ದಿನದ ಸುದ್ದಿ
ಕರ್ತವ್ಯ ಲೋಪ | ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ (ಕ್ರ್ಸ್ರೈಸ್)ಗಳಲ್ಲಿನ ಪ್ರಾಂಶುಪಾಲರು ವಸತಿ ಶಾಲೆಗಳ ಆವರಣದಲ್ಲಿರುವ ವಸತಿ ಗೃಹಗಳಲ್ಲಿ ವಾಸ್ತವ್ಯ ಇರುವ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಿ ಅರ್ಜಿ ನೀಡಿ 3 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆ ವಿರುದ್ಧ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ವಸತಿ ಶಾಲೆಗಳಲ್ಲಿ (ಕ್ರೈಸ್) ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಶಾಲಾ ಆವರಣದಲ್ಲಿ ವಾಸ್ತವ್ಯವಿರಲು ಸುಸಜ್ಜಿತವಾದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಪ್ರತಿಭಾನ್ವಿತ ಮಕ್ಕಳ ಕಲಿಕೆ ಮತ್ತು ಪಾಲನೆಗೆ ಸರ್ಕಾರ ಅನುಕೂಲ ಮಾಡಿಕೊಡಲಾಗಿದೆ.
ಆದರೆ ಬಹುತೇಕ ವಸತಿ ಶಾಲೆಗಳ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ವಸತಿ ನಿಲಯದ ಆವರಣದಲ್ಲಿರುವ ವಸತಿ ಗೃಹಗಳಲ್ಲಿ ವಾಸ್ತವ್ಯವಿರದೆ ಹತ್ತಿರದ ನಗರ ಪ್ರದೇಶಗಳಲ್ಲಿ ವಾಸ್ತöವ್ಯವಿರುವ ಮಾಹಿತಿಯು ಸರ್ಕಾರದ ಗಮನಕ್ಕೆ ಬಂದಿರುವ ಕಾರಣ, ಹಲವಾರು ಬಾರಿ ಸರ್ಕಾರವು ಆದೇಶ ಹೊರಡಿಸಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಸತಿ ಶಾಲೆಗಳ ಆವರಣದಲ್ಲಿರುವ ವಸತಿ ಗೃಹಗಳಲ್ಲಿಯೇ ವಾಸ್ತವ್ಯವಿದ್ದು, ಮಕ್ಕಳ ಕಲಿಕೆ, ಪಾಲನೆ, ಪೋಷಣೆಗೆ ಒತ್ತು ನೀಡುವಂತೆ ಕಟ್ಟುನಿಟ್ಟಿನ ಆದೇಶವನ್ನು ಇಲಾಖೆಯಿಂದ ಹೊರಡಿಸಲಾಗಿರುತ್ತದೆ.
ಆದರೆ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ವಸತಿ ಶಾಲೆಗಳ ಆವರಣದಲ್ಲಿರುವ ವಸತಿ ಗೃಹಗಳಲ್ಲಿ ಪಾಂಶುಪಾಲರು ಹಾಗೂ ಶಾಲಾ ಸಿಬ್ಬಂದಿಗಳು ವಾಸ್ತವ್ಯ ಇರದೆ ಇರುವುದು ಗಮನಕ್ಕೆ ಬಂದ ಕಾರಣ ದಿನಾಂಕ: 05-07-2025 ರಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ತನಿಖೆ ನಡೆಸುವಂತೆ ವಕೀಲ ಡಾ.ಕೆ.ಎ.ಓಬಳೇಶ್ ದೂರು ನೀಡಿದ್ದರು. ಆದರೆ 3 ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ನಿರ್ಲಕ್ಷö್ಯ ತೋರಿದ ಜಂಟಿ ನಿರ್ದೇಶಕ ನಾಗರಾಜ ಕೆ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣ ದಾಖಲಾಗಿರುತ್ತದೆ ಎಂದು ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ವಸತಿ ಶಾಲಾ ಆವರಣದಲ್ಲಿ ಸುಸಜ್ಜಿತವಾದ ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದರೂ ಬಹುತೇಕ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಶಾಲಾ ಸಿಬ್ಬಂದಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹತ್ತಿರದ ನಗರ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ, ಪಾಲನೆ ಮತ್ತು ಪೋಷಣೆಗೆ ಅಡಚಣೆಯಾಗುತ್ತಿದೆ.
| ಡಾ.ಕೆ.ಎ.ಓಬಳೇಶ್,ವಕೀಲರು
ಸುದ್ದಿದಿನ.ಕಾಂ|ವಾಟ್ಸಾಪ್|9980346243