ದಿನದ ಸುದ್ದಿ
ನೀರವ್ ಪ್ರಕರಣ: ಇಂಟರ್ ಪೋಲ್‍ಗೆ ಭಾರತ ತರಾಟೆ
ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿ ಅವರು ರದ್ದಾದ ಪಾಸ್‍ಪೋರ್ಟ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದ ಬೆನ್ನಿಗೇ ಅಂತರಾಷ್ಟ್ರೀಯ ಪೊಲೀಸ್ ಸಂಸ್ಥೆಯನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ನೀರವ್ ಅವರ ಪಾಸ್‍ಪೋರ್ಟ್ ರದ್ದಾಗಿದೆ ಎಂಬ ವಿಷಯವನ್ನು ಈ ಮೊದಲೇ ಭಾರತೀಯ ವಿದೇಶಾಂಗ ಇಲಾಖೆಯು ಬ್ರಿಟನ್ ಕಚೇರಿಗೆ ತಲುಪಿಸಿತ್ತು. ಇಷ್ಟಾದರೂ ನೀರವ್ ಅವರನ್ನು ಏಕೆ ಪ್ರಯಾಣ ಮಾಡಲು ಬಿಟ್ಟಿರಿ ಎಂದು ಭಾರತವು ಇಂಟರ್ ಪೋಲ್‍ಅನ್ನು ಪ್ರಶ್ನಿಸಿದೆ.
ನೀರವ್ ಅವರ ಪಾಸ್‍ಪೋಟ್ ನಾಲ್ಕು ಬಾರಿ ನವೀಕರಣಗೊಂಡಿದೆ. ಅವರು ಅದಕ್ಕೆ ಸಂಪರ್ಕ ಹೊಂದಿರುವ ಐದು ಪಾಸ್‍ಪೋರ್ಟ್ ಹೊಂದಿದ್ದಾರೆ ಎಂದು ಸಿಬಿಐ ಇಂಟರ್‍ಪೋಲ್‍ಗೆ ಮೊದಲೇ ಮಾಹಿತಿ ನೀಡಿತ್ತು. ಇಷ್ಟಾದರೂ ಅವರನ್ನು ಸುಲಭವಾಗಿ ಪ್ರಯಾಣ ಮಾಡಲು ಬಿಡಲಾಗಿದೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ
ಬ್ರಿಟನ್‍ನಲ್ಲಿರುವ ನೀರವ್ ಅವರು ಬೆಲ್ಜಿಯಂ, ಬ್ರಸ್ಸೆಲ್ಸ್ ಮೊದಲಾದ ದೇಶಗಳಿಗೆ ಪ್ರಯಾಣ ಮಾಡಿದ್ದರು. ಅವರು ಸಿಂಗಾಪುರ ಪಾಸ್‍ಪೋರ್ಟ್ ಬಳಸಿದ್ದರು ಎಂಬ ಗುಮಾನಿ ಇತ್ತು. ಆದರೆ, ಅವರು ತದ್ದಾದ ಭಾರತದ ಪಾಸ್‍ಪೋರ್ಟ್‍ಅನ್ನೇ ತಮ್ಮ ಪ್ರಯಾಣಕ್ಕೆ ಬಳಸಿದ್ದಾರೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು