ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಸುದ್ದಿದಿನ ಕನ್ನಡ ಬೆಳಗಿನ ಪ್ರಮುಖ ಸುದ್ದಿಗಳು

  1. ಇಂದು ಭಾರತದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಹಾರ್‌ಲಾಲ್ ನೆಹರು ಅವರ ಪುಣ್ಯತಿಥಿ. ಸ್ವಾತಂತ್ರ‍್ಯ ನಂತರ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ್ದ ಅವರು, 1964ರ ಮೇ 27 ರಂದು ನಿಧನರಾದರು. 16 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಅವರನ್ನು ಇಂದು ದೇಶ ಸ್ಮರಿಸುತ್ತಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಪಂಡಿತ್ ಜವಹಾರ್‌ಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  2. ಪರಿಸರ, ಸಾಮಾಜಿಕ ಆಡಳಿತಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದೆ ಎಂದು ವಿಮಾನ ನಿಲ್ದಾಣದ ಪರಿಸರ ಮತ್ತು ಸಾಮಾಜಿಕ ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ’ದಿ ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ’ ದಿಂದ ಆಯೋಜಿಸಿದ್ದ ಇಎಸ್‌ಜಿ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲೇ ವಿಮಾನ ನಿಲ್ದಾಣದಲ್ಲಿ ಮಳೆ ನೀರಿನ ಸಂಗ್ರಹದ ಮೂಲಕ ಶೇಖಡ 100ರಷ್ಟು ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.
  3. ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಇಂದು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿಯಲ್ಲಿ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  4. ಜಮ್ಮು-ಕಾಶ್ಮೀರದ ಅನಂತ್ ನಾಗ್-ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಮಟ್ಟದ ಮತದಾನವಾಗಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜನರನ್ನು ಅಭಿನಂದಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆಗೆ ಜನರ ಪಾಲ್ಗೊಳ್ಳುವಿಕೆ ಪ್ರಮುಖ ಕೊಡುಗೆ ನೀಡಲಿದೆ. ಜಮ್ಮು-ಕಾಶ್ಮೀರದ ನಾಗರಿಕರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಹೇಳಿದ್ದಾರೆ.
  5. ಉತ್ತರ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಬೀತಿ ಹಿನ್ನೆಲೆಯಲ್ಲಿ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಹತ್ವದ ಸಭೆ ನಡೆಸಿದರು. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಅಧಿಕಾರಿಗಳು ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
  6. ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಖಾತೆ ರಾಜ್ಯ ಸಚಿವ ಮಹಿಬೂರ್ ರೆಹಮಾನ್ ಮಾತನಾಡಿ, ಜನರ ಸುರಕ್ಷತೆಗಾಗಿ ವ್ಯಾಪಕ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
  7. ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ತಲಾ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಢ್ ಕೇಂದ್ರಾಡಳಿತ ಪ್ರದೇಶದ 1 ಲೋಕಸಭಾ ಕ್ಷೇತ್ರಗಳಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ.
  8. ಕೆನರಾ ಬ್ಯಾಂಕ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತು 45 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.
  9. ರಾಜ್‌ಕೋಟ್ ಅಗ್ನಿ ದುರಂತದಲ್ಲಿ. ಮೃತಪಟ್ಟವರನ್ನು ಗುರುತು ಹಚ್ಚಲು ಡಿಎನ್‌ಎ ಮಾದರಿಯನ್ನು ಅಗತ್ಯ ಪರಿಕ್ಷೆಗಾಗಿ ಕಳುಹಿಸಲಾಗಿದೆ. ಈ ದುರಂತದ ವಿಚಾರವನ್ನು ಗುಜರಾತ್ ಹೈಕೋರ್ಟ್ ಖುದ್ದಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಈ ಪ್ರಕರಣ ಇಂದು ವಿಚಾರಣೆಗೆ ಬರಲಿದೆ.
  10. ಹಿರಿಯ ಬಿಜೆಪಿ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಿರ್ಜಾಪುರ್‌ದಲ್ಲಿ ನಿನ್ನೆ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿ, ಐಎನ್‌ಡಿಐ ಮೈತ್ರಿಕೂಟ ಜಾತಿವಾದಿ ಹಾಗೂ ಕೋಮುವಾದಿ ಎನ್ನುವುದನ್ನು ದೇಶದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ಎನ್‌ಡಿಎ ಬಡವರು, ದುರ್ಬಲರು ಮತ್ತು ಹಿಂದುಳಿದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
  11. ಹಿರಿಯ ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಅವರು, ಹಿಮಾಚಲ ಪ್ರದೇಶದ ಶಿಮ್ಲಾ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಚುನಾವಣಾ ರ‍್ಯಾಲಿ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಹೋರಾಡುತ್ತಿರುವ ಚುನಾವಣೆಯಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version