ದಿನದ ಸುದ್ದಿ
ಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ನಡೆದಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್ ಹಾಗೂ ಮಂಗಳೂರು ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಡಾ.ಕೆ.ಎ.ಓಬಳಪ್ಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಡಾ.ಕೆ.ಎ.ಓಬಳಪ್ಪ ಇವರು ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ಅಧಿಸೂಚನೆ ಹೊರಡಿಸಿರುವ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸಂದರ್ಶನಕ್ಕೂ ಹಾಜರಾಗಿರುತ್ತಾರೆ. ಆದರೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಮಾಹಿತಿಹಕ್ಕು ಅಡಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ದೃಢೀಕರಿಸಿ ನೀಡುವಂತೆ ಕೋರಿದಾಗಲೂ ಮಾಹಿತಿ ನೀಡದೆ ನಿರಾಕರಿಸಿರುತ್ತಾರೆ. ಯು.ಜಿ.ಸಿ ನಿಯಮಾವಳಿ ಪ್ರಕಾರ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸದೆ ವಿಷಯವಾರು ಮತ್ತು ಮೀಸಲಾತಿವಾರು 1:10, 1:15 ಅನುಪಾತದವರೆಗೂ ಮನಸ್ಸಿಚ್ಚೆಯಂತೆ ಸಂದರ್ಶನಕ್ಕೆ ಆಹ್ವಾನ ನೀಡಿ, ಕಾನೂನುಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಹೀಗಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸುವರೆಗೂ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಾಲೇಜು ಶಿಕ್ಷಣ ಆಯುಕ್ತರು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ಸ್ಪಷ್ಟನೆ ನೀಡದೆ ನಿಯಮಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲಾಗಿರುತ್ತದೆ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243