ನೆಲದನಿ

ನುಡಿಯ ಒಡಲು – 26 | ನುಡಿ ಒಲವು ಮತ್ತು ಧೋರಣೆ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಷಿಕ ಒಲವು ಮತ್ತು ಧೋರಣೆ ಅನ್ನುವುದು ಮಾನಸಿಕ, ಸಾಮಾಜಿಕ ಮತ್ತು ರಾಜಕೀಯ ಪ್ರೇರಣೆಯ ಪರಿಣಾಮದಿಂದ ಉಂಟಾಗಬಹುದಾದ ಒಂದು ‘ಭಾಷಿಕ ಮನಸ್ಥಿತಿ’ ಅಥವಾ ‘ಭಾಷಿಕ ಪರಿಭಾವನೆಗಳು’ ಎನ್ನಲಿಕ್ಕೆ ಅಡ್ಡಿಯಿಲ್ಲ. ಭಾರತದಂತಹ ಬಹುಭಾಷಾ ಸಂದರ್ಭದಲ್ಲಿ ಯಾವುದೇ ನುಡಿಯ ಇತಿಹಾಸ ಅಥವಾ ಪರಂಪರೆಯ ನೆಲೆಗಳನ್ನು ಗುರುತಿಸುವ ಬಗೆಗಳು ಒಂದು ಸ್ಪಷ್ಟವಾದ ವಿಭಾಜೀಕರಣದಿಂದ (ಡೈಕಾಟಾಮೈಜೇಶನ್) ರೂಪಗೊಳ್ಳುತ್ತವೆ. ಅವುಗಳೆಂದರೆ, ‘ಯಜಮಾನ್ಯ ನುಡಿಗಳು’ ಮತ್ತು ‘ಅಧೀನ ನುಡಿಗಳು’ ಎಂದು ಗುರುತಿಸಲಾಗಿದೆ.

ಹಾಗೂ ಈ ವಿಂಗಡನೆಯೇ ಮಾರ್ಗ ಹಾಗೂ ದೇಸಿ ಪರಂಪರೆಗೆ ಕಾರಣವಾಗಿವೆ ಎಂಬುದು ಗಮನಾರ್ಹ. ಇಂತಹ ಉದ್ದೇಶಗಳೇ ಯಾವುದೆ ಒಂದು ಭಾಷೆಗೆ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವ ಕಲ್ಪಿಸುತ್ತವೆ ಎಂಬ ಅಸಡ್ಡೆಯ ವಾದಗಳಿಗೇನು ಕಮ್ಮಿಯಿಲ್ಲ. ನುಡಿಯ ಇಂತಹ ಒಲವು ಮತ್ತು ಧೋರಣೆಯಿಂದ ಕನ್ನಡ ಸೊಲ್ಲರಿಮೆ, ಛಂದಸ್ಸು, ಶಬ್ದಕೋಶ, ಕಾವ್ಯಮೀಮಾಂಸೆ, ಸಾಮಾಜಿಕ ಶಾಸ್ತ್ರಗಳು ಮುಂತಾದವುಗಳನ್ನು ರೂಪಿಸಿದ ಪಂಡಿತರ ಒಲವು ಮತ್ತು ಧೋರಣೆ ಸಂಸ್ಕೃತದ ಮೇಲಿನ ಮೋಹದಿಂದಲೇ ಉಂಟಾಗಿದ್ದರಿಂದ ಅವರು ಸಂಸ್ಕೃತಕ್ಕೆ ಮಾತ್ರ ಸೀಮಿತವಾಗಿದ್ದರು.

ಎತ್ತುಗೆಗಾಗಿ “ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿದ ಪಂಡಿತರು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಹೆಚ್ಚುಕಡಿಮೆ ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ನಿಯಮವನ್ನು ಮಾಡಿಕೊಂಡಿದ್ದರು. ಹೀಗೆ ಮಾಡಲು ಅವರಿಗೆ ಸಂಸ್ಕೃತದ ಮೇಲಿದ್ದ ಕುರುಡು ಅಭಿಮಾನವೇ ಕಾರಣ. ಆ ನಿಯಮದಿಂದ ಕನ್ನಡಕ್ಕೆ ಯಾವ ಪ್ರಯೋಜನವೂ ಇಲ್ಲ” (ಡಿ.ಎನ್.ಎಸ್. ಭಟ್: ದೇಶಕಾಲ: ಸಂ: 15:2008). ಇಂತಹ ಕುರುಡು ಅಭಿಮಾನವು ಪ್ರತಿಯೊಂದು ನುಡಿಗೂ ಅದರದೇ ಆದ ಭಾಷಿಕ ರಚನಾ ನಿಯಮ ಮತ್ತು ಮೂಲತತ್ವಗಳು ಇರುತ್ತವೆ ಅನ್ನುವ ದಿಟವನ್ನೇ ಮರೆಮಾಚುತ್ತವೆ.

