ದಿನದ ಸುದ್ದಿ

ನೀಟ್ ಯುಜಿ 2024 | ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

Published

on

ಸುದ್ದಿದಿನಡೆಸ್ಕ್:ನೀಟ್ ಯುಜಿ 2024ರ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೇ 20ರ ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ತಮ್ಮ ಜಾಲತಾಣದಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್‌ಟಿಎ ಗೆ ನಿರ್ದೇಶನ ನೀಡಿದೆ.

ನೀಟ್ ಯುಜಿ ಪರೀಕ್ಷೆ ವಿಚಾರವಾಗಿ ಪ್ರಶ್ನೆಪತ್ರಿಕೆ ಸೋರಿಕೆ, ದುರ್ಬಳಕೆ, ವಿವಾದಾತ್ಮಕ ಕೃಪಾಂಕ ನೀಡಿಕೆ ಸೇರಿದಂತೆ ಹಲವು ರೀತಿಯ ಪರೀಕ್ಷಾ ಅಕ್ರಮಗಳ ಆರೋಪಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಅಭ್ಯರ್ಥಿಗಳ ಗುರುತನ್ನು ಮರೆಮಾಚಬೇಕು ಹಾಗೂ ನಗರವಾರು ಮತ್ತು ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸುವಂತೆ ಎನ್‌ಟಿಎ ಗೆ ಸೂಚಿಸಿದೆ.

ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಿಬಿಐ ತನ್ನ ಎರಡನೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು, ಪರೀಕ್ಷೆಯ ಪಾವಿತ್ರ‍್ಯತೆಗೆ ಧಕ್ಕೆಯಾಗಿದೆ ಎಂಬ ಅಂಶವನ್ನು ಒತ್ತಿಹೇಳಿತು. ಆದಾಗ್ಯೂ, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿರ್ಧಾರವು 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಇದು ಕೊನೆಯ ಉಪಾಯವಾಗಿದೆ ಎಂದು ಹೇಳಿದೆ.

ಇನ್ನೊಂದೆಡೆ, ನೀಟ್ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಪಾಟ್ನಾದ ಏಮ್ಸ್ ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದೆ. ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ನ ಎರಡನೇ ಮತ್ತು ಮೂರನೇ ವರ್ಷದಲ್ಲಿದ್ದಾರೆ ಎಂದು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಕೆ.ಪಾಲ್ ತಿಳಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳನ್ನು ಸಂಸ್ಥೆ ವಶಪಡಿಸಿಕೊಂಡಿದೆ ಮತ್ತು ಅವರ ಕೊಠಡಿಗಳನ್ನು ಸೀಲ್ ಮಾಡಿದೆ. ಸಿಬಿಐ ಈ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version