ನೆಲದನಿ
ದ್ವಿಕಂಠ ಸಿರಿ ಮುರಾರ್ಜಿ ಎಂಬ ದಲಿತ ಕಲಾವಿದನ ಹೋರಾಟ ಕಥನ
ಭಾರತದಲ್ಲಿ ವೈದಿಕತೆಯು ತನ್ನ ಅಸ್ತಿತ್ವದ ಉಳಿವಿಗಾಗಿ ರೂಪಿಸಿಕೊಂಡು ಬಂದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಅಸೃಶ್ಯರೆಂಬ ಪಟ್ಟವನ್ನು ಸ್ವೀಕರಿಸಿ, ಉನ್ನತ ವರ್ಗಗಳ ಸೇವೆಯನ್ನು ಪ್ರಾಮಾಣಿಕ ನೆಲೆಯಲ್ಲಿ ನೆಡೆಸಿಕೊಂಡು ಬಂದವರು ನೆಲಮೂಲ ಸಂಸ್ಕøತಿಯ ಹೊಲೆಯ ಮತ್ತು ಮಾದಿಗ ಸಮುದಾಯದವರು. ಆಧುನಿಕ ಶಿಕ್ಷಣದಿಂದ ಜಾಗೃತರಾಗಿ ಈ ದಲಿತ ಸಮುದಾಯದ ವಿಮೋಚನೆಗಾಗಿ ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನಿಕ ಹಕ್ಕು ಹಾಗೂ ಮೀಸಲಾತಿಯನ್ನು ಕಲ್ಪಿಸಿಕೊಡುವ ತನಕವೂ ಈ ಸಮುದಾಯದ ಸ್ಥಿತಿಗತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟಸಾಧ್ಯವಾಗಿತ್ತು. ಆದರೆ ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ದಲಿತರು ನಾವು ಮಾನವರೆಂಬುದಾಗಿ ಸ್ವಲ್ಪ ನೆಮ್ಮದಿಯುತವಾಗಿ ಬದುಕುವಂತಾಗಿದೆ. ಇಂತಹ ದಮನಿತ ಸಮುದಾಯದಲ್ಲಿ ಬೆಳೆದುಬಂದು, ತಮ್ಮ ಬದುಕಿನ ಭಾಗವಾಗಿ ರೂಢಿಸಿಕೊಂಡು ಬಂದ ಕಲೆಯಿಂದಲೆ ತನ್ನ ಬದುಕನ್ನು ರೂಪಿಸಿಕೊಂಡು, ಆ ಮೂಲಕ ತನ್ನ ಸಮುದಾಯದ ಜನತೆ ಹಾಗೂ ಸಮಾಜದಲ್ಲಿನ ಮಾರಕ ನೆಲೆಯ ಸನ್ನಿವೇಶಗಳ ಕುರಿತಾಗಿ ಅರಿವು ಮೂಡಿಸುವ ನೆಲೆಯಲ್ಲಿ ಹಲವಾರು ದಮನಿತ ಕಲಾವಿದರು ನೆಲದ ದನಿಯಾಗಿ ತಮ್ಮ ಪ್ರಾಮಾಣಿಕ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ನಮ್ಮ ನಡುವೆ ಇರುವ ಇಂತಹ ಜೀವಪರ ದನಿಗಳನ್ನು ಗುರುತಿಸುವ ಕಿರು ಪ್ರಯತ್ನದ ಭಾಗವೇ ಪ್ರಸ್ತುತ ಲೇಖನದ ಆಶಯವಾಗಿದೆ.
ಜಾನಪದ ಸಾಹಿತ್ಯ, ಸಂಗೀತ ನೆಲೆಯೂರಿರುವುದೆ ಗ್ರಾಮೀಣ ಜನಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ತಳಸಮುದಾಯಗಳು ಹಾಗೂ ಶ್ರಮಿಕ ವರ್ಗಗಳಲ್ಲಿ. ನಮ್ಮ ಜಾನಪದ ಪರಂಪರೆ ಹಾಗೂ ದೇಶಿ ಸಾಹಿತ್ಯದ ಸೊಬಗನ್ನು ಇಂದಿಗೂ ಜೀವಂತವಾಗಿ ಗುರುತಿಸುವುದಾದರೆ ಅದು ದಲಿತರು ಹಾಗೂ ತಳವರ್ಗಗಳಲ್ಲಿ ಮಾತ್ರ. ಆಧುನಿಕತೆಯ ಸ್ಪರ್ಶ ಹಾಗೂ ಆರ್ಥಿಕತೆಯ ಸುಧಾರಣೆಯ ಹಂತವನ್ನು ತಲುಪಿದ ಬಹುತೇಕ ಕುಟುಂಬಗಳಲ್ಲಿ ಈ ಮೌಖಿಕ ಜಾನಪದವು ಕಣ್ಮರೆಯಾಗಿರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಇದು ಪ್ರಕೃತಿಯ ಬದಲಾವಣೆಯ ನಿಯಮಗಳಲ್ಲೊಂದಾಗಿರುವ ಸಹಜ ಪ್ರಕ್ರಿಯೆಯಾಗಿದೆ. ಹಿಂದಿನಿಂದಲೂ ಜಾನಪದ ಸಾಹಿತ್ಯ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜಾನಪದ ಮತ್ತು ಬಡತನಕ್ಕೂ ಅವಿನಾಭಾವ ಸಂಬಂಧವಿರುವುದು ಕಂಡುಬರುತ್ತದೆ. ಇಂದಿಗೂ ಎಷ್ಟೋ ಜನ ಜಾನಪದ ಕಲಾವಿದರು ತಮ್ಮ ಸಾಹಿತ್ಯ ಹಾಗೂ ಕಲೆಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಸಲುವಾಗಿ ಬಡತನದ ಬೇಗೆಯಲ್ಲಿ ತಾವು ಬೆಂದು, ತಮ್ಮ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿ ಜಾನಪದ ಸಾಹಿತ್ಯದ ಮೂಲಕವೇ ತನ್ನ ಬಡತನದ ಬದುಕು ಹಾಗೂ ಆರ್ಥಿಕತೆಯ ಮಟ್ಟವನ್ನು ಸುಧಾರಿಸಿಕೊಂಡ ಗ್ರಾಮೀಣ ಪ್ರತಿಭೆಯಾದ ಮುರಾರ್ಜಿ ಎಂಬ ದ್ವಿಕಂಠ ಕಲಾವಿದನ ಬದುಕಿನ ಸಂಕಥನವನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ.
2
ಚಿತ್ರದುರ್ಗ ಜಿಲ್ಲೆಯ ಚಿನ್ನೋಬನಹಳ್ಳಿ ಎಂಬ ಗ್ರಾಮದ ದಲಿತ ಕುಟುಂಬವೊಂದರಲ್ಲಿ ಶ್ರೀ ಡಿ.ಬಿ. ಓಬ್ಬಯ್ಯ ಹಾಗೂ ಶ್ರೀಮತಿ ಮಾರಮ್ಮ ಎಂಬ ದಂಪತಿಗಳ ಮಗನಾಗಿ ಜನ್ಮತಳೆದ ಶ್ರೀಯುತ ಮುರಾರ್ಜಿಯವರು ಬಾಲ್ಯದಿಂದಲೂ ಜಾನಪದ ಸಾಹಿತ್ಯ ಸಂಗೀತದಂತಹ ವಾತವರಣದ ನಡುವೆ ಬೆಳೆದು ಬಂದವರು. ಇವರ ತಂದೆ ತತ್ವಪದ ಹಾಗೂ ಭಜನೆಯಂತಹ ಸಾಹಿತ್ಯ ವಲಯದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು, ಇವರ ತಾಯಿ ಮಾರಮ್ಮನವರು ಸೋಬಾನೆ ಹಾಡುಗಾರ್ತಿಯಾಗಿಯೂ ಪ್ರಸಿದ್ದಿಯನ್ನು ಪಡೆದವರು. ಇವರ ಪ್ರಭಾವದ ನಡುವೆ ಬೆಳೆದು ಬಂದ ಮುರಾರ್ಜಿಯವರು ಜಾನಪದ ಸಂಗೀತ ಹಾಗೂ ನಾಟಕವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡರು. ತನ್ನ ಬಡತನದ ಬದುಕಿನ ನಡುವೆಯೇ ಗಾಯನ ಕಲೆಯನ್ನು ಹವ್ಯಾಸವಾಗಿ ರೂಢಿಸಿಕೊಂಡ ಇವರು, ತಮ್ಮ ಪ್ರಾದೇಶಿಕ ಪರಿಸರದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ನಾಟಕಗಳಿಂದ ಪ್ರಭಾವಿತರಾದರು. ಈ ಸಾಮಾಜಿಕ ನಾಟಕಗಳ ಪ್ರಭಾವದಿಂದಾಗಿ ಹೆಣ್ಣು ಮತ್ತು ಗಂಡಿನ ದನಿಯನ್ನು ಅನುಕರಿಸುವ ಮೂಲಕವಾಗಿ ಹಾಡುಗಳನ್ನು ಮಧುರವಾಗಿ ಹಾಡತೊಡಗಿದರು. ಈ ಹಾಡುಗಾರಿಕೆಯನ್ನು ಮನರಂಜನೆಯ ಒಂದು ಭಾಗವಾಗಿ ಮುಂದುವರೆಸಿಕೊಂಡು ಬಂದ ಇವರಿಗೆ ಬಾಲ್ಯದಿಂದಲೂ ಗಾಯನ ಕಲೆಯು ಹತ್ತಿರದಿಂದ ಪರಿಚಿತವಾದ ಕಲೆಯಾಗಿತ್ತು.
ಇವರಲ್ಲಿ ಅಂತರ್ಗತವಾಗಿದ್ದ ಈ ಕಲೆಯ ಅನಾವರಣಕ್ಕೆ ಪ್ರಾರಂಭಿಕ ವೇದಿಕೆ ಲಭಿಸಿದ್ದು ಮಾತ್ರ ಕಿರಿಯ ಪ್ರಾಥಮಿಕ ಶಿಕ್ಷಣದ ಪಡೆಯುವ ಅವಧಿಯಲ್ಲಿ. ಈ ಅವಧಿಯಲ್ಲಿ ಶಾಲೆಯಲ್ಲಿ ನಡೆಸುತ್ತಿದ್ದ ಶಾರದ ಪೂಜೆ ಹಾಗೂ ಇತರೆ ಸಮಾರಂಭಗಳಲ್ಲಿ ಇವರೇ ಪ್ರಾರ್ಥನೆಯನ್ನು ನೆರವೇರಿಸುತ್ತಿದ್ದರು. ಈ ಹಂತದಲ್ಲಿ ಇವರ ಕಂಠವನ್ನು ಮೆಚ್ಚಿ ಪ್ರೋತ್ಸಹಿಸುತ್ತಿದ್ದ ಶಿಕ್ಷಕರಿಂದ ಇವರಲ್ಲಿ ಮತ್ತೊಷ್ಟು ಬೆಂಬಲ ಹಾಗೂ ಆತ್ಮಸ್ಥೈರ್ಯ ಒಡಮೂಡಿತು. ಇಂಥ ಪ್ರೋತ್ಸಾಹಗಳ ನಡುವೆ ಬೆಳೆದುಬಂದ ಮುರಾರ್ಜಿಯವರಿಗೆ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣದ ಅವಧಿಯಲ್ಲಿ ಶಿಕ್ಷಕ ವರ್ಗದಿಂದ ಉತ್ತಮವಾದ ಸಹಕಾರ ಲಭಿಸಿತು. ಇವರಲ್ಲಿ ಅಂತರ್ಗತವಾಗಿದ್ದ ಗಾಯನ ಕಲೆಗೆ ಮನಸೋತ ಶಿಕ್ಷಕ ವರ್ಗವು ಬಡತನದಲ್ಲಿದ್ದ ಮುರಾರ್ಜಿ ಎಂಬ ಈ ಪ್ರತಿಭೆಯನ್ನು ಪ್ರಚೋದಿಸುವ ನೆಲೆಯಲ್ಲಿ ಇವರ ವಿದ್ಯಾಭ್ಯಾಸಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುತ್ತ ಬಂದರು. ಶಿಕ್ಷಕ ವರ್ಗದ ಇಂತಹ ಸಹಕಾರದಿಂದಾಗಿ ವಿದ್ಯಾಭ್ಯಾಸ ಹಾಗೂ ಗಾಯನ ಕಲೆಯಲ್ಲಿ ಸಾಕಷ್ಟು ಆಸಕ್ತಿಯನ್ನು ಪಡೆದುಕೊಂಡರು. ಕಾಡುಹಕ್ಕಿ ಹಕ್ಕಿಯಂತೆ ತನ್ನ ಸ್ವರ ಮಾಧುರ್ಯವನ್ನು ಮುಂದುವರೆಸುತ್ತ ಬಂದ ಈ ಹಳ್ಳಿಹಕ್ಕಿಗೆ ಗಾಯನ ಕಲೆಯೇ ತನ್ನ ಬದುಕಿಗೆ ಸಾಕಷ್ಟು ಹೆಸರು ತಂದು ಕೊಟ್ಟಿರುವುದು ಮಾತ್ರವಲ್ಲದೆ, ಇವರ ಬದುಕಿಗೆ ವರವಾಗಿ ಪರಿಣಮಿಸಿತು.
