ದಿನದ ಸುದ್ದಿ
ಪಾಕ್ ಬಳಿ ಇವೆ ಅಪಾಯಕಾರಿ ಅಣ್ವಸ್ತ್ರಗಳು
ಸುದ್ದಿದಿನ ಡೆಸ್ಕ್: ಚೀನಾ ಹಾಗೂ ಪಾಕಿಸ್ತಾನ ಸೇನೆಯು ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿವೆ ಎಂಬ ವರದಿಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರಗಳಿದ್ದರೆ ಭಾರತದ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆ 130ರಿಂದ 140 ಮಾತ್ರ ಆದರೆ, ಚೀನಾ ಬಳಿ 280ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ ಎಂದ ಸ್ಟಾಕ್‍ಹೋಮ್ ಮೂಲದ ಅಂತರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ವರದಿಗಳು ತಿಳಿಸಿವೆ.
ಭಾರತವು ತನ್ನ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳು ಪಾಕಿಸ್ತಾನಕ್ಕಿಂತ ಪರಿಣಾಮಕಾರಿಯಾಗಿವೆ ಎಂದು ನಂಬಿದೆ. ಭವಿಷ್ಯದಲ್ಲಿ ಅವುಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಪಾಕ್ ಬಳಿ ಈಗಾಗಲೇ ಇರುವ ಅಣ್ವಸ್ತ್ರಗಳಿಂದ ಎದುರಾಳಿಗಳ ಮೇಲೆ ದೊಡ್ಡ ಮಟ್ಟದ ಹಾನಿಯನ್ನೇ ಮಾಡಬಹುದಾಗಿದೆ.
ವಿಶೇಷ ಎಂದರೆ ಅಮೆರಿಕ ಮತ್ತು ರಷ್ಯಾ ಕ್ರಮವಾಗಿ 6450 ಹಾಗೂ 6850 ಅಣ್ವಸ್ತ್ರಗಳನ್ನು ಹೊಂದಿವೆ. ಅಂದರೆ ವಿಶ್ವದ ಶೇ. 92ರಷ್ಟು ಅಣ್ವಸ್ತ್ರಗಳು ಈ ಎರಡು ದೇಶಗಳ ಕೈಯ್ಯಲ್ಲೇ ಇವೆ ಎಂದು ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ.