ದಿನದ ಸುದ್ದಿ
ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ಇಲ್ಲ ; ಜಮ್ಮು-ಕಾಶ್ಮೀರದ ಜನತೆ ಹಾಗೂ ಅಭಿವೃದ್ಧಿ ವಿಚಾರಗಳಿಗೆ ಮಾತ್ರ ಸರ್ಕಾರ ಬದ್ಧ : ಅಮಿತ್ ಶಾ
ಸುದ್ದಿದಿನ ಡೆಸ್ಕ್ : ಪಾಕಿಸ್ತಾನದ ( Pakistan ) ಜೊತೆಗೆ ಸರಕಾರದ ಯಾವುದೇ ಮಾತುಕತೆ ಇಲ್ಲ. ಜಮ್ಮು ಮತ್ತು ಕಾಶ್ಮೀರದ ( Jammu and Kashmir ) ಜನತೆಯೊಂದಿಗೆ ಮಾತ್ರ ಮೋದಿ ಸರಕಾರ ಮಾತನಾಡಲಿದ್ದು, ಯಾವುದೇ ಬೆಲೆ ತೆತ್ತಾದರೂ ಕಾಶ್ಮೀರ ಕಣಿವೆಯಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ನಿನ್ನೆ ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಆಡಳಿತದ ವೈಖರಿಯನ್ನು ಟೀಕಿಸಿದರು. ಕಳೆದ 75ವರ್ಷಗಳಲ್ಲಿ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಹಾಳು ಮಾಡಿವೆ.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಹೆಸರಿಸಿದ ಅಮಿತ್ ಶಾ, ಜನರ ಇಂದಿನ ಸಂಕಷ್ಟದ ಪರಿಸ್ಥಿತಿಗೆ ಅವರೇ ಕಾರಣ ಎಂದು ಹೇಳಿ, ಮೋದಿ ಸರ್ಕಾರ ಮಾತ್ರ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಹಾಗೂ ಕೈಗಾರಿಕಾ ಕ್ರಾಂತಿಯನ್ನು ತಂದಿದೆ ಎಂದು ತಿಳಿಸಿದರು.
ಆ ಮೂರು ಪಕ್ಷಗಳು ಕಳೆದ 75 ವರ್ಷಗಳಲ್ಲಿ ರಾಜ್ಯಕ್ಕೆ ಕೇವಲ 15ಸಾವಿರ ಕೋಟಿ ರೂಪಾಯಿ ತಂದಿದ್ದು, ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕೆ 56 ಸಾವಿರ ಕೋಟಿ ರೂಪಾಯಿ ಬಂಡವಾಳ ತಂದಿದೆ ಎಂದು ಅಮಿತ್ ಶಾ ಹೇಳಿದರು.
ಭಯೋತ್ಪಾದನೆ ಮತ್ತು ಉಗ್ರಗಾಮಿ ಘಟನೆಗಳಲ್ಲಿ ಇದುವರೆಗೆ ಜಮ್ಮು-ಕಾಶ್ಮೀರದಲ್ಲಿ 42 ಸಾವಿರ ಜನರು ಮೃತಪಟ್ಟಿದ್ದಾರೆ. ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಜನರ ಕೈಗೆ ಕಲ್ಲುಗಳು ಮತ್ತು ಬಂದೂಕುಗಳು ನೀಡಿ ದಾರಿ ತಪ್ಪಿಸಿದವು. ಆದರೆ ಪ್ರಸಕ್ತ ಸರ್ಕಾರ ಇಲ್ಲಿನ ಯುವಜನರ ಕೈಗಳಿಗೆ ಲ್ಯಾಪ್‌ಟ್ಯಾಪ್ ಮತ್ತು ಫೋನ್‌ಗಳನ್ನು ನೀಡಿದೆ ಎಂದು ಅವರು ಹೇಳಿದರು.
ಕಾಶ್ಮೀರವನ್ನು ಪ್ರವಾಸಿಗರ ಆಕರ್ಷಕ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಬಾರಿ ಅಕ್ಟೋಬರ್‌ವರೆಗೆ 22 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಗುಲ್‌ಮಾರ್ಗ್ ಪ್ರದೇಶವೊಂದಕ್ಕೆ 13 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿದ್ಯುತ್, ರಸ್ತೆ ಸೇರಿದಂತೆ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲ. ಆದರೆ, ಇಂದು ಜಮ್ಮು-ಕಾಶ್ಮೀರದ ಪ್ರತಿ ಗ್ರಾಮದಲ್ಲಿ ಎಲ್ಲ ಸೌಲಭ್ಯ ಒದಗಿಸಲಾಗಿದ್ದು, 56 ಸಾವಿರ ಕೋಟಿ ರೂಪಾಯಿ ಕೈಗಾರಿಕಾ ಪ್ಯಾಕೇಜ್‌ನಿಂದ ಸುಮಾರು 15 ಸಾವಿರ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243