3
ಮುರಾರ್ಜಿಯವರು ಬಾಲ್ಯದಿಂದಲೂ ಬಡತನದ ಬವಣೆಯಲ್ಲಿಯೇ ಬೆಳೆದುಬಂದವರು. ಇಂತಹ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿಂದಾಗಿ ಓದುವುದಕ್ಕೆ ಹಲವಾರ ತೊಂದರೆಗಳು ಎದುರಾದವು. ಇವರು ಪಿ.ಯು ಕಾಲೇಜು ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಕಾಡುವ ಬಡತನದಿಂದಾಗಿ ಕುಟುಂಬ ನಿರ್ವಹಣೆಯ ಸಮಸ್ಯೆಯು ಎದುರಾದಾಗ ಇವರ ಶಿಕ್ಷಣ ಕುಂಟಿತವಾಯಿತು. ಈ ಅವಧಿಯಲ್ಲಿ ಕಾಲೇಜು ಶಿಕ್ಷಣದಿಂದ ವಂಚಿತರಾದ ಇವರನ್ನು ಸ್ವಗ್ರಾಮದಲ್ಲಿ ಜೀತಕ್ಕೆ ನೇಮಿಸಲಾಯಿತು. ಈ ಸಂದರ್ಭದಲ್ಲಿ ಎಮ್ಮೆ ಕಾಯಲು ಹೋಗುತ್ತಿರುವಾಗ ಬಿಡುವಿನ ವೇಳೆಯಲ್ಲಿ ತನ್ನ ಸಹೋದ್ಯೊಗಿಗಳ ಸಮ್ಮುಖದಲ್ಲಿ ಹಾಗೂ ಏಕಾಂತವಾಗಿರುವ ಸಮಯದಲ್ಲಿ ದ್ವಿಕಂಠದಲ್ಲಿ ತನ್ನ ಗಾಯನ ಕಲೆಯ ಪ್ರಯೋಗ ನಡೆಸುತ್ತಿದ್ದರು. ಈ ವೇಳೆಗಾಗಲೇ ಸಾಮಾಜಿಕ ನಾಟಕಗಳಿಂದ ಸಾಕಷ್ಟು ಪ್ರೇರಣೆಗೊಂಡಿದ್ದ ಇವರಿಗೆ ಹೆಣ್ಣು ಮತ್ತು ಗಂಡಿನ ಸ್ವರವನ್ನು ತಾನು ಹಾಡಬೇಕು ಎಂಬ ಛಲ ಮೂಡಿತು. ಬಾಲ್ಯದಿಂದಲೂ ಮಧುರವಾದ ಕಂಠವನ್ನು ಹೊಂದಿದ್ದ ಇವರಿಗೆ ಇದು ಕಷ್ಟದ ಕೆಲಸವೇನು ಆಗಿರಲಿಲ್ಲ. ಆದರೆ ಏಕಕಾಲಕ್ಕೆ ಗಂಡು ಮತ್ತು ಹೆಣ್ಣಿನ ಸ್ವರವನ್ನು ಬದಲಾಯಿಸಿ ಹಾಡುವುದಕ್ಕೆ ತಾಲಿಮಿನ ಅವಶ್ಯಕತೆ ಇವರಿಗೆ ಬೇಕಿತ್ತು. ಈ ಸಂದರ್ಭದಲ್ಲಿ ಇವರು ಯಾವುದೇ ಗುರುವಿನ ಬಳಿ ಕಲಿಯದೆ ಸ್ವತಃ ತಾವೇ ಪ್ರಯೋಗ ನಡೆಸಿ ದ್ವಿಕಂಠ ಕಲೆಯಲ್ಲಿ ಪರಿಣಿತಿಯನ್ನು ಸಾಧಿಸಿದರು. ಹಗಲೆಲ್ಲ ಜೀತ ಕೆಲಸ ಮಾಡಿಕೊಂಡೆ ಹಾಡುಗಾರಿಕೆಯ ಪ್ರಯೋಗ ನಡೆಸಿ ರಾತ್ರಿಯ ವೇಳೆಯಲ್ಲಿ ಎಲ್ಲಿ ಸಾಮಾಜಿಕ ನಾಟಕಗಳು ನಡೆಯುತ್ತವೊ, ಇಲ್ಲವೇ ಸಾಮಾಜಿಕ ನಾಟಕಗಳ ಪೂರ್ವ ತಯಾರಿ ನಡೆಯುತ್ತಿರುತ್ತವೊ ಅಲ್ಲಿಗೆ ಹೋಗಿ ಹಾರ್ಮೊನಿಯಂ ಮಾಸ್ಟರ್ ಜೊತೆ ರಾತ್ರಿ ಪೂರ ಅಲ್ಲಿಯೇ ಕಾಲ ಕಳೆಯುತ್ತಿದ್ದರು. ಈ ಸಮಯದಲ್ಲಿ ಮುರಾರ್ಜಿಯವರ ಚಿಕ್ಕಪ್ಪನಾದ ಬರ್ತಿ ಓಬಳೇಶ್ ಎಂಬುವವರು ಹಾರ್ಮೊನಿಯಂ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ನಾಟಕಗಳ ತಾಲೀಮು ನಡೆಸುವ ಸಮಯದಲ್ಲಿ ಅವರ ಬಳಿ ಇದ್ದು ಅವರಂತೆ ಹಾಡುವ ಹವ್ಯಾಸವನ್ನು ಕಲಿತುಕೊಂಡರು.
