆ ನಕಲಿಎಂಬವಿಶೇಷಣದಜೊತೆಗೆಇರುತ್ತಿತ್ತು,ಅಲ್ಪಸಂಖ್ಯಾತರ ತುಷ್ಟೀಕರಣವಾಗಿತ್ತು. ಈಗ ಅಲ್ಪಸಂಖ್ಯಾತರೂ ವಂಚಿತರು ಎಂದುಒಪ್ಪಿಕೊಳ್ಳುತ್ತಸಬ್ ಕಾ ವಿಶ್ವಾಸ್ ಘೋಷಣೆ ಕೊಟ್ಟಿರುವಾಗ ಅದು ತುಷ್ಟೀಕರಣವಾಗಿ ಉಳಿದಿಲ್ಲ ಎಂದರ್ಥವಲ್ಲವೇ ಎಂದು ಒಬ್ಬ ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ ಒಂದು ವಾರದ ಘಟನೆಗಳು ಇಂತಹ ಆಶಾವಾದ ಹುಟ್ಟಿಸಿವೆಯೇ?.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243