ದಿನದ ಸುದ್ದಿ
ಕೆಎಸ್‍ಆರ್‍ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ
ಸುದ್ದಿದಿನ,ದಾವಣಗೆರೆ : ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸೊರಗಿದೆ ನಿಜ. ಒಟ್ಟಾರೆ 4 ಸಾವಿರ ಕೋಟಿ ಹಾನಿಗೊಳಗಾಗಿದೆ. ಹೀಗಂದ ಮಾತ್ರಕ್ಕೆ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ. ನೌಕರರ ಬದುಕನ್ನು ಬೀದಿಗೆ ಬರಲು ನಾನು ಬಿಡುವುದಿಲ್ಲವೆಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂ.ಸವದಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗ, ದಾವಣಗೆರೆ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕ.ರಾ.ರ.ಸಾ ನಿಗಮದ ಕೇಂದ್ರ ಬಸ್ ನಿಲ್ದಾಣ ದಾವಣಗೆರೆ ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೆಎಸ್‍ಆರ್‍ಟಿಸಿ ನೌಕರರು ಇತ್ತೀಚೆಗೆ ನಡೆಸಿದ ಹೋರಾಟ ತಪ್ಪಲ್ಲ. ಆದರೆ ಸಮಯ, ಸಂದರ್ಭ ಗಮನದಲ್ಲಿಟ್ಟುಕೊಂಡು ಮಾಡಬೇಕಿತ್ತು. ಪ್ರತಿಭಟನೆಗೂ ಮುನ್ನ ನೋಟಿಸ್ ನೀಡಿ ಮಾಡಬೇಕು. ದಿಢೀರನೆ ಪ್ರತಿಭಟನೆಗೆ ನಿಲ್ಲುವುದು ಸರಿಯಲ್ಲ. ನೋಟಿಸ್ ನೀಡಿದ್ದರೆ ನಾನೇ ತಕ್ಷಣ ತಮ್ಮನ್ನು ಕರೆಸಿ ಸ್ಪಂದಿಸುತ್ತಿದ್ದೆ. ಕೊರೊನಾ ಹಿನ್ನೆಲೆಯಲ್ಲಿ ಸಹ ತಾವು ಕೇಳದಿದ್ದರೂ ನಾನು ಮುಖ್ಯಮಂತ್ರಿಗಳ ಮನವೊಲಿಸಿ ನಾಲ್ಕು ತಿಂಗಳ ವೇತನಕ್ಕೆ ವ್ಯವಸ್ಥೆ ಮಾಡಿದ್ದೆ. ತಾವು ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುವುದು ನಿಮ್ಮ ಹಕ್ಕಾದರೆ ನಾವು ಅದನ್ನು ಪೂರೈಸುವುದು ನಮ್ಮ ಕರ್ತವ್ಯ. ಆದರೆ ನಮ್ಮ ಚಾಲರು, ನಿರ್ವಾಹಕರೇ ತಮ್ಮ ಬಾಳಿಗೆ ಬೆಳಕಾದ ಬಸ್ಸಿಗೆ ಕಲ್ಲು ತೂರಿದ್ದು ಮನಸ್ಸಿಗೆ ಬೇಸರ ತಂದಿತು ಎಂದು ಖೇದ ವ್ಯಕ್ತಪಡಿಸಿದರು.
ಕಾಲ ಹೀಗೆಯೇ ಇರುವುದಿಲ್ಲ. ಅಭಿವೃದಿಯೆಡೆ ನಿಗಮ ಸಾಗಲಿದೆ. ಹಿಂದೆಲ್ಲ ಕೆಲವೇ ಕಂಪೆನಿಗಳ ವಾಹನಗಳು ನಮ್ಮಲ್ಲಿದ್ದವು. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅಂತರಾಷ್ಟ್ರೀಯ ವಾಹನಗಳು ಬರಲಿವೆ. ಎಲೆಕ್ಟ್ರಾನಿಕ್ ಬಸ್‍ಗಳನ್ನು ನಿಗಮದ ಮೂಲಕ ಓಡಿಸಲು ಒಪ್ಪಂದ ಮಾಡಲಾಗಿದೆ. ನಮ್ಮದೇ ಚಾಲಕರು/ನಿರ್ವಾಹಕರು ಈ ಬಸ್‍ಗಳನ್ನು ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಶೀಘ್ರದಲ್ಲಿ 4 ರಿಂದ 6 ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಿ ತರಬೇತಿ ನೀಡಲಾಗುವುದು.
ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಬಸ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. 1 ಬಸ್ ವೆಚ್ಚ ರೂ.2 ಕೋಟಿ ಇದ್ದು ಕೇಂದ್ರ ಸರ್ಕಾರ ರೂ.55 ಲಕ್ಷ ಸಬ್ಸಿಡಿ ನೀಡಲಿದೆ. ಸಬ್ಸಿಡಿಯಲ್ಲಿ ಖರೀದಿಸಿದ ಏಜೆನ್ಸಿ ಬಸ್ ಇಲಾಖೆಗೆ ನೀಡುವ ಒಪ್ಪಂದ ಮಾಡಿಕೊಳ್ಳಲಾಗುವುದು. ತರಬೇತಿ ಹೊಂದಿದ ನಮ್ಮ ಸಿಬ್ಬಂದಿಗಳು ಇದನ್ನು ನಿರ್ವಹಿಸುವರು ಎಂದರು.
ಉತ್ತಮ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ನೀಡುವಂತೆ, ಪ್ರತಿ ಲೀಟರ್‍ಗೆ ಹೆಚ್ಚು ಕಿ.ಮೀ ಓಡಿಸುವ ಚಾಲಕರಿಗೆ 11 ಗ್ರಾಂ ಬಂಗಾರದ ಪದಕ ನೀಡುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಚಾಲಕರು ಉತ್ತಮ ಸೇವೆ ಸಲ್ಲಿಸಬೇಕು. ಸಿಬ್ಬಂದಿಗಳ 10 ಬೇಡಿಕೆಗಳ ಪೈಕಿ 9 ನ್ನು ಪೂರೈಸಲಾಗಿದೆ. ಯಾರೂ ಆತಂತಕ್ಕೆ ಈಡಾಗದೇ ಕರ್ತವ್ಯ ನಿರ್ವಹಿಸಬೇಕು ಎಂದರು.
ಇಲಾಖೆ ಹಾನಿ ಆಗಲು ಕಾರಣ ರಾಜಕೀಯ ಇಚ್ಚಾಶಕ್ತಿ ಕೊರತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗಬಹುದೆಂಬ ಆತಂಕ. ಡೀಸೆಲ್ ದರ, ಟೈರ್ ದರ, ಸಂಬಳ ಎಲ್ಲವೂ ಹೆಚ್ಚಾಗುತ್ತಿದೆ. ಆದರೆ ಆದಾಯ ಹೆಚ್ಚಿಸಲು ಆಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆದಾಯವನ್ನು ಸರಿದೂಗಿಸುವ ಬಗ್ಗೆ ನನ್ನದೇ ಪರಿಕಲ್ಪನೆಯಿದ್ದು ಈ ಪ್ರಕಾರ 4 ನಿಗಮಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
• ಜೀವನದಲ್ಲಿ ಮೂರು ಸಂಗತಿಗಳನ್ನು ಅರಿತು ಬಾಳಬೇಕು. ಹುಟ್ಟು ಸಾವು ಮತ್ತು ಅದರ ನಡುವಿನ ಬದುಕು. ಅಧಿಕಾರ, ಐಶ್ವರ್ಯ, ಆಯುಷ್ಯ ಯಾವುದೂ ಶಾಶ್ವತ ಅಲ್ಲ. ಆದರೆ ಜೀವನದ ಮೌಲ್ಯವನ್ನು ಅರಿತಾಗ ಮಾತ್ರ ನಾವು ಈ ನೆಲದ ಋಣ ತೀರಿಸಲು ಏನಾದರೂ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯ. ನಾವು ಮಾಡುವ ಉತ್ತಮ ಕಾರ್ಯಗಳು ಮಾತ್ರ ಶಾಶ್ವತವಾಗಿರುತ್ತವೆ. ಈ ನಿಟ್ಟಿನಲ್ಲಿ ತಮ್ಮ ಸೇವೆಯಲ್ಲಿ ಅಪಘಾತ ಮತ್ತು ಅಪರಾಧ ಮಾಡದೇ ಬೆಳ್ಳಿ ಪದಕ ಗೌರವಕ್ಕೆ ಭಾಜನರಾದ ಚಾಲಕರಂತೆ ಇತರರೂ ತಾವು ಉತ್ತಮ ಸೇವೆ ಸಲ್ಲಿಸಬೇಕೆಂಬ ಮನೋಭಾವ ಹೊಂದಬೇಕು.