ಮುರಾರ್ಜಿಯವರು ತಮ್ಮಲ್ಲಿ ಕರಗತವಾಗಿರುವ ದ್ವಿಕಂಠ ಕಲೆಯನ್ನು ಪ್ರದರ್ಶಿಸುವ ಅವಕಾಶಕ್ಕಾಗಿ ರಾತ್ರಿಯಿಡಿ ಕಾಯುತ್ತಿದ್ದರು. ಪ್ರಾರಂಭಿಕ ಹಂತದಲ್ಲಿ ನಾಟಕದ ಕೊನೆಯ ವೇಳೆಯಲ್ಲಿ ಒಂದು ಇಲ್ಲವೆ ಎರಡು ಹಾಡುಗಳನ್ನು ಹಾಡುವುದಕ್ಕೆ ಅವಕಾಶ ಲಭಿಸಿದರೆ ಇದೇ ಇವರಿಗೆ ತೃಪ್ತಿಯನ್ನು ತಂದು ಕೊಡುತ್ತಿತ್ತು. ಹೀಗೆ ಅವಕಾಶಗಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಇವರು 1995 ರಲ್ಲಿ ಚಳ್ಳಕೆರೆ ತಾಲ್ಲೂಕು ದಿಮ್ಮಿನಕೆರೆ ಎಂಬ ಗ್ರಾಮದ ನಾಟಕವೊಂದರಲ್ಲಿ ಸ್ವತಂತ್ರ ಗಾಯಕನಾಗಿ ತನ್ನ ದ್ವಿಕಂಠ ಗಾಯನವನ್ನು ಪ್ರದರ್ಶಿಸಿದರು. ಈ ನಾಟಕದಿಂದ ಸಾಕಷ್ಟು ಹೆಸರು ಮಾಡಿ ಜನಮನ ಗೆದ್ದ ಮುರಾರ್ಜಿಯವರು ಇದೇ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡರು. ಇದರಿಂದ ಸಾಕಷ್ಟು ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದವು. ಇದರಿಂದಾಗಿ ಇವರ ಕೌಟುಂಬಿಕ ಪರಿಸ್ಥಿತಿಯು ಸುಧಾರಣೆಯನ್ನು ಕಂಡುಕೊಂಡಿತು. ಹೀಗೆ ದ್ವಿಕಂಠ ಗಾಯನ ಕಲೆಯನ್ನು ಹವ್ಯಾಸವಾಗಿ ರೂಢಿಸಿಕೊಂಡು ಬಂದ ಇವರು ಮುಂದೆ ಈ ಕಲೆಯನ್ನು ಪ್ರವೃತ್ತಿಯಾಗಿಸಿಕೊಂಡು ಬಂದರು. ಈ ಕಲೆಯ ಮೂಲಕವಾಗಿ ಚಿತ್ರದುರ್ಗ, ಬಳ್ಳಾರಿ, ದಾವಣಗೆ ಹಾಗೂ ಕರ್ನಾಟಕದ ವಿವಿಧ ಪ್ರಾಂತ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು.
ಗ್ರಾಮೀಣ ಭಾಗದ ಜನತೆಯ ಮನರಂಜನ ಕಲೆಗಳಲ್ಲಿ ಒಂದಾಗಿರುವ ಸಾಮಾಜಿಕ ನಾಟಕಗಳಲ್ಲಿ ಕಲಾವಿದರು ಹಾಡುಗಾರಿಕೆಯ ಮೂಲಕ ನಾಟಕ ಪ್ರದರ್ಶನ ಮಾಡುವುದು ಕಷ್ಟದ ಕೆಲಸವಾಗಿತ್ತು. ಅದರಲ್ಲೂ ಮಹಿಳೆಯರಿಗೆ ನಟನೆಯ ಜೊತೆ ಜೊತೆಯಲ್ಲಿ ಹಾಡುಗಾರಿಕೆಯನ್ನು ಪ್ರದರ್ಶಿಸುವುದು ತುಂಬ ಕಷ್ಟದ ಕೆಲಸವಾಗಿತ್ತು. ಹಾಡುಗಾರಿಕೆಯನ್ನು ವೃತ್ತಿಯಾಗಿಸಿಕೊಂಡ ಮಹಿಳೆಯರು ಕೂಡ ಲಭಿಸುತ್ತಿರಲಿಲ್ಲ. ಆದ ಕಾರಣದಿಂದಾಗಿ ಗಂಡು ಮತ್ತು ಹೆಣ್ಣಿನ ಎರಡು ಕಂಠಗಳನ್ನು ಹಾಡುವ ಕಲಾವಿದರಿಗೆ ಸಾಮಾಜಿಕ ನಾಟಕಗಳಲ್ಲಿ ಹೆಚ್ಚಿನ ಬೇಡಿಕೆಯೂ ಇತ್ತು. ಈ ಕಾರಣದಿಂದಾಗಿ ಮುರಾರ್ಜಿಯವರಿಗೆ ಕರಗತವಾಗಿದ್ದ ದ್ವಿಕಂಠ ಕಲೆಗೆ ಸಾಕಷ್ಟು ಬೇಡಿಕೆ ಲಭಿಸಿತು. ಈ ಕ್ಷೇತ್ರದಲ್ಲಿ ಮುನ್ನೆಡದ ಇವರು 1995 ರಿಂದ ಪ್ರತಿವರ್ಷ ಸುಮಾರು 150ಕ್ಕೂ ಅಧಿಕ ನಾಟಕಗಳಿಗೆ ತಮ್ಮ ಕಂಠಸಿರಿಯನ್ನು ನೀಡುತ್ತ ಬಂದಿದ್ದಾರೆ. ಇವರ ಅದಾಜಿನ ಪ್ರಕಾರ ಇಲ್ಲಿಯವರೆಗೆ ಸುಮಾರು 3000 ಸಾವಿರಕ್ಕೂ ಅಧಿಕ ನಾಟಕಗಳಿಗೆ ಹೆಣ್ಣು ಮತ್ತು ಗಂಡಿನ ಕಂಠವನ್ನು ನೀಡಿರುವುದಾಗಿ ತಿಳಿದುಬರುತ್ತದೆ.
