ದಿನದ ಸುದ್ದಿ
ಗಣೇಶೋತ್ಸವಕ್ಕಿಲ್ಲ ಡಿಜೆ ಸದ್ದು; ಎಡಿಜಿಪಿ ಕಡಕ್ ಸೂಚನೆ
ಸುದ್ದಿದಿನ ದಾವಣಗೆರೆ: ಸೆ.13 ರಿಂದ ಆರಂಭವಾಗಲಿರುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಯಾವ ಕಾರಣಕ್ಕೂ ಡಿಜೆಗೆ ಅವಕಾಶ ನೀಡುವುದಿಲ್ಲ. ಡಿಜೆಗೆ ಅನುಮತಿ ನೀಡುವ ಕುರಿತು ಯಾವುದೇ ಒತ್ತಡಗಳಿಗೆ ಮಣಿಯದಂತೆ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ ಮತ್ತು ದಾವಣಗೆರೆ ಸೂಕ್ಷ್ಮ ಪ್ರದೇಶಗಳಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಹೆಚ್ಚು ಗಮನಹರಿಸಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಶಾಂತರೀತಿಯಿಂದ ಹಬ್ಬ ಆಚರಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಕ್ಯಾಪ್ ಬದಲಾವಣೆಗೆ ಪ್ರಸ್ತಾವನೆ ಕೂಡ ಇಲ್ಲ:
ಪೊಲೀಸ್ ಸಿಬ್ಬಂದಿ ಬಳಸುವ ಕ್ಯಾಪ್ ಬದಲಿಸುವ ವಿಚಾರ ಚರ್ಚೆ ಆಗಿದೆಯೇ ಹೊರತು ಅಂತಿಮಗೊಂಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಹೋಗಿಲ್ಲ. ಇಲಾಖೆಯಲ್ಲಿ 23 ಸಾವಿರ ಸಿಬಂದಿ ಕೊರೆತ ಇದ್ದು, ಹಂತ ಹಂತವಾಗಿ ತುಂಬುವ ಕೆಲಸ ನಡೆಯುತ್ತದೆ ಎಂದರು.
ಬಾಂಗ್ಲಾ ನಿವಾಸಿಗಳ ಮೇಲೆ ಹದ್ದಿನ ಕಣ್ಗಾವಲು:
ಬಾಂಗ್ಲಾ ಅಕ್ರಮ ವಾಸಿಗಳ ವಿಷಯವನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ದಾವಣಗೆರೆಯೂ ಸೇರಿದಂತೆ ರಾಜ್ಯಾದ್ಯಂತ ಹದ್ದಿನ ಕಣ್ಣಿಡಲಾಗಿದೆ. ಈ ಬಗ್ಗೆ ಈಗಾಗಲೇ ಕೆಲವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಎಸ್ಪಿ ಆರ್. ಚೇತನ್, ಶಿವಮೊಗ ಮತ್ತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತರರಿದ್ದರು.