• ಸಂಸದರಿಗೆ ಅಭಿನಂದನೆ : ಈ ಕಾರ್ಯಕ್ರಮ ಆಗುವುದಕ್ಕೆ ಕಾರಣಕರ್ತರು ಸಂಸದ ಜಿ.ಎಂ.ಸಿದ್ದೇಶ್ವರರವರು. ಮೈಸೂರಿಗೆ ಲಭಿಸಬೇಕಿದ್ದ ಸ್ಮಾರ್ಟ್‍ಸಿಟಿ ಯೋಜನೆಯನ್ನು ಕೇಂದ್ರದ ಮೇಲೆ ಒತ್ತಡ ತಂದು ದಾವಣಗೆರೆಗೆ ಲಭಿಸುವಂತೆ ಮಾಡಿದರು. ಇದೀಗ ಸ್ಮಾರ್ಟ್‍ಸಿಟಿಯಿಂದ ರೂ.90 ಕೋಟಿ ಮತ್ತು ಇಲಾಖೆಯಿಂದ 30 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವಾಗುತ್ತಿರುವುದಕ್ಕೆ ನಾನು ಸಂಸದರನ್ನು ಅಭಿನಂದಿಸುತ್ತೇನೆ.
|ಲಕ್ಷ್ಮಣ ಸಂ.ಸವದಿ, ಸಾರಿಗೆ ಸಚಿವರು
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಹೈಟೆಕ್ ಬಸ್‍ನಿಲ್ದಾಣವಾಗುತ್ತಿರುವುದು ಸಂತಸದ ವಿಚಾರ. ಆದರೆ ಬಸ್‍ಸ್ಟ್ಯಾಂಡ್ ಕೆಡವಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ಷಿಪ್ರವಾಗಿ ಕೆಲಸ ಮುಗಿಸಬೇಕೆಂದರು.
ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಒಟ್ಟು 9 ಎಕರೆ ಜಾಗದಲ್ಲಿ ಸ್ಮಾರ್ಟ್‍ಸಿಟಿಯ ರೂ.90 ಕೋಟಿ ಮತ್ತು ಸಾರಿಗೆ ಇಲಾಖೆಯ ರೂ.30 ಕೋಟಿ ಸೇರಿ ಒಟ್ಟು ರೂ.120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದೆ. ನೆಲಮಹಡಿ ಸೇರಿ ಒಟ್ಟು ಆರು ಮಹಡಿಗಳಲ್ಲಿ ನಿಲ್ದಾಣದ ನಿರ್ಮಾಣ ಆಗಲಿದೆ.
ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್, ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಗಳು, ಭದ್ರತಾ ಕೊಠಡಿ, ಸೋಲಾರ್ ಸೌಲಭ್ಯ, ವಾಹನಗಳ ಪಾರ್ಕಿಂಗ್, ಎಲಿವೇಟರ್‍ಗಳು, ಎಸ್ಕಲೇಟರ್‍ಗಳು, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಸಹ ಮಾಡಲಾಗುವುದು ಎಂದರು.
ಬೆಳ್ಳಿ ಪದಕ ಪ್ರದಾನ :ದಾವಣಗೆರೆ ವಿಭಾಗದಲ್ಲಿ 2018 ಮತ್ತು 2019 ನೇ ಸಾಲಿನಲ್ಲಿ ಸತತವಾಗಿ 5 ವರ್ಷ ಅಪಘಾತ/ಅಪರಾಧರಹಿತವಾಗಿ ಹಾಗೂ ಪ್ರತಿ ವರ್ಷ ಕನಿಷ್ಟ 200 ದಿನ ಹಾಜರಾತಿ ಹೊಂದಿ ಸೇವೆ ಸಲ್ಲಿಸಿದ ಒಟ್ಟು 27 ಚಾಲಕರು ಮತ್ತು ಚಾಲಕ/ನಿರ್ವಾಹಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.
ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸಾರಿಗೆ ಮಂಡಳಿ ನಿರ್ದೇಶಕರುಗಳಾದ ರಾಜು, ಆರುಂಡಿ ನಾಗರಾಜ್, ರುದ್ರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್‍ಪಿ ರಾಜೀವ್ ಮುಖ್ಯ ಇಂಜಿನಿಯರ್ ಜಗದೀಶ್ ಚಂದ್ರ ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243