4
ಶ್ರೀಯುತ ಮುರಾರ್ಜಿಯವರು ಸಾಮಾಜಿಕ ನಾಟಕಗಳಿಗೆ ತಮ್ಮ ಕಂಠಸಿರಿಯನ್ನು ನೀಡುವುದರ ಜೊತೆಗೆ ಸಾಮಾಜಿಕ ಜನಜೀವನದಲ್ಲಿ ಬೆರೆತುಕೊಂಡು ಸಾಮಾಜಿಕ ಸೇವೆಯನ್ನು ನೆರವೇರಿಸುತ್ತ ಬಂದಿದ್ದಾರೆ. ಒಬ್ಬ ಸೃಜನಶೀಲ ವ್ಯಕ್ತಿಯು ಒಂದೇ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ. ಯಾವಾಗಲು ತನ್ನ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವತ್ತ ಶ್ರಮಿಸುತ್ತಿರುತ್ತಾನೆ. ಇದಕ್ಕೆ ಮುರಾರ್ಜಿಯವರು ಸೂಕ್ತ ಉದಾಹರಣೆಯಾಗಿ ನಿಲ್ಲುತ್ತಾರೆ. ಗಾಯನ ಕಲೆಯ ಜೊತೆ ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀಯುತರು ಚಿತ್ರದುರ್ಗ ಜಿಲ್ಲಾ ದಲಿತ ಸಂಘರ್ಷ ಕಲಾ ಸಮಿತಿಯ ಸಂಚಾಲಕರಾಗಿ ಹಲವಾರು ಸಾಮಾಜಿಕ ಸುಧಾರಣೆಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ದಲಿತ ಕಲಾ ಮಂಡಳಿಯ ಅಡಿಯಲ್ಲಿ ಬಾಲ ಕಾರ್ಮಿಕ ಪದ್ಧತಿ, ಸಾಕ್ಷರತ ಆಂದೋಲನ, ವಯಸ್ಕರ ಶಿಕ್ಷಣ ಪದ್ಧತಿಯಂತಹ ಕಾರ್ಯಕ್ರಮಗಳ ಕುರಿತಾಗಿ ಗ್ರಾಮೀಣ ಜನತೆಗೆ ಜಾಗೃತಿ ಮೂಡಿಸುವ ನೆಲೆಯಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗೆಯೇ ಸಾಮಾಜಿಕ ಸಮಸ್ಯೆಗಳಾದ ವರದಕ್ಷಿಣೆ, ಅಪರಾಧ ತಡೆ ಮಾಸಾಚರಣೆ, ಏಡ್ಸ್, ಸ್ವಚ್ಚ ಭಾರತ ಆಂದೋಲನದಂತಹ ವಿಶಿಷ್ಟವಾದ ಕಾರ್ಯಕ್ರಮಗಳ ಬಗೆಗೆ ಬೀದಿ ನಾಟಕಗಳ ಮೂಲಕವಾಗಿ ಅರಿವು ಮೂಡಿಸುವಲ್ಲಿ ಇವರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತ ಬಂದಿದ್ದಾರೆ.
ಹೀಗೆ ನಾಟಕ ರಂಗಭೂಮಿ ಕ್ಷೇತ್ರದ ಮೂಲಕ ಗುರುತಿಸಿಕೊಂಡಿರುವ ಮುರಾರ್ಜಿಯವರು ಜನಪರವಾದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ಚಿತ್ರದುರ್ಗ ಜಿಲ್ಲಾ ಕಲಾವಿದರ ಒಕ್ಕೂಟವನ್ನು ರಚಿಸಿಕೊಂಡು ಸರ್ಕಾರದಿಂದ ಕಲಾವಿದರಿಗೆ ಲಭ್ಯವಿರುವ ವಿವಿಧ ಸವಲತ್ತುಗಳನ್ನು ಕಲ್ಪಿಸಿಕೊಡುವಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತ ಬಂದಿದ್ದಾರೆ. ಈ ಮೂಲಕ ಜಿಲ್ಲೆಯ ಕಲಾವಿದರ ದನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದರ ಜೊತೆಯಲ್ಲಿ ‘ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ’ಯ ಅಡಿಯಲ್ಲಿ ಮಹಿಳೆಯರಿಗೆ ಗೃಹೋಪಯೋಗಿ ವಸ್ತು ತಯಾರಿಕೆ ತರಬೇತಿ, ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರಿಗೆ ಶಿಕ್ಷಣ ತರಬೇತಿ, ಸರ್ಕಾರದ ‘ಬಿ ಆರ್ ಜಿ ಎಫ್’ ಯೋಜನೆಗಳ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಸಂಪೂರ್ಣ ಗ್ರಾಮ ನೈರ್ಮಲ್ಯ, ಸ್ವಚ್ಚ ಭಾರತ ಅಭಿಯಾನ, ಮಹಾತ್ಮಗಾಂಧಿ ಉದ್ಯೋಗಖಾತರಿ ಯೋಜನೆಗಳಂತಹ ವಿಶೇಷ ಕಾರ್ಯಕ್ರಮಗಳ ಕುರಿತಾಗಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಬಾಲ್ಯದ ದಿನಗಳಿಂದಲೂ ಬಡತನದ ನಡುವೆಯೇ ಬೆಳೆದು ಬಂದ ಇವರು ತಮ್ಮ ಗ್ರಾಮೀಣ ಭಾಗದ ಜನತೆಗೆ ಅರಿವು ಮೂಡಿಸುವ ನೆಲೆಯಲ್ಲಿ ಇಂತಹ ಹಲವಾರು ಜನಪರವಾದ ಯೋಜನೆಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಇವರು ಕರಗತಮಾಡಿಕೊಂಡಿದ್ದ ರಂಗಭೂಮಿ ಕಲೆಯನ್ನು ಕೇವಲ ವೃತಿಯಾಗಿ ಬಳಸಿಕೊಳ್ಳದೆ ಇದರ ಅಡಿಯಲ್ಲಿ ಸಮಾಜ ಸೇವೆಯನ್ನು ಕೈಗೊಂಡರು. ಇದು ಕಲಾವಿದನೊಬ್ಬ ಸಮಾಜ ಸುಧಾರಕನಾಗಿಯೂ ತನ್ನನ್ನು ಗುರುತಿಸಿಕೊಳ್ಳಬಲ್ಲ ಎಂಬುದಕ್ಕೆ ಇವರು ಮಾದರಿಯಾಗಿ ನಿಲ್ಲುತ್ತಾರೆ. ನಮ್ಮ ಗ್ರಾಮೀಣ ಭಾಗದ ಜನರಲ್ಲಿ ಅಂತರ್ಗತವಾಗಿರುವ ಬಹುತೇಕ ಕಲೆಗಳು ಬಡತನದಲ್ಲಿ ಬಾಳಿ ಬೆಳಗಿದ ಬಗೆಯನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಈ ಕಲೆಯ ಅಡಿಯಲ್ಲಿ ಆಧುನಿಕ ಬದುಕಿನ ತಲ್ಲಣಗಳಿಗೆ ಆರೋಗ್ಯಕರವಾದ ನೆಲೆಯಲ್ಲಿ ಸ್ಪಂದಿಸುವ ವಿಶೇಷ ಆಯಾಮವೊಂದನ್ನು ಇವರು ಕಂಡುಕೊಂಡಿದ್ದಾರೆ. ಇದು ಕಲಾ ಜೀವನದೊಂದಿಗೆ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕ್ರಮವಾಗಿದೆ.
