ನೆಲದನಿ

ನುಡಿ ನಿಲುವುಗಳನ್ನು ತಾತ್ವಿಕಗೊಳಿಸಿದ ಬಗೆಗಳು

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಕೇಶರಾಜನು ಸಂಸ್ಕೃತ ವರ್ಣಮಾಲೆಯ ಆಕಾರಾದಿಯನ್ನೇ ಮೊದಲು ಹೇಳಿ, ನಂತರ “ನಾಲ್ವತ್ತೇಲಾಯ್ತಳೆ ಅಚ್ಚಗನ್ನಡದ ಶುದ್ಧಗೆ” ಎಂದು ನಿರ್ಣಯಿಸುತ್ತಾನೆ. ಇದು ಕೂಡ ಕನ್ನಡ ನುಡಿಯ ತಾತ್ವಿಕತೆಯನ್ನು ನಿರ್ಣಯಿಸಲಾರದೆಂಬುದು ಗಮನಾರ್ಹ. ಕೇಶಿರಾಜನ ಈ ನಿರ್ಧಾರವನ್ನೇ ಕನ್ನಡದ ಮೌಲ್ಯ ನಿರ್ಧಾರವೆಂದು ತಪ್ಪಾಗಿ ಭಾವಿಸಿದುಂಟು.

ಯಾಕೆಂದರೆ, ಇಲ್ಲಿ ಕೇಶಿರಾಜ ಕೇವಲ ಸಂಸ್ಕೃತ ಕನ್ನಡ ವರ್ಣಮಾಲೆಯನ್ನು ವರ್ಗೀಕರಿಸುತ್ತಾನೆ ಹೊರತು ಅವುಗಳ ನಡುವಿನ ವ್ಯಾಕರಣದ ಮೂಲತತ್ವಗಳನ್ನು ವಿವರಿಸುವುದಿಲ್ಲ. “ಒಳವು ಮಹಪ್ರಾಣಂಗಳ್ ವಿಳಸತ್ಕರ್ಣಾಟ ಭಾಷೆಯೋಳ ಕೆಲವು ನಿಜೊಜ್ಜಳಮಾಗಿ” ಎನ್ನುವ ಮಾತುಗಳು, ಮಾಹಾಪ್ರಾಂಗಳು ಕನ್ನಡದಲ್ಲವೊಂದೂ ಪ್ರಾಕೃತ, ಸಂಸ್ಕೃತ ಮೂಲದಿಂದ ಬಂದವುವೆಂದು ವಿವರಿಸುತ್ತ, ಕನ್ನಡ ಭಾಷೆಯು “ಬೇಳ್ಪದ ಕೈವೊಕ್ಕ ನಿಧಿ” ಎಂದು ಶ್ಲಾಘಿಸುತ್ತಾನೆ.

ಕಾರಣ ಕನ್ನಡ ನುಡಿಯು ಯಾವುದೆ ಮಡಿ ಮೈಲಿಗೆಯ ಕಟ್ಟು ಪಾಡುಗಳನ್ನು ಆಚರಿಸುವ ಜಾಯಮಾನದಲ್ಲವೆಂಬ ಕೇಶಿರಾಜನ ಅಭಿಪ್ರಾಯ ನಿಜವಾದರೂ, ಕನ್ನಡ ವ್ಯಾಕರಣಕ್ಕೆ ಸಂಸ್ಕೃತ ಮಾದರಿ ಅಗತ್ಯವಲ್ಲವೆಂಬುದು ವೇಧ್ಯವಾಗದೇ ಹೋಗಿದೆ. ಈ ಧೋರಣೆಯೇ ಕೇಶಿರಾಜನಿಗೆ ಕ್ರಿಯಾಸಮಾಸ, ಸಮಸಂಸ್ಕೃತ, ಅರಿಸಮಾಸ, ಮಹಾಪ್ರಾಣ, ಸಂಸ್ಕೃತ ಸಂಧಿಗಳನ್ನು ಯತೇಚ್ಛವಾಗಿ ಕನ್ನಡಕ್ಕೆ ಒಗ್ಗಿಸಿಕೊಂಡು ಇದು ಕನ್ನಡದ ವಿವರಣಾತ್ಮಕ ವ್ಯಾಕರಣವೆಂಬ ಹೆಗ್ಗಳಿಕೆಯನ್ನು ಮೂಡಿಸಿದ್ದಾನೆ.