ಈ ಭಾಷಿಕ ಅಪಾಯಗಳೇ ಇವತ್ತಿನ ಕನ್ನಡದ ಬರಹ ಮತ್ತು ನುಡಿಯ ನಡುವೆ ಕಂದರವನ್ನು ಹುಟ್ಟಸಿವೆ. ಈ ಧೋರಣೆಗಳನ್ನು ಸರಿಪಡಿಸುವ ಅಥವಾ ಕನ್ನಡದ ಮೂಲತತ್ವ ಮತ್ತು ವಿಕಲ್ಪಗಳನ್ನು ಗುರುತಿಸುವ ಇರಾದೆಯೂ ಇಲ್ಲದೆ ಹೋದದ್ದು ಕನ್ನಡದಂತ ದೇಸಿ ಭಾಷೆಗಳಿಗೂ ಒಂದು ವ್ಯಾಕರಣವಿದಿಯೇ! ಎನ್ನುವ ಲೇವಡಿ ಹೇಳಿಕೆಯನ್ನು ಬಹಳ ತಾತ್ವಿಕ ಪೋಷಾಕಿನಲ್ಲಿ ಹೇಳುವ ಸಂಸ್ಕೃತ ವಿದ್ವಾಂಸರಿಗೇನು ಕಮ್ಮಿಯಿಲ್ಲ. ಈ ಮಾತನ್ನು ಡಿವಿಜಿಯವರು ಹೇಳಿದರೆಂದು ತಮ್ಮ ಹೊತ್ತಿಗೆಯಲ್ಲಿ ಶ್ರೀ ವಿದ್ವಾನ್ ರಂಗನಾಥ ಶರ್ಮಾ (2000:ವ್ಯಾಕರಣಶಾಸ್ತ್ರ) ನಮೂದಿಸಿದ್ದಾರೆ.

ಶರ್ಮಾ ಅವರೂ ಕೂಡ ಇದೇ ಚಿಂತನಾ ವಲಯಕ್ಕೆ ಸೇರಿದವರು ಎಂಬುದು ಗಮನಾರ್ಹ. ಒಂದು ಭಾಷೆಯ ಅಸ್ತಿತ್ವವನ್ನು ಇಂತಹ ಉಡಾಫೆಯ ಗ್ರಹಿಕೆಗಳ ಮೂಲಕ ನಿರ್ನಾಮಗೊಳಿಸುವ ಕ್ರಮ ದಿಟವಾಗಿಯೂ ಶೋಚನಿಯ ಸ್ಥಿತಿ ಎಂದೇ ಹೇಳಬೇಕು. ಈ ನಿಲವು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನಿಮಗೂ ಶಾರೀರಿಕ ಆಕೃತಿ ಮತ್ತು ಸಂರಚನೆ ಇದಿಯೇ ಎಂದು ಬಾಲಿಶವಾಗಿ ಕೇಳಿದಂತಿದೆ. ಈ ಧೋರಣೆಗಳೇ ಭಾಷಾನೀತಿ ಹಾಗೂ ಯೋಜನೆಯನ್ನು ರೂಪಿಸುವ ಪ್ರಭುತ್ವ ಮತ್ತು ವಿದ್ವಾಂಸರ ಮಾನದಂಡಗಳಾಗಿ ರೂಪಗೊಂಡಾಗ, ಆ ಭಾಷಾನೀತಿ ಮತ್ತು ಯೋಜನೆಗಳು ಸಹಜವಾಗಿಯೇ ತಾರತಮ್ಯದ ನೆಲೆಯಿಂದ ಕೂಡಿರುತ್ತವೆ.

ಈ ಕಾರಣಗಳಿಂದಲೇ ಸಾಮಾನ್ಯವಾಗಿ ನಮ್ಮ ಶಾಲೆಗಳಲ್ಲಿ ಕಲಿಸುವ ‘ಸೊಲ್ಲರಿಮೆ/ವ್ಯಾಕರಣ’ ಎಂತಹದು? ಎನ್ನುವುದನ್ನು ಪತ್ತೆಹಚ್ಚಿ ನೋಡಿದಾಗ, ಅದರ ಒಳ ಉದ್ದೇಶಗಳು ಇಲ್ಲವೇ ಹುನ್ನಾರಗಳು ನಿಚ್ಚಳವಾಗುತ್ತವೆ. ಇದು ಸಂಸ್ಕೃತ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಒಗ್ಗಿಸಿ ಕನ್ನಡ ರಚನೆಯ ನೆಲೆಗಳನ್ನು ಅರ್ಥೈಸುವ ಮಾದರಿಯ ಹಿಂದಿನ ಉದ್ದೇಶ ಸಂಸ್ಕೃತವನ್ನು ಸಂಗೋಪಿಸುವುದಾಗಿದೆ ಹಾಗೂ ಆ ಮೂಲಕ ಅಧಿಕಾರ ನಂಟಸ್ತಿಕೆಯ ವಲಯಗಳನ್ನು ಹಾಗೇ ಉಳಿಸಿಕೊಳ್ಳುವ ಬಗೆಯೂ ಆಗಿದೆ.

ಇದನ್ನೆ ಡಿ.ಎನ್.ಎಸ್. ಭಟ್ ಅವರು, “ಕನ್ನಡಿಗರ ಮಾತಿನಲ್ಲಿ ಸಂಸ್ಕೃತಕ್ಕಿಂತ ತೀರ ಬೇರೆಯಾಗಿರುವ ಸೋಲ್ಲರಿಮೆಯ (ವ್ಯಾಕರಣ) ನಿಯಮಗಳು ಬಳಕೆಯಾಗುತ್ತವೆ. ಇವನ್ನೇ ನೇರವಾಗಿ ಕನ್ನಡದ ಉದಾಹರಣೆಗಳನ್ನು ಕೊಟ್ಟು ವಿವರಿಸಿದಲ್ಲಿ ಅವು ಕನ್ನಡಿಗರಿಗೆ ಅರ್ಥವಾಗದ ಕಗ್ಗಂಟೆAದು ಅನಿಸಲಾರದು. ಅಂತಹ ವಿವರಣೆ ಕುತೂಹಲಕಾರಿಯೂ ಆಗಬಲ್ಲದು” (ಮಾತಿನ ಒಳಗುಟ್ಟು:ಪು: 2008) ಈ ಮಾತುಗಳು ಕನ್ನಡಿಗರ ಭಾಷಿಕ ಪ್ರಜ್ಞೆಯ ಪ್ರತಿಪಾದನೆಯಾಗಿವೆ.