ಶ್ರೀಯುತ ಮುರಾರ್ಜಿಯವರು ಕಲೆಯ ಮೂಲಕವಾಗಿ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಲೆ ಕಲೆಯನ್ನು ಆಧುನಿಕ ಸಂದರ್ಭಕ್ಕೆ ತಕ್ಕಂತೆ ಪ್ರಗತಿಯತ್ತ ಮುನ್ನೆಡುಸುತ್ತ ಬಂದಿದ್ದಾರೆ. ನಾಟಕ ರಂಗಭೂಮಿ ಕ್ಷೇತ್ರದ ಮೂಲಕ ಕಲಾಕ್ಷೇತ್ರವನ್ನು ಪ್ರವೇಶಿಸಿದ ಇವರು ಸಂಗೀತ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಗೂ ಮುಂದಾಗಿದ್ದಾರೆ. ತಮ್ಮ ಹೆಸರಿನಲ್ಲಿ ಅಡಿಯಲ್ಲಿ ‘ಮುರಾರ್ಜಿ ಸುಗಮ ಸಂಗೀತ ತಂಡ’ ಹಾಗೂ ‘ಮುರಾರ್ಜಿ ಆರ್ಕೆಸ್ಟ್ರಾ ತಂಡ’ಗಳನ್ನು ರಚಿಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಜಾನಪದ ಹಾಡು, ತತ್ವಪದ ಹಾಡು, ಭಾವಗೀತೆಗಳು, ವಚನಗಳನ್ನು ಹೊರ ರಾಜ್ಯಗಳಲ್ಲೂ ಹಾಡುವ ಮೂಲಕವಾಗಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಹೀಗಾಗಿಯೇ ಮುರಾರ್ಜಿಯವರನ್ನು ಬಹುಮುಖ ಪ್ರತಿಭೆ ಎಂದು ಗುರುತಿಸಲಾಗಿದೆ.
5
ರಂಗಭೂಮಿ ಮತ್ತು ಗಾಯನ ಕಲೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಮುರಾರ್ಜಿಯವರು ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುರಾರ್ಜಿಯವರು ತಮ್ಮ ಸಾಮಾಜಿಕ ಸೇವೆಯ ಮುಖಾಂತರವಾಗಿ ತಮ್ಮ ಭಾಗದಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ಹೀಗಾಗಿ ಜಿಲ್ಲಾ ಪಂಚಾಯಿತಿ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಇವರ ತಾಯಿಯವರು ಸ್ಪರ್ಧಿಸಿ ಜಯಶೀಲರಾಗಿರುತ್ತಾರೆ. ಈ ಚುನಾವಣ ಜಯಕ್ಕೆ ಮುರಾರ್ಜಿಯವರ ಕ್ರಿಯಾಶೀಲ ವ್ಯಕ್ತಿತ್ವವೇ ಪ್ರಮುಖ ಕಾರಣವಾಗಿರುತ್ತದೆ. ಅಷ್ಟೆ ಅಲ್ಲದೆ ಇವರ ಗಾಯನ ಕಲೆಯಿಂದಾಗಿ ಚಿತ್ರದುರ್ಗ ಹಾಗೂ ಬಳ್ಳಾರಿ ಪ್ರಾಂತ್ಯದ ಬಹುತೇಕ ಮಠಾಧೀಶರ ನೇರ ಸಂಪರ್ಕವನ್ನು ಗಳಿಸುವ ಮೂಲಕವಾಗಿ ಈ ಮಠಗಳ ವಿಶೇಷ ಕಾರ್ಯಕ್ರಮಗಳಲ್ಲಿ ಶರಣರ ವಚನಗಳನ್ನು ಗಾಯನ ಮಾಡಿತ್ತ ಬಂದಿದ್ದಾರೆ.