ವ್ಯವಹರಿಪುವೆರಡು ರೂಪಿಂದವಕ್ಕರಂ” ಬರಹ ಮತ್ತು ಉಚ್ಚಾರಣೆಯ ನಡುವಿನ ನಂಟಸ್ತಿಕೆಯನ್ನು ಕುರಿತ ಈ ಉಲ್ಲೇಖ ಅಂತರ್-ವಿರೋಧದಿಂದ ಕೂಡಿದೆ ಎನ್ನುವುದು ದಿಟ. ಕನ್ನಡನುಡಿ ಬದಲಾವಣೆ ಕುರಿತ ವಿವರಗಳನ್ನು ನಿಗಾಯಿಟ್ಟು ಪತ್ತೆಹಚ್ಚಿ ನೋಡಿದರೆ, ನುಡಿ ಬದಲಾವಣೆಯ ಹಿಂದಿನ ಪ್ರಭಾವ ಹಾಗೂ ಪ್ರೇರಣೆ ಅರ್ಥವಾಗದೇ ಇರಲಾರದು. ಸಂಸ್ಕೃತವನ್ನು ಸಮಸಂಸ್ಕೃತ ಮತ್ತು ತದ್ಬವ ರೂಪಗಳಲ್ಲಿ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಒಪ್ಪಂದದ ಧೋರಣೆ, ಸಂಸ್ಕೃತ ಮತ್ತು ಸಮಸಂಸ್ಕೃತಗಳನ್ನು ಕನ್ನಡದಲ್ಲಿ ಸಮಾಸವಾಗಿಸದೇ ವಿರೋಧಿಸುವ ಜೈನರು, ತಮ್ಮ ಧೋರಣೆಗಳಲ್ಲಿ ಜೈನರ ವೇದನೆ ಹಾಗೂ ಸಂವೇದನೆ ಎದ್ದು ಕೇಳಿಸುತ್ತವೆ.

ಒಟ್ಟಿನಲ್ಲಿ ತಮ್ಮ ರಕ್ತವೆಂದು ಭಾವಿಸಿದ್ಧ ಕನ್ನಡದ “ರಕ್ತಶುದ್ಧಿ” ಸಂಸ್ಕೃತದ ಬಳಕೆಯಿಂದ ಹಾಳಾಗುವುದೆಂಬ ಭೀತಿ ಇವರಿಗೆ ಮಾತ್ರವಲ್ಲ, ಇಂತಹ ಸಂವೇದನೆಯನ್ನು ರೂಪಿಸಿಕೊಂಡ ಪ್ರತೀ ಕನ್ನಡ ನುಡಿಯಿಗರಿಗೂ ಅನ್ನಿಸುತ್ತದೆ.

ಉದಾ;

“ಪಗನ್ನಡಂ ಪುದುಂಗೊಳೆ
ಕೊಂಸಕ್ಕದಮಂ ತಗುೞ್ಜಿ ಜಾಣ್ಕಿಡೆ ಮುತ್ತುಂ
ಮೆಸುಂ ಕೋದಂತಿರೆ ಪೇಳ್ವಂಗವಿಗಳ ಬುದನರನೆರ್ದೆಗೊಳಿಸುಗುಮೇ ||”-[ನಾಗರ‍್ಮನ ಕಾವ್ಯಾವಲೋಕನ]

ಸಕ್ಕದಮಂ ಪೇಂಳ್ವಡೆ ನೆರೆ
ಸಕ್ಕದಮಂ ಪೇೞ್ಗಿ ಸುದ್ಧಗನ್ನಡದೊಳ್ ತಂ
ದಿಕ್ಕುವುದೆ ಸಕ್ಕದಮಂ
ತಕ್ಕುವುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ||”- [ನಯಸೇನನ ರ‍್ಮಮ್ರುತ]

ದಿಟ ಜೈನ ಕವಿಗಳು ಕನ್ನಡದ ಅರಿವಿನ ಲೋಕವನ್ನು ಹಿಗ್ಗಿಸಿ ಅದಕ್ಕೊಂದು ಸಾಮುದಾಯಿಕ ಗುರುತನ್ನು ಒದಗಿಸಿಕೊಟ್ಟರು. ಈ ಗುರುತುಗಳಲ್ಲಿಯೇ ಸಂಸ್ಕೃತದ ಹೆಜ್ಜೆಗುರುತುಗಳನ್ನು ಹುಡುಕುವ ಧೋರಣೆಯು ನೆಲೆಗೊಂಡಿದೆ. ಹೀಗೆ ನೋಡುವ ಪರಿಪಾಟದಿಂದ ಕನ್ನಡದ ಗುರುತುಗಳ ಬಗೆಗೆ ಗೊಂದಲವನ್ನು ಉಂಟುಮಾಡುವ ಕ್ರಮಗಳೂ ಮುಂಚೂಣೆಗೆ ಬಂದವು. ಇಂತಹದೇ ಇನ್ನೊಂದು ಬಗೆಯ ಜಿಗಿತವನ್ನು ವಚನಕಾರರಲ್ಲಿಯೂ ನೋಡಬಹುದು.