ಕನ್ನಡದ ಸಾಂಪ್ರದಾಯಿಕ ವ್ಯಾಕರಣ ರೂಪಗೊಂಡ ಬಗೆಗೂ ಆಧುನಿಕ ವ್ಯಾಕರಣ ರಚನೆಯ ನಡುವೆ ದೊಡ್ಡ ಕಂದರವೊAದು ನರ‍್ಮಾಣವಾಗಿಬಿಟ್ಟಿದೆ. ಸಂಸ್ಕೃತ ಮತ್ತು ಕನ್ನಡದ ನಡುವಿನ ಭಾಷಿಕ ನಂಟಸ್ತಿಕೆ ನಮಗೆ ಇಂದು ಪ್ರಸ್ತುತವಲ್ಲ. ಇಂತಹ ಭಾಷಿಕ ನೆಲೆಯೂ “ಸಂಸ್ಕೃತದ ಆರಾಧನ ನೆಲೆ”ಯಿಂದಲೇ ರೂಪಗೊಂಡಿದ್ದರಿಂದ, ಕನ್ನಡ ಭಾಷಿಕ ನೆಲೆಗಳ ಮಂಡನೆಯ ಕ್ರಮ ಕನ್ನಡ ಪರಂಪರೆಯಲ್ಲಿ ಕಾಣಿಸುತ್ತದೆ.

ಸಂಸ್ಕೃತ ವ್ಯಾಕರಣಕ್ಕೂ ಮತ್ತು ಕನ್ನಡ ವ್ಯಾಕರಣ ಪರಂಪರೆ ರೂಪಗೊಂಡ ಬಗೆಗೂ ಯಾವುದೆ ಸೈದ್ಧಾಂತಿಕ ಉದ್ದೇಶ ಇಲ್ಲದೆ ಹೋಗಿದ್ದರೆ, ಕನ್ನಡ ವ್ಯಾಕರಣವನ್ನು ಸಂಸ್ಕೃತದ ಚೌಕಟ್ಟಿನಲ್ಲಿ ರೂಪಿಸಬೇಕೆಂಬ ಮನಸ್ಥಿತಿಗೆ ಏನು ಕಾರಣ? ಎನ್ನುವ ಪ್ರಶ್ನೆಗೆ ಮಹತ್ವ ಬರುತ್ತದೆ. ಆಧುನಿಕ ಭಾಷಾತತ್ವಶಾಸ್ತ್ರೀಯ ನೆಲೆ ಮತ್ತು ಪರಿಕಲ್ಪನೆಗಳಿಗೆ ಅನುಗುಣವಾಗಿ ಕನ್ನಡ ವ್ಯಾಕರಣವನ್ನು ರೂಪಿಸುವ ಹೊಂದಾಣಿಕೆಯ ಕ್ರಮ ಯಾಕೆ ಸಾಧ್ಯವಾಗಿಲ್ಲ ಅನ್ನುವುದು ಕೂಡ ಮಹತ್ವದ ಪ್ರಶ್ನೆಯೇ ಆಗಿದೆ.

ಈಗ ಕನ್ನಡದ ವ್ಯಾಕರಣವನ್ನು ಪುರ‍್ರಚಿಸಬಹುದಾದ ಸಾಧ್ಯತೆಯ ಆಲೋಚನೆಯ ಕ್ರಮವನ್ನು (ಎತ್ತುಗೆಗಾಗಿ ಕೆ. ವಿ. ನಾರಾಯಣ ಹಾಗೂ ಡಿ.ಎನ್.ಎಸ್. ಭಟ್ ಅವರನ್ನು ಹೆಸರಿಸಬಹುದು) ಸಂಸ್ಕೃತದ ಮೇಲಿನ ದ್ವೇಷ ಹಾಗೂ ಕನ್ನಡದ ಏಳ್ಗೆಯನ್ನು ವಿರೋಧಿಸುವ ಬಗೆಯೆಂದು ಬಿಂಬಿಸಲಾಗಿದೆ. ಕೆವಿಎನ್ ಹಾಗೂ ಡಿಎನ್‌ಎಸ್ ಭಟ್ ಅವರುಗಳ ಆಲೋಚನಾ ಕ್ರಮವೂ ಕನ್ನಡ ನುಡಿಯ ಕಸುವಿನ ಮೇಲಿರುವ ನಂಬಿಕೆಯನ್ನುವುದು ಸಂಸ್ಕೃತಪರ ವಕಾಲತ್ತುವಹಿಸಿ ಮಾತ್ನಾಡುವವರಿಗೆ ಯಾಕೆ ಅರ್ಥವಾಗುತ್ತಿಲ್ಲ.

