ದಿನದ ಸುದ್ದಿ
ಸಿಎಲ್ ರಜೆ ಹಾಕಲು ಅನುಮತಿ ಬೇಕಿಲ್ಲ: ಮುಂಬೈ ಹೈಕೋರ್ಟ್
ಸುದ್ದಿದಿನ ಡೆಸ್ಕ್ : “C.L. is not a leave. No prior permission or No prior sanction is required. It is treated as duty” ಸಿಎಲ್ ಬಗ್ಗೆ ಮುಂಬೈ ಹೈಕೋರ್ಟಿನ ಅಭಿಪ್ರಾಯ ಇದು. ಮಹಾರಾಷ್ಟ್ರ ರಾಜ್ಯ ಸರಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಒಂದು ದಿನದ ಸಾಂದರ್ಭಿಕ ರಜೆಗಾಗಿ ಸಲ್ಲಿಸಿದ ಅರ್ಜಿಯನ್ನು ಕಚೇರಿ ಮುಖ್ಯಸ್ಥರು ತಿರಸ್ಕರಿಸಿದ್ದರು. ಸದತಿ ಅದೇಶದ ಮೇಲೆ ಇಲಾಖೆಗೆ ಸಲ್ಲಿಸಿದ ಮೇಲ್ಮನವಿಯೂ ತಿರಸ್ಕೃತವಾಯಿತು. ಬಳಿಕ ಮುಂಬಯಿಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಹೂಡಿದರು.
ಸದರಿ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಮಾನ್ಯ ಮುಂಬಯಿ ಉಚ್ಚ ನ್ಯಾಯಾಲಯವು ಸದರಿ ನೌಕರರಿಗೆ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ನಿರ್ದೇಶಿಸಿ ಮೇಲ್ಕಾಣಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈಗ ನಮ್ಮ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮ್ಮ ರಾಜ್ಯದಲ್ಲಿ ಸಾಂದರ್ಭಿಕ ರಜೆಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಲು ಯಾವುದೇ ಕಚೇರಿಯ ಮುಖ್ಯಸ್ಥರು ಸಿದ್ಧರಿಲ್ಲ. ಅವರು ಸಾಂದರ್ಭಿಕ ರಜೆಯನ್ನು ರಜೆ ಎಂದೇ ಭಾವಿಸಿದ್ದಾರೆ. ಇದು ಒಂದು ತಪ್ಪು ಕಲ್ಪನೆ.
ಏಕೆಂದರೆ ಸಿಎಲ್ ರಜೆ ಅಧ್ಯಾಯದಲ್ಲಿ (Leave Chapter) ಒಳಗೊಂಡಿಲ್ಲ. ಅದು ಕೆಸಿಎಸ್ಆರ್ ಗೆ ಒಂದು ಅನುಬಂಧ (Annexture B to KCSR) .ಆದುದರಿಂದ ಕೆಸಿಎಸ್ಆರ್ ನಿಯಮ 107ರ ಪ್ರಕಾರ ಯಾವುದೇ ರಜೆಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ ಎಂಬ ನಿಯಮ ಸಿಎಲ್ ಗೆ ಅನ್ವಯಿಸುವುದಿಲ್ಲ . ನೌಕರರಿಗೆ ಆಕಸ್ಮಿಕವಾಗಿ ಒಂದು ದಿನದ ರಜೆ ಬೇಕಾಗಿದ್ದಲ್ಲಿ ಆತ ಮನೆಯಿಂದ ದೂರವಾಣಿ ಮುಖಾಂತರ ಕಚೇರಿಗೆ ಮಾಹಿತಿ ನೀಡಬಹುದು.
ಮುಂಚಿತವಾಗಿ ರಜೆಯನ್ನು ಮಂಜೂರು ಮಾಡಿಲ್ಲವೆಂಬ ಕಾರಣಕ್ಕೆ ಆತ ಸಲ್ಲಿಸಿದ ಸಾಂದರ್ಭಿಕ ರಜೆಯ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಕಚೇರಿ ಮುಖ್ಯಸ್ಥರಿಗೆ ಯಾವುದೇ ಮಾಹಿತಿ ನೀಡದೆ ಗೈರು ಹಾಜರಿ ಆಗಿದ್ದಲ್ಲಿ ಅದನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಆತನ ರಜಾ ಅರ್ಜಿಯನ್ನು ತಿರಸ್ಕರಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401