ದಿನದ ಸುದ್ದಿ
ಜುಲೈ 1 ರಿಂದ ಜಾರಿಗೆ ಬರಲಿರುವ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳು ಯಾವು ಗೊತ್ತಾ..?
ಸುದ್ದಿದಿನಡೆಸ್ಕ್:ಮೂರು ಹೊಸ ಕ್ರಿಮಿನಲ್ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯಾ ಅಧಿನಿಯಮ್-2023 ಜುಲೈ 1 ರಿಂದ ಜಾರಿಗೆ ಬರಲಿವೆ.
ಕಳೆದ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಹೊಸ ಕ್ರಿಮಿನಲ್ ಕಾನೂನುಗಳು ಭಾರತೀಯ ನಾಗರಿಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಕಾನೂನುಗಳು ಪ್ರತಿಯೊಬ್ಬರಿಗೂ ಸುಲಭವಾಗಿ ಲಭಿಸಬಹುದಾದ, ಬೆಂಬಲ ನೀಡುವ ಹಾಗೂ ಸಮರ್ಥ ನ್ಯಾಯ ವ್ಯವಸ್ಥೆ ಸೃಷ್ಟಿಸುವ ಗುರಿಯನ್ನು ಹೊಂದಿದೆ. ಹೊಸ ಕ್ರಿಮಿನಲ್ ಕಾನೂನುಗಳ ಹೊಸ ನಿಬಂಧನೆಗಳಲ್ಲಿ ಘಟನೆಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡುವುದು.
ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವುದು. ಸಂತ್ರಸ್ಥರು ಎಫ್‌ಐಆರ್‌ನ ಉಚಿತ ನಕಲನ್ನು ಪಡೆಯಲು ಸಾಧ್ಯವಾಗಿಸಲಿದೆ. ಇದರ ಹೊರತಾಗಿ ಬಂಧನದ ಸಂದರ್ಭದಲ್ಲಿ ವ್ಯಕ್ತಿಯು ತನ್ನ ಪರಿಸ್ಥಿತಿಯ ಬಗ್ಗೆ ಆಯ್ಕೆಯ ವ್ಯಕ್ತಿಗೆ ಮಾಹಿತಿ ನೀಡುವ ಹಕ್ಕನ್ನು ಹೊಂದಿರುತ್ತಾನೆ. ಹೊಸ ಕಾನೂನುಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತನಿಖೆಗೆ ಆದ್ಯತೆ ನೀಡಿದ್ದು, ಮಾಹಿತಿಯನ್ನು ದಾಖಲಿಸಿದ 2 ತಿಂಗಳೊಳಗೆ ಸಮಯೋಚಿತವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸುತ್ತದೆ.
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ವಿಧಿವಿಜ್ಞಾನ ತಜ್ಞರು ಗಂಭೀರ ಅಪರಾಧಗಳು ಘಟಿಸಿದ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯವಾಗಿದೆ. ಸಮೆನ್ಸ್ಗಳನ್ನು ಈಗ ವಿದ್ಯುನ್ಮಾನವಾಗಿ ರವಾನಿಸಬಹುದು, ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು, ಕಾಗದಪತ್ರಗಳ ದಾಖಲೆಗಳನ್ನು ಕಡಿಮೆ ಮಾಡಬಹುದು, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರ ನಡುವೆ ಸಮರ್ಥ ಸಂವಹನ ಖಚಿತಪಡಿಸಿಕೊಳ್ಳಬಹುದು.
ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸಿದ್ದು, ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲು ತಂತ್ರಜ್ಞಾನ, ಸಾಮರ್ಥ್ಯವರ್ಧನೆ ಹಾಗೂ ಜಾಗೃತಿ ಮೂಡಿಸುವ ವಿಷಯದಲ್ಲಿ ಸಂಪೂರ್ಣ ಸಜ್ಜುಗೊಂಡಿವೆ ಎಂದು ಮೂಲಗಳು ಹೇಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243