ವಚನ ಸಾಹಿತ್ಯದಲ್ಲಿರುವ ಸಾಂಸ್ಕೃತಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳೊಂದಿಗೆ ಆ ಕಾಲಘಟ್ಟ ರೂಪಿಸಿಕೊಂಡ ಕನ್ನಡದ ಸವಾಲುಗಳನ್ನು ಎದುರಿಟ್ಟುಕೊಂಡು ನೋಡಿದರೂ ಕನ್ನಡದ್ದೇ ಗುರುತುಗಳಿವು ಎಂದು ಗುರುತಿಸಬಹುದು. ವಚನಕಾರರು ಮಡಿವಂತಿಕೆಯ ಬೇಲಿಯನ್ನು ದಾಟಿ ಜನಸಾಮಾನ್ಯರ ಅರುವಿಗೆಟಕುವ ಪರಿಭಾಷೆಯನ್ನು ಆಡುನುಡಿ ಕನ್ನಡದಲ್ಲಿ ಕಸಿ ಮಾಡಿದ ಬಗೆ ಬಹಳ ಮಹತ್ವದ್ದು ಎಂದೇ ಹೇಳಬೇಕು.

ಭಾಷಾ ಶುದ್ಧತೆ ಎನ್ನುವುದು ಇವರಿಗೆ ಯಾವತ್ತು ಸಮಸ್ಯೆ ಅನ್ನಿಸಲಿಲ್ಲ. ಹಾಗಾಗಿ ವಚನ ಸಾಹಿತ್ಯದಲ್ಲಿ ನುಡಿ ಬೆರಕೆ, ನುಡಿ ಜಿಗಿತ ಮತ್ತು ಹೈಬ್ರಿಡೈಜೇ಼ಶನ್‌ನ ಪ್ರಕ್ರಿಯೆಯು ಧಾರಾಳವಾಗಿ ನಡೆದಿದೆ. ಎತ್ತುಗೆಗಾಗಿ “ಬತ್ತೀಸರಾಗವ ಹಾಡಯ್ಯ”, “ಇದಕಾರಂಜುವರು ಇದಕಾರಳಕುವರು ಜಾತಸ್ಯಂ ಮರಣಂ ಧ್ರವಂ ಎಂಬುದಾಗಿ” ಮುಂತಾದವುಗಳನ್ನು ಕಾಣಬಹುದು. ಈ ಭಾಷಿಕ ಧೋರಣೆ ಕನ್ನಡದ ಅಸ್ಮಿತೆ ಹಾಗೂ ನಿರ್ದಿಷ್ಟತೆಯನ್ನು ಕಾಯ್ದುಕೊಂಡಿದ್ದಕ್ಕೆ ಇವೇ ಸಾಕ್ಷಿಗಳು.

ಕನ್ನಡದ ರಾಚನಿಕ ಮತ್ತು ಸಾಂಸ್ಕೃತಿಕ ಸಾಧ್ಯತೆಯನ್ನು ವಿಸ್ತರಿಸಿರುವ ಮಾದರಿಗಳು ಅನನ್ಯ ಇವುಗಳು ನುಡಿ ಉಚ್ಚಾರಣೆಯ ನಡುವಿನ ಕಂದರವನ್ನು ಮೀರುವ ಹಾಗೂ ಮೀರಿದ ಸಾಧ್ಯತೆಗಳನ್ನಾಗಿ ಕಾಣಬಹುದು. ಅದೇ ಸಮಯಕ್ಕೆ ಇವರು ಸಾಮಾಜಿಕತೆ ಮತ್ತು ಭಾಷಿಕ ಅಸ್ಪೃಶ್ಯತೆ ಪ್ರಶ್ನೆ ಎದುರಾದಾಗ, ಮತ್ತು ಸಂಸ್ಕೃತವು ಶೋಷಣೆಯ ಮಾಧ್ಯಮವಾದಾಗ ಸಂಸ್ಕೃತವನ್ನು ನಿರ್ಧಾಕ್ಷಣ್ಯವಾಗಿ ತಿರಸ್ಕರಿಸಿದ ನಿದರ್ಶನಗಳೂ ಇಲ್ಲಿ ಎದ್ದು ಕಾಣುತ್ತವೆ.

