ದಿನದ ಸುದ್ದಿ
ದೇಶದ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಗತ್ಯ : ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ
ಸುದ್ದಿದಿನ,ಬೆಳಗಾವಿ : ಉತ್ತಮ ಗುಣ ಮಟ್ಟದ ಶಿಕ್ಷಣದ ಮೂಲಕ ಸಮತೆಯ ಭಾವ, ಚಲನಶೀಲ ಜ್ಞಾನವಂತ ಸಮಾಜ ನಿರ್ಮಾಣ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.
ಭಾರತೀಯ ಶಿಕ್ಷಣ ಮಂಡಳದ ಕರ್ನಾಟಕ ಉತ್ತರ ಪ್ರಾಂತ ಹಾಗೂ ವಿಟಿಯು ಸಹಯೋಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದಲ್ಲಿ ಶನಿವಾರ ಹಮ್ಮಿಕೊಂಡಿದ್ದ ’ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದ ರಾಷ್ಟ್ರೀಯ ಸಮ್ಮೇಳನ’ ಉದ್ಘಾಟಿಸಿ ಸಚಿವರು ಮಾತನಾಡಿದರು.
ಜಗತ್ತಿನ ಹಲವು ದೇಶಗಳು ತಂತ್ರಜ್ಞಾನ ವಲಯದಲ್ಲಿ ಬೆಳವಣಿಗೆ ಸಾಧಿಸಿವೆ. ಇದಕ್ಕೆ ಅನುಗುಣವಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಲಿದೆ. 34 ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವೃತ್ತಿಪರ ಬೆಳವಣಿಗೆಯ ಮೂಲಕ ಕೌಶಲ್ಯಾಭಿವೃದ್ಧಿ
ಹೆಚ್ಚಿಸುವುದು ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ದೇಶದಲ್ಲಿರುವ ಮಾನವ ಸಂಪನ್ಮೂಲ ಶಕ್ತಿ ಸದ್ಭಳಕೆ ಮಾಡಿಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್‌ಇಪಿ ಸಹಾಯಕವಾಗಲಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಿ, ನಾಯಕತ್ವದ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ನೂತನ ಶಿಕ್ಷಣ ನೀತಿ ಸಮಾಜದ ಅಭಿವೃದ್ಧಿಗೆ ಅಗತ್ಯದ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಹೊಸ ಶಿಕ್ಷಣ ನೀತಿಯ ಪಠ್ಯಗಳ ಅನುಷ್ಠಾನ ಕುರಿತ ವಾರ್ಷಿಕ ಕ್ರಮಗಳ ಕೈಪಿಡಿ ಹಾಗೂ ಸಮಷ್ಟಿ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಲಾಯಿತು.
ಡಾ. ಮನಮೋಹನ ವೈದ್ಯ, ಭಾರತೀಯ ಶಿಕ್ಷಣ ಮಂಡಳದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಸಚ್ಚಿದಾನಂದ ಜೋಶಿ, ಸಹ ಸಂಘಟನಾ ಕಾರ್ಯದರ್ಶಿ ಶಂಕರನಾಂದ, ವಿಟಿಯು ಕುಲಪತಿ ಪ್ರೊ. ಕರಿಸಿದ್ಧಪ್ಪ ಸೇರಿದಂತೆ ಪ್ರಾಧ್ಯಾಪಕರು, ವಿದ್ವಾಂಸರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243