ದಿನದ ಸುದ್ದಿ
ದಾವಣಗೆರೆ | ಜೂನ್‍ನಲ್ಲಿ ಕೊರೊನಾ ಹೆಚ್ಚಾಗುವ ಸಂಭವವಿದೆ : ಎಸ್ಪಿ ಹನುಮಂತರಾಯ
ಸುದ್ದಿದಿನ,ದಾವಣಗೆರೆ : ಜೂನ್‍ನಲ್ಲಿ ಕೊರೊನಾ ಹೆಚ್ಚಾಗುವ ಸಂಭವ ಇದ್ದು ಇದನ್ನು ನಿಯಂತ್ರಿಸುವ ಸವಾಲು ನಮ್ಮೆಲ್ಲರ ಮೇಲಿದೆ. ಶೇ.85 ರಲ್ಲಿ ಲಕ್ಷಣವೇ ಕಾಣದಿರುವುದು ಅಪಾಯಕಾರಿ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ಸಾವು ಸಂಭವಿಸದಂತೆ ವೈದ್ಯಕೀಯ ವಲಯ ಕ್ರಮ ಕೈಗೊಳ್ಳಬೇಕು ಎಂದುಎಸ್‍ಪಿ ಹನುಮಂತರಾಯ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮನಸ್ಸು ಮಾಡಿದರೆ ಕೊರೊನಾ ಹಿಮ್ಮೆಟ್ಟಿಸುವುದು ಕಷ್ಟವಲ್ಲ. ಕ್ಷೇತ್ರಗಳಲ್ಲಿ ವೈದ್ಯರು ಇತರೆ ಸಿಬ್ಬಂದಿ ಆಸಕ್ತಿ ತೋರಿಸಿ ಕೆಲಸ ಮಾಡಬೇಕು. ಜಾಲಿನಗರ ಮುಂಬೈನ ದಾರಾವಿಯಂತಹ ಪ್ರದೇಶವೇನಲ್ಲ. ಇಡೀ ಏರಿಯಾವನ್ನು ಸರ್ವೇ ಮಾಡಿ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ಕಟ್ಟುನಿಟ್ಟಿನ ಕ್ರಮ ವಹಿಸುವಲ್ಲಿ ಆರೋಗ್ಯ ಇಲಾಖೆ ಕೊಂಚ ಹಿಂದಿ ಬಿದ್ದಿದೆ.
ಈ ನಿಟ್ಟಿನಲ್ಲಿ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಯೂನಿಯನ್ ಕ್ಯಾಬಿನೆಟ್ ಸೆಕ್ರಟರಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ ಎಸ್‍ಪಿಗಳಿಂದ ಕೋವಿಡ್ ಮಾಹಿತಿ ಪಡೆದು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಇದರ ಗಂಭೀರತೆಯನ್ನು ಅರ್ಥ ಮಾಡಿಕೊಂಡು ವ್ಯವಸ್ಥಿತವಾಗಿ ಎಲ್ಲರೂ ಕೆಲಸ ಮಾಡಬೇಕು ಎಂದರು.
ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗಿದೆ. ಸರ್ವೇ ಸೇರಿದಂತೆ ಎಲ್ಲ ಕಾರ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಆಶಾ, ವೈದ್ಯಕೀಯ ಸಿಬ್ಬಂದಿಗೆ ಎಲ್ಲಾದರೂ ಏನಾದರೂ ತೊಂದರೆ ಆದರೆ ನಿಮ್ಮ ರಕ್ಷಣೆ ನಾವಿದ್ದೇವೆ. ಸೂಕ್ತ ಕ್ರಮ ವಹಿಸುತ್ತೇವೆ.
ಶ್ರದ್ದ ಮತ್ತು ನಿಷ್ಟೆಯಿಂದ ಕರ್ತವ್ಯ ನಿರ್ವಹಣೆ ಆಗಬೇಕು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸೇರಿದಂತೆ ಕೋವಿಡ್‍ಗೆ ಸಂಬಂಧಿಸಿದ ಮಾರ್ಗಸೂಚಿಗಳು ಪ್ರತಿದಿನ ಬದಲಾಗುತ್ತಿರುತ್ತವೆ. ಇದನ್ನು ಗ್ರೂಪ್‍ಗಳಲ್ಲಿ ಶೇರ್ ಮಾಡಲಾಗುತ್ತದೆ. ಇದನ್ನು ಓದಿಕೊಂಡು ಅಪ್‍ಡೇಟ್ ಆಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243