ಉದಾ:

“ಕಲ್ಲಿಯ ಹಾಕಿ, ನೆಲ್ಲವ ತಳೆದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ವೆöತವ ಕಲಿತು
ಸಂಸ್ಕೃತದ ಮಾತಿನ ಪಸರವ
ಮುಂದಿಟ್ಟುಕೊಂಡು
ಮತ್ಸöನ ವಕ್ತೃದಲ್ಲಿ ಗ್ರಾಸ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ, ಆತುರವೈರಿ ಮಾರೇಶ್ವರಾ” [ನಗೆಯ ಮಾರಿತಂದೆ]

ಈ ವಚನದ ‘ಆದೇತರ ನುಡಿ’ಯು ಸಂಸ್ಕೃತ ನುಡಿಯ ಪ್ರಾಬಲ್ಯ ಮತ್ತು ಶೋಷಣೆಯ ಧೋರಣೆಯನ್ನು ಉಪೇಕ್ಷಿಸುವ ಸೂಚಕವಾಗಿದೆ. ನುಡಿಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರು ಪೇರುಗಳು ಆಯಾ ಭಾಷೆಗಳ ಮೇಲೆ ಹೇಗೆಲ್ಲ ಪರಿಣಾಮ ಬೀರಿರುತ್ತವೆ ಅನ್ನುವುದನ್ನೂ ಇಲ್ಲಿ ಕಾಣಬಹುದು “ಪ್ರಬಲ ಅಧಿಕಾರವುಳ್ಳ ಸಮುದಾಯದ ಭಾಷೆಗೆ ಮೊದಲು ಮಣೆ ದೊರಕುತ್ತದೆ.

ಹತ್ತು ಹಲವು ಬಗೆಗಳಲ್ಲಿ ಆ ಭಾಷೆ ಬಳಕೆಯಾಗುತ್ತದೆ, ಬೆಳೆಯುತ್ತದೆ. ಬದಲಾದ ಸನ್ನಿವೇಶದಲ್ಲಿ ಅಧಿಕಾರದ ಹಸ್ತಾಂತರವಾದಾಗ ಬೇರೊಂದು ಭಾಷೆಗೆ ಆ ಮನ್ನಣೆ ಒದಗುವುದು. ಸಂಸ್ಕೃತ, ಪರ್ಶಿಯನ್, ಅರಾಬಿಕ್ ಮತ್ತು ಇಂಗ್ಲಿಷ್ ಭಾಷೆಗಳು ಭಾರತದ ಚರಿತ್ರೆಯಲ್ಲಿ ಪಡೆದ ಮನ್ನಣೆಗಳನ್ನು ಗಮನಿಸಿದರೆ ಭಾಷೆಯ ಶ್ರೇಷ್ಠತೆಗೂ ಅದರಿಂದ ಅದಕ್ಕೆ ಒದಗುವ ಮನ್ನಣೆಗೂ ಸಾಮಾಜಿಕ-ರಾಜಕೀಯ ಸಂದರ್ಭಗಳಿಗೂ ಸಂಬಂಧ ಗೋಚರವಾಗುತ್ತದೆ.

ಅಲ್ಲದೆ ಆಯಾ ಭಾಷೆಯು ಪಡೆದ ಮನ್ನಣೆಗೆ ಅದರ ಅಂತರ್ಗತ ಲಕ್ಷಣಗಳಷ್ಟೇ ಕಾರಣವಲ್ಲವೆಂಬುದೂ ತಿಳಿಯುತ್ತದೆ. (ಕೆವಿಎನ್: ವಿಕೋ: 2000:ಪು-8)”. ಚಾರಿತ್ರಿಕ ಕಾರಣಗಳಿಂದ ಕೆಲವು ಭಾಷೆಗಳು ವಿಶೇಷ ಅವಕಾಶ, ಸೌಲಭ್ಯಗಳನ್ನು ಪಡೆದು ಉಳಿದ ಭಾಷೆಗಳಿಗಿಂತ ಶ್ರೇಷ್ಠವೆಂಬ ಜನನಂಬಿಕೆಯ ಮನ್ನಣೆಯನ್ನು ಪಡೆದಿವೆ. ಅಂದರೆ, ಈ ಶ್ರೇಷ್ಠತೆಯನ್ನು ನಿರ್ಧರಿಸಲು, ಗ್ರಹಿಸಲು ಭಾಷಾಶಾಸ್ತ್ರೀಯವಾದ ಯಾವ ಮಾನದಂಡವೂ ಈಗ ಲಭ್ಯವಿಲ್ಲ (ಅದೇ) ಭಾಷೆಯು ಸಾಂಸ್ಕೃತಿಕ ಸನ್ನಿವೇಶದ ಅಂಗವೇ ಆಗಿರುವುದರಿಂದ ಸಾಮಾಜಿಕ ಭಾಷಾಶಾಸ್ತ್ರೀಯ ಒಳನೋಟಗಳನ್ನು ಈ ಚರ್ಚೆಗಳ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ.