ನುಡಿಯ ಸ್ವಾಯತ್ತತೆಯನ್ನು ಮರುಪ್ರತಿಪಾದಿಸುವ ಬೇಡಿಕೆಗಳು ಆಯಾ ಸಮುದಾಯದ ಸಾಮಾಜಿಕ, ರಾಜಕೀಯ ನೆಲೆಗಳಿಂದ ರೂಪಗೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಸ್ಪಷ್ಟ. ಇದಕ್ಕಿಂತ ಹೆಚ್ಚಾಗಿ, ಭಾಷಾ ಯೋಜನಕಾರರು ಒಂದು ನುಡಿ ಸಮುದಾಯಕ್ಕೆ ತನ್ನ ಅಂತರ್ಗತ ಭಾಷಿಕ ಪ್ರಜ್ಞೆಯನ್ನು ತನ್ನ ಸೊಲ್ಲರಿಮೆ/ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕ್ರೂಢೀಕರಿಸಿಕೊಳ್ಳುವ ಸ್ವಾತಂತ್ರ್ಯವನ್ನು ದಕ್ಕಿಸಿ ಕೊಡಬೇಕು.

ಭಾಷೆಯ ಸಾಮಾಜಿಕ–ರಾಜಕೀಯ ಅಂತಸ್ತು ಸ್ಥಾವರವಲ್ಲ. ಅದು ಬದಲಾವಣೆಯ ಹೊಣೆಯಾಗಿರುತ್ತೆ. ಏಂಕೆಂದರೆ, ಸಮಾಜ ಮತ್ತು ಸಾಮಾಜಿಕ ವ್ಯವಸ್ಥೆ ಚಲನಶೀಲವಾದದ್ದು. ಪ್ರಾಚೀನ ಕಾಲದಿಂದಲೂ ಭಾರತ ಬಹುಭಾಷಿಕ ಸನ್ನಿವೇಶ ಆದರೆ ಈ ಭಾಷೆಗಳ ನಡುವಿನ ಭಾಷಿಕ ಅಂತಸ್ತು ಕಾಲದೇಶಕ್ಕೆ ಅನುಗುಣವಾಗಿ ಬದಲಾಗುತ್ತಿವೆ. ಈ ಚಲನಶೀಲತೆಯು ಭಾರತದಲ್ಲಿಯ ಭಾಷಿಕ ಬಹುಳತೆಯ ಪ್ರಾಮುಖ್ಯತೆಯ ಲಕ್ಷಣವಾಗಿದೆ. ಭಾಷೆಯ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಯ ನಡುವಣ ನಂಟಸ್ತಿಕೆಗಳು ನುಡಿಯ ಬಹುಳತೆಯನ್ನು ನೆಲೆಗೊಳಿಸುವ ಸಾಧ್ಯತೆಗಳಲ್ಲಿ ಹಲವು ಆಯಾಮಗಳು ಸೇರಿಕೊಂಡಿವೆ.

ಮುಖ್ಯವಾಗಿ, ಭಾರತೀಯತೆ ಎನ್ನುವ ತಿಳುವಳಿಕೆ ಕೇವಲ ಯಾವುದೇ ನುಡಿಯ ಮೂಲಕ ಗುರುತಿಸಿಕೊಂಡ ಜನಸಮುದಾಯಗಳ ಒಂದು ರಾಷ್ಟçವಲ್ಲ. ಆದ್ದರಿಂದ ಇವತ್ತೀನ ಆಧುನಿಕ ಸಂವಿಧಾನ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಈ ವೈವಿಧ್ಯತೆಯ ಗುರುತುಗಳನ್ನು ಹೇಗೆ ಕಾಣಬಹುದು ಎಂಬ ಪ್ರಶ್ನೆಯೊಂದು ಎದುರಾಗುತ್ತದೆ. ಬಹುಸಾಂಸ್ಕೃತಿಕ ಸಮೂಹಗಳ ನಂಬಿಕೆ, ಮೌಲ್ಯ, ರೂಢಿ, ಸಂವೇದನೆಗಳು ಈ ಭಾರತೀಯತೆಯ ದಿಟವಾದ ನೆಲೆಗಳಾಗಿರುವವೋ ಎನ್ನುವ ಸಂದೇಹ ಹುಸಿಯಾಗಿಲಾರದು.

ಆದರೆ ಪುರಾಣ ಮತ್ತು ಮಹಾಕಾವ್ಯಗಳು ರೂಪಿಸಿದ ಸಾಂಸ್ಕೃತಿಕ ವಿವೇಕ, ಮೌಲ್ಯ ಮತ್ತು ಸಂವೇದನೆಗೆ ಮೂಲ ಸಂಸ್ಕೃತ ಭಾಷೆ ಎಂಬ ಹುಸಿ ನಂಬಿಕಯೂ ಕನ್ನಡದಂತಹ ಇತರೆ ನುಡಿಗಳ ಅಸ್ತಿತ್ವವನ್ನು ಶೂನ್ಯವಾಗಿಸಿದೆ. ಇದನ್ನು ಹೊರತುಪಡಿಸಿಯೂ, ಯೋಚಿಸಿ ನೋಡಿದರೆ ಬಹುಮಂದಿಯರನ್ನು ಹಾಗೂ ಎಲ್ಲ ವರ್ಗದ ಮಹಿಳೆಯರನ್ನು ಒಳಗೊಂಡ ಸಂಸ್ಕೃತದ ಯಾವ ಪುರಾಣ ಇಲ್ಲವೇ ಕಾವ್ಯಗಳು ಇರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ.

