ದಿನದ ಸುದ್ದಿ
ಹೊಸಪೇಟೆ | ಹಣ ದುರ್ಬಳಕೆ ; ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಿ.ಕನಕೇಶಮೂರ್ತಿ ವಿರುದ್ಧ ದೂರು
ಸುದ್ದಿದಿನ,ಹೊಸಪೇಟೆ:ನಗರದ ಶ್ರೀ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೇ ಸರ್ಕಾರಿ ಖಾತೆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ವಂಚಿಸಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಹಾಗೂ ಸಂಬಂಧಿಸಿದ ಲೆಕ್ಕಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಡಾ.ಕೆ.ಎ.ಓಬಳೇಶ್ ಅವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.
ಮಾಹಿತಿಹಕ್ಕು ಅಡಿಯಲ್ಲಿ ಕಾಲೇಜಿನಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದ ಸಂದರ್ಭದಲ್ಲಿ 2019-20 ರಿಂದ 30-04-2022 ರವರೆಗಿನ ಲೆಕ್ಕ ತಪಾಸಣಾ ವರದಿಯಲ್ಲಿ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಕಂಡಿಕೆ ಸಂಖ್ಯೆ II-ಅ-2 ಮತ್ತು 8 ರಂತೆ ರೂ.8,39,288/- (ಎಂಟು ಲಕ್ಷದ ಮೂವತ್ತೊಂಬತ್ತು ಸಾವಿರದ ಎರಡು ನೂರಾ ಎಂಬತ್ತೆಂಟು ರೂಪಾಯಿ)ಗಳ ಅರೇ ಸರ್ಕಾರಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಮುಖ್ಯ ಲೆಕ್ಕಾಧಿಕಾರಿಗಳು (ಆಡಿಟ್), ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿರುವುದು ಕಂಡುಬಂದಿರುತ್ತದೆ.
ಈ ಅಂಶವನ್ನು ಆಧಾರವಾಗಿಟ್ಟುಕೊಂಡು ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಹಣ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಡಾ.ಕೆ.ಎ.ಓಬಳೇಶ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243