ಮುರಾರ್ಜಿಯವರಲ್ಲಿ ಅಂತರ್ಗತವಾಗಿರುವ ಈ ಗಾಯನ ಕಲೆಯು ವಂಶ ಪಾರಂಪರ್ಯವಾಗಿ ಬಂದ ಬಳುವಳಿಯಾಗಿದೆ. ಇವರ ಗ್ರಾಮ, ಅದರಲ್ಲೂ ಇವರ ಕೌಟುಂಬಿಕ ಪರಿಸರವು ಸಾಹಿತ್ಯ ಹಾಗೂ ಸಾಂಸ್ಕøತಿಕ ವಾತವರಣದಿಂದ ಕೂಡಿರುವಂತದ್ದಾಗಿದೆ. ಇವರ ತಂದೆ ತತ್ವಪದ, ಭಜನೆಪದ, ವಚನಗಳನ್ನು ಹಾಡುತ್ತ ಬಂದಿದ್ದು, ಸ್ವತಃ ತತ್ವಪದಗಳನ್ನು ರಚಿಸುವ ಕಲೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇವರ ತಂದೆಯೇ ಇವರಿಗೆ ಗುರುವಾದರು. ಆರಂಭಿಕ ಹಂತದಲ್ಲಿ ಶಾಲೆಯ ಮೆಟ್ಟಿಲೇರಿರದ ಮುರಾರ್ಜಿಯವರಿಗೆ ಇವರ ತಂದೆ ಓಬಯ್ಯನವರೇ ಪ್ರಥಮ ಗುರುವಾದರು. ಆ ವೇಳೆಗಾಗಲೇ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದಿದ್ದ ಓಬಯ್ಯನವರು ತಮ್ಮ ಮಗನಿಗೆ ಕೈ ಹಿಡಿದು ಅಕ್ಷರ ಬರೆಯುವುದನ್ನು ಕಲಿಸಿದ್ದರು. ಅದರ ಜೊತೆಯಲ್ಲಿ ತಂದೆ ತಾಯಿಯರಲ್ಲಿ ಕರಗತವಾಗಿದ್ದ ಗಾಯನ ಕಲೆಯ ಪ್ರಭಾವವು ಮುರಾರ್ಜಿಯವರ ಮೇಲಾಗಿತ್ತು. ಮುಂದೆ ಇದನ್ನೆ ತಮ್ಮ ಬದುಕಿನ ಒಂದು ವೃತ್ತಿಯಾಗಿ ಆಯ್ದುಕೊಂಡ ಮುರಾರ್ಜಿಯವರು ಸಾಮಾಜಿಕವಾಗಿ, ರಾಜಕಿಯವಾಗಿ ಹಾಗೂ ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಿದರು. ಈ ಮೂಲಕವಾಗಿ ಜಾನಪದ ಕಲೆಯೊಂದು ಆಧುನಿಕ ಸಂದರ್ಭದಲ್ಲಿ ವಿವಿಧ ನೆಲೆಯಲ್ಲಿ ತನ್ನ ವಿಸ್ತಾರತೆಯನ್ನು ಕಂಡುಕೊಳ್ಳುವಂತಾಯಿತು.
ಹಾಗೆಯೇ ಈ ಜಾನಪದ ಸಾಹಿತ್ಯವು ಒಬ್ಬ ವ್ಯಕ್ತಿಯ ಬದುಕಿಗೆ ಆಸರೆಯಾಗಿ ಸಾಕಷ್ಟು ಕೀರ್ತಿಯನ್ನು ತಂದುಕೊಟ್ಟಿದೆ. ಜಾನಪದವು ನಿಂತ ನೀರಲ್ಲ, ಅದು ಸದಾ ಪ್ರವಹಿಸುತ್ತಿರುವ ಶುದ್ಧ ಜಲ. ಹೀಗಾಗಿ ಈ ಪ್ರಕಾರವು ಬದಲಾದ ಕಾಲಕ್ಕಿ ತಕ್ಕಂತೆ ಭೂತದೊಂದಿಗೆ ವರ್ತಮಾನವನ್ನು ಬೆಸೆಯುತ್ತ ಮನ್ನೆಡೆಯುತ್ತಿರುತ್ತದೆ. ಅದರಂತೆ ಮುರಾರ್ಜಿಯವರ ಬದುಕಿನಲ್ಲಿ ಕೂಡ ನಮ್ಮ ಜಾನಪದವು ಇದೇ ಮಾರ್ಗದಲ್ಲಿ ಮುಂದುವರೆಯುತ್ತ ಬಂದಿದೆ.
ನಮ್ಮ ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ಸಾಮಾಜಿಕ ನಾಟಕವು ಒಂದು ವಿಶಿಷ್ಟ ಪ್ರಕಾರವಾಗಿ ಕಂಡುಬರುತ್ತದೆ. ಈ ನಾಟಕಗಳು ಗ್ರಾಮೀಣ ಬದುಕಿನ ಬಹುಮುಖ್ಯ ಮನರಂಜನ ಮಾಧ್ಯಮವಾಗಿವೆ.
ಮುರಾರ್ಜಿಯವರಿಗೆ ಈ ನಾಟಕ ಪ್ರಪಂಚವು ಮೊದಲು ಆಕರ್ಷಿದ್ದು ಮಾತ್ರ ಅದೊಂದು ಮನರಂಜನೆಯ ಭಾಗವಾಗಿ. ಈ ವೇಳೆಗಾಗಲೆ ಶಾಲಾ ಹಂತದಿಂದ ತನ್ನಲ್ಲಿದ ಸುಮಧುರವಾದ ಗಾಯನ ಕಲೆಯಿಂದ ಶಿಕ್ಷರರು ಹಾಗೂ ತನ್ನ ಸುತ್ತಮುತ್ತಲಿನ ಜನತೆಯಿಂದ ಮೆಚ್ಚುಗೆಯನ್ನು ಗಳಿಸಿದ್ದ ಇವರಿಗೆ ಈ ಸಾಮಾಜಿಕ ನಾಟಕಗಳಲ್ಲಿ ತನ್ನ ಕಂಠವನ್ನು ಪ್ರದರ್ಶಿಸಬೇಕು ಎಂಬ ಕಾತುರ ಹಾಗೂ ತುಡಿತ ಇವರನ್ನು ಬಾದಿಸುತ್ತಿತ್ತು. ಇದಕ್ಕೆ ಕಾರಣವು ಇದೆ. ಈ ಸಂದರ್ಭಕ್ಕಾಗಲೆ ಇವರ ಶಿಕ್ಷಣವು ಮನೆಯಲ್ಲಿ ಕಾಡುವ ಬಡತನದಿಂದ ಕುಂಟಿತವಾಗಿತ್ತು. ತಾನು ಓದಿನಲ್ಲಿ ಮುಂದಿದ್ದರೂ ಓದುವುದಕ್ಕೆ ಸಾಧ್ಯವಾಗದೆ ಜೀತ ಮಾಡುವಂತಹ ಸ್ಥಿತಿಯನ್ನು ತಲುಪಿದಾಗ ಇವರನ್ನು ಆ ನೋವು ಬಲವಾಗಿ ಕಾಡಿರುವ ಸಾಧ್ಯತೆಯೂ ಇದೆ. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಇವರು ನಾಟಕದಂತಹ ಮನರಂಜನಾ ಕ್ಷೇತ್ರದತ್ತ ತಮ್ಮ ಚಿತ್ತವನ್ನು ಕೇಂದ್ರಿಕರಿಸುತ್ತಾರೆ.
ಪುರುಷ ದನಿಯಲ್ಲಿ ಸಹಜವಾಗಿ ಹಾಡುವುದನ್ನು ಬಾಲ್ಯದಿಂದಲೂ ಕರಗತ ಮಾಡಿಕೊಂಡಿದ್ದ ಇವರು ಹೆಣ್ಣಿನ ದನಿಯ ಮಹತ್ವವನ್ನು ಅರಿತು ಅದರಲ್ಲಿಯೂ ಪರಿಣಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಹೆಣ್ಣಿನ ಕಂಠವನ್ನು ಅನುಕರಿಸುವುದು ಅಂದಿಗೆ ಅನಿವಾರ್ಯವು ಆಗಿತ್ತು. ಸಾಧನೆಯ ಮುಂದೆ ಯಾವುದು ಅಸಾಧ್ಯವಲ್ಲ ಎಂಬುದನ್ನರಿತ ಇವರು ಜೀತ ಮಾಡುತ್ತ ಎಮ್ಮೆ ಕಾಯುವ ಸಂದರ್ಭದ ಬಿಡುವಿನ ವೇಳೆಯಲ್ಲಿ ಸಹಜವಾಗಿಯೇ ಹೆಣ್ಣಿನ ಕಂಠದಲ್ಲಿ ಹಾಡುವ ಕಲೆಗಾರಿಕೆಯನ್ನು ಕರಗತ ಮಾಡಿಕೊಳ್ಳುತ್ತಾರೆ. ಏಕಕಾಲಕ್ಕೆ ಹೆಣ್ಣು ಮತ್ತು ಗಂಡಿನ ಸ್ವರವನ್ನು ವ್ಯಕ್ತಪಡಿಸುವುದು ಸುಲಭದ ಮಾತಲ್ಲ. ಆದರೆ ಬದುಕಿನ ಅನಿವಾರ್ಯ ಒತ್ತಡ ಹಾಗೂ ರಂಗಭೂಮಿಯ ಮೇಲಿರುವ ಇವರ ಆಸಕ್ತಿಯಿಂದಾಗಿ ಇವರು ದ್ವಿಕಂಠ ಕಲೆಯಲ್ಲಿ ಸಿದ್ಧಿಯನ್ನು ಪಡೆದುಕೊಂಡು ನಾಡಿನಾದ್ಯಂತ ಸಾಕಷ್ಟು ಹೆಸರು ಮತ್ತು ಕೀರ್ತಿಯನ್ನು ಗಳಿಸಿದ್ದಾರೆ. ಆ ಮೂಲಕವಾಗಿ ಸಂಗೀತದ ವಿವಿಧ ಪ್ರಕಾರಗಳ್ನು ತಮ್ಮ ಕಲೆಯ ವ್ಯಾಪ್ತಿಗೊಳಪಡಿಸಿಕೊಂಡು ಹೊರ ರಾಜ್ಯಗಳಲ್ಲಿಯೂ ತಮ್ಮ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇದಕ್ಕೆ ಪ್ರತಿಫಲವಾಗಿ ‘ಜಿಲ್ಲಾ ಪ್ರಶಸ್ತಿ’, ಯೋಜನಾ ಸೇವಾ ಪ್ರಶಸ್ತಿ, ಹಾಗೂ ಅಕ್ಷರ ಸಂಸ್ಥೆಯ ಅಡಿಯಲ್ಲಿನ ಸಮಾಜ ಸೇವೆಗೆ ರಾಜ್ಯ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಶ್ರೀಯುತ ಮುರಾರ್ಜಿಯವರ ಸುಮಾರು ಈ ಇಪ್ಪತ್ತು ವರ್ಷಗಳ ಅವಧಿಯ ಸಂಗೀತ ಕ್ಷೇತ್ರದ ಪಯಣದಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಸಾಮಾನ್ಯ ಜನತೆಯ ನೋವಿಗೆ ಸ್ಪಂದಿಸುತ್ತ ಬಂದಿದ್ದಾರೆ. ಸಮಾಜ ಸೇವೆಯನ್ನು ತಮ್ಮ ಬದುಕಿನ ಒಂದು ಭಾಗವಾಗಿಸಿಕೊಂಡ ಇವರು ತನಗೆ ಅನ್ನವನ್ನು ನೀಡಿ, ಬದುಕಿಗೆ ಆಶ್ರಯವನ್ನು ಕಲ್ಪಿಸಿದ ಈ ಕಲೆಯನ್ನು ಕೊನೆಯ ಉಸಿರಿರುವರೆಗೂ ಮುನ್ನೆಡೆಸುವ ಆಶಯವೊತ್ತು ಸಾಗುತ್ತಿದ್ದಾರೆ. ಜಾನಪದ ಬದುಕಿನೊಳಗೆ ಬೆಳೆದುಬಂದ ದಲಿತ ಪ್ರತಿಭೆಯೊಂದು ತನ್ನ ಕ್ರಿಯಾಶೀಲ ವ್ಯಕ್ತಿತ್ವದಿಂದ ವಿವಿಧ ಕ್ಷೇತ್ರಗಳನ್ನು ತನ್ನ ವ್ಯಾಪ್ತಿಯೊಳಗೆ ಸೇರಿಸಿಕೊಂಡು ಮುನ್ನಡೆಯುತ್ತಿರುವ ಬಗೆಯು ಜಾನಪದ ಸೊಗಡನ್ನು ಆಧುನಿಕ ಯುಗದಲ್ಲಿ ಜೀವಂತಗೊಳಿಸುವ ವಿಧಾನವಾಗಿ ಕಂಡುಬರುತ್ತದೆ.