ನಿರಂತರವಾಗಿ ಜನಸಾಮನ್ಯರನ್ನು ಸಾಮಾಜಿಕವಾಗಿ ನಿಶಿದ್ಧಿಸುತ್ತ ಹಾಗೂ ಶ್ರೇಣೀಕರಿಸುತ್ತು ಬಂದಿರುವ ಕ್ರಮಗಳೇ ಸಂಸ್ಕೃತ ಗುರಿಗಳು ಆಗಿರುತ್ತವೆ. ಈ ಪುರಾಣ ಮತ್ತು ಮಹಾಕಾವ್ಯಗಳು ಸಾಕ್ಷರತೆಯ ಹದ್ದುಮೀರಿ ಜನಸಾಮನ್ಯರ ಬದುಕಿನಲ್ಲಿ ಇಂದಿಗೂ ಹಾಸುಹೊಕ್ಕಾಗಿವೆ. ದಿಟ ಸಾಹಿತ್ಯಕ್ಕೂ ಸಾಕ್ಷರತೆಗೂ ಯಾವುದೇ ಬಗೆಯ ನೇರವಾದ ನಂಟಸ್ತಿಕೆಯಿಲ್ಲ. ಆದರೆ ಸಂಸ್ಕೃತ ನುಡಿಯ ಪರವಾಗಿ ವಕಾಲತ್ತು ವಹಿಸುವ ವರ್ಗಗಳೇ ಸಾಹಿತ್ಯ ಹಾಗೂ ಸಾಕ್ಷರತೆಗೆ ನೇರೆವಾದ ನಂಟನ್ನು ಆರೋಪಿಸಿವೆ.

ಇದಕ್ಕೆ ಕಾರಣ ಜನಸಾಮನ್ಯರ ನುಡಿಯಲ್ಲಿ ಮೌಖಿಕ ಪರಂಪರೆಯಾಗಿ ರೂಪುಗೊಂಡ ಕಾವ್ಯಗಳಿಗೂ ಬರಹದ ಕಾವುಗಳಿಗೂ ಅಂತರಗಳನ್ನು ಹುಟ್ಟುಹಾಕುವ ಹುನ್ನಾರದಿಂದ ಇಂತಹ ಬೆಳವಣಿಗೆಗಳು ಮುಂಚೂಣೆಗೆ ಬಂದಿವೆ. ಇಂತಹ ಬಿಕ್ಕಟ್ಟುಗಳಲ್ಲಿಯೂ ಮೌಖಿಕ ಪರಂಪರೆಯ ನಂಬಿಕೆಯನ್ನು ಶತಮಾನದುದ್ದಕ್ಕೂ ರವಾನಿಸುತ್ತ ಬಂದಿರುವುದೇ ದೇಶಿ ನುಡಿಗಳ ಚಲನಶೀಲತೆಯನ್ನು ತೋರಿಸುತ್ತದೆ. ಇಂತಹ ಮೌಖಿಕ ಪರಂಪರೆಗಳು ಬೇರೆ ಬೇರೆ ನುಡಿಗಳಲ್ಲಿ ಬರಹ ರೂಪಗಳಲ್ಲಿ ಹೊರಬಂದು, ವ್ಯಾಖ್ಯಾನಗಳು ಮಹಾಕಾವ್ಯಗಳ ಸಂವೇದನೆಗಳಾಗಿ ಸಾಮಾಜಿಕ ಭಿನ್ನತೆಗೆ ಕಾರಣವಾಗಿವೆ. ಮಾರ್ಗದ ಆವರಣದಲ್ಲಿ ಸಂಚರಿಸಿ ಬರಹ ನುಡಿಯ ಚಹರೆಗಳಾಗಿ ಮಾರ್ಪಟ್ಟಿರುತ್ತವೆ.

ಇಂತಹ ಐತಿಹಾಸಿಕ ಆಗು ಹೋಗುಗಳ ಸಂಚಾರವು ಸಂಸ್ಕೃತದಿಂದ ಇತರೆ ನುಡಿಗಳಿಗೆ ಹಾಗೂ ಮೌಖಿಕದಿಂದ ಬರಹಕ್ಕೆ ರೂಪಾಂತರಗೊಂಡಿದ್ದರಿಂದ, ಅಡುನುಡಿಯ ರೂಪ ಹಾಗೂ ಅದರ ವಸ್ತವಿಷಯಗಳು ಹೇಗೆ ಆಯಾ ನುಡಿಯಿಗರಿಗೇ ಹೊರತಾದ ನೆಲೆಗಳನ್ನು ಪಡೆದುಕೊಂಡವು ಎಂಬುದನ್ನು ಇಲ್ಲಿ ಕಾಣಬಹುದು. ದಿಟವಾಗಿಯೂ ಈ ನಿಲುವುಗಳನ್ನು ಸಾಂಸ್ಕೃತಿಕ ಅಪಾಯಗಳನ್ನು ಹುಟ್ಟುಹಾಕಿದ ನಿಲುವುಗಳಂದೇ ಹೇಳಬೇಕು.

ಯಾರಾದರೂ ಈ ಪುರಾಣ ಇಲ್ಲವೇ ಕಾವ್ಯಗಳ ವಸ್ತವಿಷಯವನ್ನು ಅರ್ಥೈಸಿಕೊಳ್ಳಬೇಕೆಂದರೆ ಸಂಸ್ಕೃತವನ್ನೇ ಕಲಿಯಬೇಕಾದ ಅಗತ್ಯವಿಲ್ಲ. ಹಾಗಾಗಿ ಪದಕೋಶದ ಮೂಲಕವೇ ಲೋಕಗ್ರಹಿಕೆಗಳನ್ನು ಪಲ್ಲಟಗೊಳಿಸುವ ಹುನ್ನಾರಗಳು ನಡೆಯುತ್ತಲೇ ಬಂದಿವೆ. ಹಾಗಾಗಿ ಕೇವಲ ಪದಕೋಶವನ್ನು ಪಡೆದುಕೊಳ್ಳುವ ಭಾಷೆಯಾಗದೇ ಆಯಾ ಭಾಷೆಯ ಮೂಲಕ ದಕ್ಕುವ ಅನುಭವವನ್ನೂ ಪಲ್ಲಟಗೊಳಿಸುವ ವಿದ್ಯಮಾನವಾಗಿದೆ. ಅದಕ್ಕಾಗಿ ಈ ಪ್ರಕ್ರಿಯೆಯಲ್ಲಿ ಬೇರೆ ಭಾಷಾರೂಪ/ಪದಗಳನ್ನು ಪಡೆದುಕೊಳ್ಳುವ ಬಗೆಯನ್ನು ಪ್ರತಿರೋಧಿಸುವ ನಿಲುವುಗಳು ಎಚ್ಚರಗೊಳ್ಳುವ ಅಗತ್ಯವಿದೆ.

