ದಿನದ ಸುದ್ದಿ
ನೀಲು ಕಾವ್ಯ
- ಪಿ. ಲಂಕೇಶ್
1
ಹೃದಯದ ಗುಟ್ಟುಗಳನ್ನು
ಇನಿಯನಿಗೆ ಕೂಡ
ಬಿಟ್ಟುಕೊಡಲಾರದ ನನ್ನ
ಕಣ್ಣುಗಳನ್ನು ವಂಚಿಸಿ
ನನ್ನ ಲೇಖನಿ
ಹಾಡಿ ಕುಣಿಯುವುದು
2
ಪ್ರೀತಿಸುವ ಇಬ್ಬರು
ಮೌನವಾಗಿ ಕೂತು
ನೆಮ್ಮದಿಯಾಗಿರುವುದು
ಸುಖದೃಶ್ಯ
3
ಮೊಘಲ್ ದೊರೆಗಳಂತೆ
ಪ್ರೇಮಿ ಕೂಡ
ಕೇವಲ ಅಹಂಕಾರತೆ
ನಿನ್ನ ದೊರೆಯಾಗುವ ಅಪಾಯವಿದೆ
-ಎಚ್ಚರಿಕೆ!
4
ಪ್ರೀತಿಯಿಂದ ನನ್ನ
ಕಾಲ್ಬೆರಳಿಗೆ ಮುತ್ತಿಟ್ಟ ಚೆಲುವ
ನನ್ನ ಹೃದಯ ಸಿಂಹಾಸನವ
ಗೆದ್ದುಕೊಂಡ
5
ಜನಸಾಮಾನ್ಯನ
ಮೂಕ ಅಳಲಿನಲ್ಲಿ
ಸಾಮ್ರಾಜ್ಯಗಳ ಬೀಲಿಸುವ
ತಪಃಶಕ್ತಿ ಇದೆ
6
ಚೆಲುವಾ,
ಚಲಿಸುವ ಗೋಳದ ಮೇಲೆ
ನಡೆಯುತ್ತಿರುವ ನಾವು
ಅಚಲ ಪ್ರೇಮದ ಬಗ್ಗೆ
ಪಣತೊಡುವ
ಹಾಸ್ಯಾಸ್ಪದರು ಆಗದಿರೋಣ
7
ಬಿಸಿಲು, ಸೆಖೆಯ ದಿವಸ
ಹಠಾತ್ತನೆ ಬಿದ್ದ
ಮೂಡಿದ ಕಾಮನಬಿಲ್ಲು
ನನ್ನ ಮನಸ್ಸು ಕೂಡ
8
ನನಗೆ ಅಜ್ಜಿಯ ಹಿತವಚನ:
“ನಿನ್ನ ವಿದ್ಯೆಗೆ ಬದಲು
ನಿನ್ನ ಲಜ್ಜೆ ನಡೆಸಿದಂತೆ
ಬದುಕು”
9
ಸೊಟ್ಟ ಮೋರೆಯ ಹುಡುಗಿ
ಕನ್ನಡಿಗೆ
ತಾನು ಜೀನತಳೆಂದು
ಮನವೊಲಿಸುವುದು
ಬದುಕಿನ ಮೋಜು
10
ನನ್ನ ಇನಿಯನ ಹೃದಯದ
ಸ್ಪಂದನಕ್ಕೆ ಕಿವಿ ಸಲ್ಲಿಸಿದ ನನಗೆ
ಬೇರೆ ಸಂಗೀತ
ಕೇವಲ ಗದ್ದಲ
11
ಯಾವ ವಸಂತದ ಯಾವ ಗಳಿಗೆ
ಕನ್ಯೆಗೆ ಕಾಮನೆ ಮೂಡಿತು,
ಎಂದು ಕೇಳಿದರೆ
ಗ್ರೀಷ್ಮ ಋತು ಕಲಾವಿದನಂತೆ
ವಿನಮ್ರ ಮೌನ ತಾಳಿತು
ಸುದ್ದಿದಿನ.ಕಾಂ|ವಾಟ್ಸಾಪ್|9980346243