ದಿನದ ಸುದ್ದಿ
ಪ್ರಮುಖ ಸುದ್ದಿಗಳು
ಪ್ರಮುಖ ಸುದ್ದಿಗಳು
- ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಆಗಸ್ಟ್ 11ರಂದು ಉಪ ಚುನಾವಣೆ ನಡೆಯಲಿದೆ. ಇದೇ 25ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಆಗಸ್ಟ್ 1 ಕೊನೆಯ ದಿನವಾಗಿದೆ. ಆಗಸ್ಟ್ 2 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 4, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
- ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ನಡೆದ ವಿವರಗಳನ್ನು ಸಲ್ಲಿಸಲು ಹೈಕೋರ್ಟ್ ಅಮಿಕಸ್‌ಕ್ಯೂರಿ ಅವರಿಗೆ 2 ವಾರಗಳ ಕಾಲಾವಕಾಶವನ್ನು ನೀಡಿದೆ.
- ಮಂಗಳೂರಿನಲ್ಲಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರ್ರತೆ ವಹಿಸಲಾಗುವುದು. ರಾಜ್ಯದಲ್ಲಿ ವಿಶೇಷ ಕಮಾಂಡೋ ಪಡೆ ರಚಿಸಲಾಗುವುದು ಎಂದರು.
- ಎಲ್ಲರಿಗೂ ಸಂಪರ್ಕ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ನಿರ್ಧಾರಗಳನ್ನು ಅವರು ಶ್ಲಾಘಿಸಿದ್ದಾರೆ. ಸರಣಿ ಟ್ವೀಟ್‌ಗಳಲ್ಲಿ ಅಮಿತ್ ಶಾ, ದೂರದ ಮತ್ತು ಗುಡ್ಡಗಾಡು ಪ್ರದೇಶದ 25 ಸಾವಿರದ 680 ಹಳ್ಳಿಗಳಲ್ಲಿ 4ಜಿ ಮೊಬೈಲ್ ಸಂಪರ್ಕ ಸೇವೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಒದಗಿಸುವ ಯೋಜನೆಗೆ ಸಭೆ ಅನುಮೋದಿಸಿದೆ ಎಂದು ಹೇಳಿದ್ದಾರೆ.
- ಚೆಸ್ ಒಲಿಂಪಿಯಾಡ್‌ನ 44ನೇ ಆವೃತ್ತಿ ಭಾರತ ಆತಿಥ್ಯದಲ್ಲಿ ಇಂದಿನಿಂದ ಆರಂಭವಾಗಲಿದೆ. ಚೆನ್ನೈ ಸಮೀಪದ ಮಮಲ್ಲಪುರಮ್‌ನ ಪಂಚತಾರಾ ಹೋಟೆಲ್‌ನಲ್ಲಿ ಆಗಸ್ಟ್ 19ರವರೆಗೆ ಈ ಚೆಸ್ ಉತ್ಸವ ನಡೆಯಲಿದ್ದು, 346 ದೇಶಗಳ 350 ತಂಡಗಳು ಪಾಲ್ಗೊಳ್ಳಲಿವೆ. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಅಲಭ್ಯತೆಯ ನಡುವೆಯೂ ಭಾರತ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿಂದು ಚೆಸ್ ಒಲಿಂಪಿಯಾಡ್‌ಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
- ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇಂದು ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ. ಮಂಗಳೂರು ಘಟನೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸಂಭ್ರಮಾಚರಣೆಯನ್ನು ರದ್ಧುಗೊಳಿಸಲಾಗಿದೆ.
- ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಪ್ರೊಫೆಸರ್ ಯು.ಆರ್. ರಾವ್ ಅವರ ಜೀವನಾಧಾರಿತ ’ದಿ ಲೈಫ್ ಅಂಡ್ ಟೈಮ್ ಆಫ್ ಯು.ಆರ್. ರಾವ್’ ಕೃತಿ ಇದೇ 30 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆಯಾಗಲಿದೆ. ಹಿರಿಯ ವಿಜ್ಞಾನಿಗಳಾದ ಡಾ. ಕೆ. ಕಸ್ತೂರಿ ರಂಗನ್,
ಡಾ. ಎಂ. ಅಣ್ಣಾದೊರೈ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. - ಬೆಂಗಳೂರು ನಗರದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಅಂಬ್ಯುಲೆನ್ಸ್ ನಿರ್ವಾಹಣಾ ವ್ಯವಸ್ಥೆಯ ಟೆಂಡರ್ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
- ಕ್ಯಾನ್ಸ್‌ರ್ ಪತ್ತೆಗೆ ನೆರವಾಗುವ ಪೆಟ್ ಸ್ಕ್ಯಾನ್ ಘಟಕಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಖಾಸಗಿ ಆಸ್ಪತ್ರೆಯಲ್ಲಿ 25ಸಾವಿರ ರೂಪಾಯಿ ಪಾವತಿಸಬೇಕಾದ ಸ್ಕ್ಯಾನ್‌ನ್ನು ಕೇವಲ 7 ಸಾವಿರದ 200 ರೂಪಾಯಿಗಳಿಗೆ ಮಾಡಲಾಗುವುದು ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ತಿಳಿಸಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮತ್ತು ನಾಳೆ ಗುಜರಾತ್ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಸಬರ್‌ಕಾಂತಾದ ಗಧೋಡಾ ಚೌಕಿಯಲ್ಲಿ ಸಬರ್ ಡೇರಿ ಸೇರಿದಂತೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಬರ್‌ಕಂತದ ಈ ಡೇರಿಯಿಂದ ಹೈನು ಉತ್ಪಾದಕರಿಗೆ ನೆರವಾಗಲಿದೆ. ಡೇರಿಯ ಎರಡು ಘಟಕಗಳನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದು, ಅದರಲ್ಲಿ ಪ್ರತಿದಿನ 120 ಮೆಟ್ರಿಕ್ ಟನ್ ಹಾಲಿನ ಪುಡಿ ಮಾಡುವ ಘಟಕವೂ ಸೇರಿದೆ. ಅಲ್ಲದೆ, ಅವರು ಸಬರ್ ಚೀಸ್ ಮತ್ತು ಡೇರಿ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಇಂದಿನಿಂದ ಎರಡು ದಿನಗಳ ಉಜ್ಬೇಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಅವರು ಅಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮರ್‌ಖಂಡದಲ್ಲಿ ಬರುವ ಸೆಪ್ಟಂಬರ್ 15 ಮತ್ತು 16 ರಂದು ನಡೆಯಲಿರುವ ಶಾಂಘೈ ಸಹಕಾರ ಮಂಡಳಿಯ ಮುಖ್ಯಸ್ಥರ ಸಭೆಯ ಸಿದ್ಧತೆಗಳನ್ನು ಈ ಸಭೆಯಲ್ಲಿ ಪರಾಮರ್ಶಿಸಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243