ಆದರೆ ವಸ್ತುವಿಷಯವನ್ನು ಪಡೆಯುವ ಬಗೆಯಲ್ಲಿ ನುಡಿ ಕೇವಲ ಮಧ್ಯವರ್ತಿ ಮಾತ್ರವಾಗದೇ, ಅನುಭವವನ್ನು ಕಸಿ ಮಾಡುವ ನೆಲೆಯೂ ಆಗಿರುತ್ತದೆ. ಹಾಗಾಗಿ ನುಡಿ ಎನ್ನುವುದು ಒಂದ ತಟಸ್ಥವಾದ ವಿದ್ಯಮಾನವಲ್ಲ.
ಸಣ್ಣ-ಪುಟ್ಟ ನುಡಿಗÀಳಿಗೆ ಸಂಸ್ಕೃತದೊಂದಿಗೆ ನೇರ ಸಂಪರ್ಕ ಸಾಧ್ಯವಾಗದೆ ಇದ್ದಾಗ ಮತ್ಯಾವುದೆ ನುಡಿಯಿಂದ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇಂತಹ ನೆಲೆಗಳು ಮೊದಲಾಗುವುದು ಕನ್ನಡದಂತಹ ನುಡಿಗಳಿಂದ, ಸಂಸ್ಕೃತ ಇಲ್ಲವೇ ಇಂಗ್ಲಿಶಿನಂತಹ ನುಡಿಗಳು ಹುಟ್ಟುಹಾಕುವ ಮತ್ತೊಂದು ಬಗೆಯ ಅಪಾಯಗಳು ಇವಾಗಿವೆ. ಈ ಪ್ರಕ್ರಿಯೆಯು ಅಧಿಕಾರದ ನಂಟಸ್ತಿಕೆಯ ಬಗೆಗಳ ಸ್ವರೂಪವನ್ನು ಅರಿಯುವ ಬೇರೆ ಬೇರೆ ಮಾದರಿಗಳು ಎಂದು ಹೇಳಬಹುದು. ಹೌದು ಇಂತಹ ಸಾಂಸ್ಕೃತಿಕ ತಿಳವಳಿಕೆಗಳು ಹಾಗೂ ಸಂವೇದನೆಗಳನ್ನು ಯಾವುದೇ ಒಂದು ನುಡಿಯಿಂದ ಪಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವ ವಾದಕ್ಕೆ ಅವಕಾಶವೇ ಇಲ್ಲ.

ಏಕೆಂದರೆ ಚರಿತ್ರೆಯುದ್ದಕ್ಕೂ ಇಂತಹ ಬೆಳವಣಿಗೆಗಳು ನಡೆದಿರುವುದಕ್ಕೆ ಪುರಾವೆಗಳಿವೆ. ಅಧಿಕಾರದ ಶ್ರೇಣಿಕರಣದಲ್ಲಿ ಸಂಸ್ಕೃತ ಕನ್ನಡದ ಮೇಲಿದ್ದರೇ, ಕನ್ನಡವು ತುಳು, ಕೊಡವ, ಲಂಬಾಣಿ ನುಡಿಗಳ ಮೇಲಿದೆ. ಇವೆರಡೂ ನುಡಿಗಳು ಯಜಮಾನ್ಯ ನುಡಿಗಳೇ ಆದರೆ ಸಂಸ್ಕೃತ ಮತ್ತು ಕನ್ನಡ ನುಡಿಗಳನ್ನು ಹೋಲಿಸಿದರೆ ಸಂಸ್ಕೃತವು ಯಜಮಾನ್ಯ ನುಡಿಯಾದರೆ ಕನ್ನಡವು ಅಧೀನ ನುಡಿಯಾಗಿರುತ್ತದೆ.

ಇದಕ್ಕೆ ಸಾಕ್ಷಿಯಾಗಿ ಶಲ್ಡನ್ ಪೊಲಾಕ್ ಅವರ ಮಾತುಗಳನ್ನು ಗಮನಿಸಬಹುದು, “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತ್ರೀಯ ಮನ್ನಣೆ ದೊರಕದೇ ಹೋಗಿದ್ದರೆ ಮತ್ತು ಭಾಷಾಪರಿಶೀಲನೆಯ ಉಪಕರಣಗಳು (ಅಂದರೆ, ಲಕ್ಷಣ ಗ್ರಂಥಗಳು) ಲಭ್ಯವಾಗದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲ್ಲಿ” (ಶೆಲ್ಡನ್ ಪೊಲಾಕ್: 200: ಪುಟ:11). ಎನ್ನುವ ಈ ವಾದಕ್ಕೆ ಯಾವ ಪ್ರಾಮುಖ್ಯತೆ ಇಲ್ಲ ಎನ್ನುವುದು ನಿಚ್ಚಳವಾಗಿದ್ದರೂ, ಈ ವಾದವನ್ನು ನಂಬುವ ಹಾಗೂ ನಂಬಿಸುವ ಬಗೆಗಳು ಅಸ್ತಿತ್ವದಲ್ಲಿವೆ.

