ದಿನದ ಸುದ್ದಿ
ಮದ್ಯಾಹ್ನದ ಸುದ್ದಿ ಮುಖ್ಯಾಂಶಗಳು
ಮದ್ಯಾಹ್ನದ ಸುದ್ದಿ ಮುಖ್ಯಾಂಶಗಳು
- ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಹೊಸ ಪಠ್ಯ ಕ್ರಮ ಅಳವಡಿಸುವುದಿಲ್ಲ. ಆದರೆ ಪಠ್ಯದಲ್ಲಿ ಕೆಲವು ಬದಲಾವಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳಲ್ಲಿ ಉನ್ನತ ವ್ಯಕ್ತಿತ್ವ ರೂಪಿಸಲು ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬೆಳಗಾವಿಯಲ್ಲಿ ಹೇಳಿದ್ದಾರೆ.
- ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ನಾಳೆ ಪ್ರಮುಖ ಸ್ಟಾರ್ಟ್ ಅಪ್ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
- ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ನೆಲೆಯಲ್ಲಿ ಎರಡು ದಿನಗಳ ’ಅಮೃತ ಸಮಾಗಮ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತಿತರರು ಭಾಗವಹಿಸಲಿದ್ದಾರೆ.
- ಅಂತಾರಾಷ್ಟ್ರೀಯ ಮಾನವಸಹಿತ ಗಗನಯಾನ ದಿನವನ್ನು ಇಂದು ಆಚರಿಸಲಾಗುತ್ತಿದೆ. 1961ರ ಏಪ್ರಿಲ್12 ರಂದು ರಷ್ಯಾದ ಬಾಹ್ಯಾಕಾಶ ವಿಜ್ಞಾನಿ ಯೂರಿ ಗಗರಿನ್ ಅವರು ಗಗನಯಾನ ಕೈಗೊಂಡ ಸ್ಮರಣಾರ್ಥ ಪ್ರತಿ ವರ್ಷ ಈ ದಿನಾಂಕದಂದು ಗಗನಯಾನ ದಿನ ಆಚರಿಸಲಾಗುತ್ತಿದೆ.
- ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಇದೇ 14 ಗುರುವಾರದಿಂದ ಆರಂಭಗೊಳ್ಳಲಿರುವ ಪುರುಷರ ಹಾಕಿ ಪ್ರೊ ಲೀಗ್ ಪಂದ್ಯಾವಳಿಗೆ 22 ಪಟುಗಳನ್ನೊಳಗೊಂಡ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದೆ. ಅಮಿತ್ ರೋಹಿದಾಸ್ ನಾಯಕರಾಗಿದ್ದು, ಹರ್ಮನ್ ಪ್ರೀತ್ ಸಿಂಗ್ ಅವರನ್ನು ಉಪ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಪ್ರಥಮ ಪಂದ್ಯದಲ್ಲಿ ಭಾರತ ಜರ್ಮನಿ ವಿರುದ್ಧ ಸೆಣಸಲಿದೆ.
- ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿಂದು ರಾತ್ರಿ 7.30 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ.
- ರಾಜ್ಯದ ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಮತ್ತು ಟೆಂಪಲ್ ಟೂರಿಸಂ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ’ಕರಾವಳಿ ನಿಯಂತ್ರಣ ವಲಯ – ಸಿಆರ್‌ಝೆಡ್’ ನಿಯಮಕ್ಕೆ ತಿದ್ದುಪಡಿ ತರುವ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ನಿನ್ನೆ ತಿಳಿಸಿದ್ದಾರೆ.
- “ತ್ವರಿತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ, ಸೈಬರ್ ಭದ್ರತೆ, ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನಗಳಲ್ಲಿ ಭಾರತಕ್ಕೆ ಅಗಾಧವಾದ ಅವಕಾಶವಿದೆ” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
- ಉಕ್ರೇನ್‌ನಲ್ಲಿ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ-ಅಮೆರಿಕ ನಡುವಿನ ಮಾತುಕತೆ ಮಹತ್ವದ್ದಾಗಿದ್ದು, ಉಕ್ರೇನ್‌ನ ನಾಗರಿಕರ ಸುರಕ್ಷತೆ ಹಾಗೂ ಅವರಿಗೆ ಔಷಧ ಸೇರಿದಂತೆ ಎಲ್ಲ ಮಾನವೀಯ ನೆರವಿನ ತಡೆರಹಿತ ಪೂರೈಕೆಗೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್‌ನ ಅಡಾಲಜ್‌ನಲ್ಲಿರುವ ಅನ್ನಪೂರ್ಣಧಾಮದ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಕೀರ್ಣವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಜನಸಹಾಯಕ ಟ್ರಸ್ಟ್‌ನ ಹೀರಾಮಣಿ ಆರೋಗ್ಯಧಾಮಕ್ಕೂ ಪ್ರಧಾನಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
- ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ನಾಳೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಖನಿಜಾನ್ವೇಷಣಾ ಟ್ರಸ್ಟ್-ಎನ್‌ಎಂಇಟಿ ೪ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಗಣಿ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮತ್ತಿತರರು ಭಾಗವಹಿಸಲಿದ್ದಾರೆ.
- ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಬಠುವಾ ಗ್ರಾಮದಲ್ಲಿ ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಐವರು ಮೃತಪಟ್ಟಿದ್ದಾರೆ. ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243