ದಿಟ ಇವು ಎಲ್ಲವೂ ಸಾಂಸ್ಕೃತಿಕ ರಾಜಕಾರಣದ ಪರಿಣಾಮಗಳೇ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ಇತಿಹಾಸವನ್ನು ಮತ್ತೆ ಮತ್ತೆ ಮರುಪ್ರಶ್ನಿಸುವ ತಾತ್ವಿಕತೆ ನಿರಂತರ ಮುಂಚೂಣಿಗೆ ಬರುತ್ತಲೇ ಇದೆ. ಕಾರಣ ಇತಿಹಾಸದ ಹೆಚ್ಚಿನ ನಿರೂಪಣೆಗಳು ಏಕಪಕ್ಷೀಯ ತೀರ್ಮಾನದಿಂದ ರೂಪುಗೊಂಡಿರುತ್ತವೆ. ಇಂತಹ ನಿರ್ಧಾರಕ್ಕೆ ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡುವ ಪರಿಪಾಟವು ಜೊತೆ ಜೊತೆಗೇನೆ ಬೆಳೆದುಬಂದಿವೆ. ಯಾವುದೆ ಸಮುದಾಯ ಇಲ್ಲವೇ ವರ್ಗದ ಶಿಕ್ಷಣ, ನುಡಿ ಹಾಗೂ ಧರ್ಮದ ಮೇಲೆ ತನ್ನ ಪ್ರಾಬಲ್ಯ ಮತ್ತು ಯಜಮಾನಿಕೆಯನ್ನು ಸಾಧಿಸಿರುವುದೇ ಇದಕ್ಕೆ ಕಾರಣ.

ಪ್ರಭುತ್ವಶಕ್ತಿ ಅಥವಾ ಅಧಿಕಾರ ಕೇಂದ್ರಗಳು ರೂಪಿಸುವ ಸಮಾಜ ವ್ಯವಸ್ಥೆಗೆ ಪ್ರತಿರಚನೆಯಾಗಿ ಮನುಷ್ಯಸಮಾಜದಲ್ಲಿ ಸಾಹಿತ್ಯ ಇಲ್ಲವೇ ಸೃಜನಶೀಲ ಪ್ರಕ್ರಿಯೆಗಳು ಕಾಣಿಸಿಕೊಂಡಿವೆ. ಆದರೆ ಎಲ್ಲ ಪ್ರತಿರಚನೆಗಳೂ ವ್ಯವಸ್ಥೆಯ ಅಂಗವಾಗಿ ರೂಪಗೊಂಡಿದ್ದನ್ನು ನಾವು ಚರಿತ್ರೆಯಲ್ಲಿ ಕಾಣುತ್ತೇವೆ ಎಂಬ ವಾದವು ಮುಂಚೂಣೆಯಲ್ಲಿದೆ. ಈ ವಾದಕ್ಕೆ ಪಂಪ, ರನ್ನ, ಬಸವಣ್ಣ, ಕುಮಾರವ್ಯಾಸ ಮುಂತಾದವರನ್ನು ಸಾಕ್ಷಿಯಾಗಿ ಬಳಸಿಕೊಳ್ಳುತ್ತಾರೆ.

ಕನ್ನಡ ಸೃಜನಶೀಲ ಕ್ರಿಯೆಯಲ್ಲಿ ಅಪನಂಬಿಕೆಯನ್ನು ಹೊಂದಿದವರು ಹೀಗೆ ಮಾತಾಡುತ್ತಾರೆ ಎಂಬ ಮತ್ತೊಂದು ತುದಿಯ ವಾದವು ಚಾಲ್ತಿಯಲ್ಲಿದೆ. ಆದರೆ ಈ ಎಲ್ಲ ಸೃಜನಶೀಲ ಸ್ಪೋಟಗಳು ವ್ಯವಸ್ಥೆಯ ಭಾಗವಾಗಿಯೇ ವ್ಯವಸ್ಥೆ ಮತ್ತು ಅಧಿಕಾರಗಳಿಗೆ ಬಹಳ ಸೃಜನಾತ್ಮಕವಾಗಿ ಪ್ರತಿರೋಧವನ್ನು ಒಡ್ಡಿರುವುದನ್ನು ಅಲ್ಲಗಳಿಯುವಂತಿಲ್ಲ. ಈ ಸೃಜನಾತ್ಮಕ ಪ್ರತಿಕ್ರಿಯೆಗಳು ಕನ್ನಡದ ದೇಸಿ ಪ್ರಜ್ಞೆಯನ್ನು ರೂಪಿಸುವಲ್ಲಿ ಮತ್ತು ಅದನ್ನು ನಿರಂತರವಾಗಿ ಕಾಪಾಡುವಲ್ಲಿ ಎಂತಹ ಮಹತ್ವದ ಪಾತ್ರವನ್ನು ವಹಿಸಿರುತ್ತವೆ ಎಂಬುದು ಗಮನಾರ್ಹ.

“ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವದು” ಇಂತಹ ಅನೇಕ ನಿಲುವುಗಳನ್ನು ಪರಸ್ಪರ ವೀರೋಧಾತ್ಮಕ ನಂಟಿನ ಬಗೆಗಳನ್ನಾಗಿ ನಮ್ಮ ಪ್ರಾಚೀನ ಕಾವ್ಯಗಳ ಓದಿನ ಸನ್ನಿವೇಶದಲ್ಲಿ ಚರ್ಚಿಸಲಾಗಿದೆ. ಇಲ್ಲವಾದರೆ ಸಂಸ್ಕೃತ ಮಹಾಕಾವ್ಯಗಳ ಅನುವಾದವೇ ಈ ಕನ್ನಡ ಕಾವ್ಯವೆನ್ನುವ ಉಡಾಫೆಯ ನಿಲುವುಗಳು ಮುಂಚೂಣೆಗೆ ಬಂದಿವೆ. ಕನ್ನಡತನ ಅನ್ನುವುದು ಅದೊಂದು ವಸ್ತುವಿನ ಚಹರೆಯಲ್ಲಿರುವಂತಹ ಸಂಗತಿಯಲ್ಲ. ಬದಲಾಗಿ ಅನುಭವಗಳ ಮೊತ್ತವನ್ನು ಇಡಿಯಾಗಿ ನಿರೂಪಿಸುವ ಇಲ್ಲವೇ ದೇಶಿಯ ಚಹರೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳಿಸುವ ಬಗೆಗಳೂ ಆಗಿರುತ್ತವೆ.

ಹಾಗಾಗಿ ಸಾಂಸ್ಕೃತಿಕ ಬೆಳವಣಿಗೆಗಳನ್ನು ಕೇವಲ ಅಂತರ್-ವಿರೋಧ ನೆಲೆಗಳಲ್ಲಿ ಗ್ರಹಿಸದೇ, ಅವುಗಳನ್ನು ಸಾಂಸ್ಕೃತಿಕ ರಾಜಕಾರಣದ ಪ್ರತಿರಚನೆಗಳಾಗಿ ಅಭಿವ್ಯಕ್ತಗೊಂಡ ಕನ್ನಡದ ಅಸ್ಮಿತೆಯ ರೂಪಗಳು ಎಂದು ಅರಿಯಬೇಕಾದ ಜರೂರಿದೆ. ಇಂತಹ ಸಾಂಸ್ಕೃತಿಕ ಅರಿವನ್ನು ಹಾಗೂ ಸಾಂಸ್ಕೃತಿಕ-ಭಾಷಿಕ ಪ್ರತಿರಚನೆಗಳನ್ನಾಗಿ ಗುರುತಿಸದ ಕುರುಡುತನ ನಮಗೆ ಕವಿದುಕೊಂಡಿರುವುದೇ ಸಂಸ್ಕೃತ ನುಡಿಯ ರಾಜಕಾರಣದಿಂದಲೇ ಎಂದು ಹೇಳಬಹುದು.

ಕನ್ನಡದ ಅಸ್ಮಿತೆಯ ರೂಪಕವನ್ನಾಗಿಯೇ
ಗುರುತಿಸುವ ಕವಿರಾಜಮಾರ್ಗದ ಬಗೆಗಿನ ಊಹಾಪೋಹಗಳನ್ನು ಗಮನಿಸಿದರೆ ಸಂಸ್ಕೃತ ನುಡಿಯು ನೆಲೆಗೊಳಸಿದ ಸಾಂಸ್ಕೃತಿಕ ರಾಜಕಾರಣದ ಪ್ರಭಾವ ಎಷ್ಟೊಂದು ದಟ್ಟವಾಗಿತ್ತೆಂಬುದು ತಿಳಿಯುತ್ತದೆ. ಹಾಗಾಗಿ “ಕವಿರಾಜಮಾರ್ಗವೆಂಬ ಲಕ್ಷಣಗ್ರಂಥವು ಸಂಸ್ಕೃತ ಸಾಹಿತ್ಯ ಹಾಗೂ ಕಾವ್ಯಮೀಮಾಂಸೆಯ ತಿಳುವಳಿಕೆಯಿಂದ ರಚಿತವಾದ ಕೃತಿ ಎಂಬುದನ್ನು ನೆನಪಿಸಿದರೆ, ಕನ್ನಡ ಸಾಹಿತ್ಯದ ಮೊದಲ ಕಾಲ, ದಟ್ಟವಾದ ಸಂಸ್ಕೃತದ ಪ್ರಭಾವಕ್ಕೆ ಒಳಗಾದ ಕಾಲವಾಗಿತ್ತೆಂದು ಸ್ಪಷ್ಟವಾಗುತ್ತದೆ” (ಎಸ್.ಶೆಟ್ಟರ್: ಶಂತಕನಾನು: 2007:ಪು:3).

ಇಂತಹ ಪ್ರಭಾವಗಳಿಂದ ಬಿಡುಗಡೆ ಪಡೆಯಲು ಕನ್ನಡ ನಡೆಸಿದ ಹೋರಾಟಗಳು ಕನ್ನಡ ಬೆಳೆದುಬಂದ ಬಗೆಯಯನ್ನು ಬಿಡಿಸಿನೋಡಿದರೆ, ಕನ್ನಡದ ಕಸುವು ಹಾಗೂ ಸೃಜನಶೀಲತೆಯ ಆಯಾಮಗಳು ಯಾವೆಲ್ಲ ಬಿಕ್ಕಟ್ಟುಗಳನ್ನು ಮೀರಿ ನೆಲೆಗೊಳ್ಳುತ್ತ ಬಂದಿದೆ ಎಂಬ ದಿಟ ನಮ್ಮರಿವಿಗೆ ಬರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version