ಚರಿತ್ರೆಯ ಪ್ರತಿಯೊಂದು ಘಟ್ಟದಲ್ಲಿಯೂ ಪ್ರಭಾವಶಾಲಿಯಾದ ಒಂದು ಭಾಷೆಯ ಮುಂದಾಳುತನ/ಪ್ರಾಬಲ್ಯವನ್ನು (ಹೆಜಿಮೊನಿ) ಮರುಪರಿಶೀಲಸಬೇಕಿದೆ. ಕನ್ನಡವು ತನ್ನ ಭಾಷಿಕ ‘ರೂಪ’ ಮತ್ತು ‘ನಿರ್ದಿಷ್ಟತೆಯನ್ನು’ ರೂಪಿಸಿಕೊಳ್ಳುವಾಗ ಸಂಸ್ಕೃತ ಭಾಷೆಯ ಮುಂದಾಳುತನದ ಕಾರಣದಿಂದಲೇ ಕನ್ನಡವು ಸಂಸ್ಕೃತ ನುಡಿಯ ನಿರ್ದಿಷ್ಟತೆ ಮತ್ತು ರೂಪನಿಷ್ಠ ಆಕೃತಿಯನ್ನು ಅನುಸರಿಸಬೇಕಾಯ್ತು ಎಂಬ ಸಮಜಾಯಿಸಿ ಕೊಡುವ ರೂಢಿಗಳು ಬೆಳೆದು ಬಂದಿವೆ.

ಒಂದು ಪ್ರಾದೇಶಿಕ ನುಡಿಯ ಅಸ್ಮಿತೆಯ ನಿರ್ಮಾಣದ ಹಂತದಲ್ಲಿ ತನ್ನ ‘ರೂಪ’ ಮತ್ತು ‘ನಿರ್ದಿಷ್ಟತೆ’ಯನ್ನು ಕಂಡುಕೊಳ್ಳುವ ಮಾದರಿ ದಿಕ್ಕುತಪ್ಪಿ ಸಂಸ್ಕೃತದ ಆವರಣದಲ್ಲಿ ಸಿಕ್ಕಿಕೊಂಡಿದೆ ಎಂಬ ದಿಟವನ್ನೂ ಇಲ್ಲಿ ಕಾಣಬಹುದು. ಇದರ ಫಲಿತಗಳು ಕನ್ನಡದ ಬರಹ, ಸಂಪ್ರದಾಯ, ನಂಬಿಕೆ, ಆಚರಣೆ, ಪುರಾಣ, ಪುರಾಣಿಮೆ, ಐತಿಹ್ಯಗಳು ಸಂಸ್ಕೃತೀಕರಣಗೊಂಡಿವೆ.

ಇವತ್ತಿಗೂ ಸಂಸ್ಕೃತದ ಕಪಿಮುಷ್ಠಿಯಿಂದ ಕನ್ನಡ ಹೊರಬರಲಿಕ್ಕೆ ಆಗಿಲ್ಲ. ಇಂತಹ ಮಾದರಿಗಳಿಗೆ ಪರ್ಯಾಯ ಮಾದರಿಗಳನ್ನು ಅಂದರೆ, ಕನ್ನಡದ್ದೇ ಮಾದರಿಗಳನ್ನು ರೂಪಿಸುವ ಡಿ.ಎನ್.ಎಸ್.ಭಟ್ ಹಾಗೂ ಕೆವಿಎನ್ ಅವರ ಆಲೋಚನಾ ಮಾದರಿಗಳನ್ನು ಈಗಾಗಲೇ ಚರ್ಚಿಸಿದಂತೆ ಕನ್ನಡದ ವಿರೋಧಿ ನೆಲೆಗಳಾಗಿ ರೂಪಿಸುವ ಹುನ್ನಾರವೂ ಇವತ್ತು ನಡೆದಿದೆ.

ಕನ್ನಡಕ್ಕೆ ಸಂಸ್ಕೃತ ಎಷ್ಟರಮಟ್ಟಿಗೆ ಅನಿವಾರ್ಯ ಎನ್ನುವುದನ್ನು ಕುರಿತು ಆಲೋಚಿಸಲಿಕ್ಕೆ ಅವಕಾಶವನ್ನೇ ಕೊಡದ ‘ಸಂಸ್ಕೃತ ಪರ ವಿದ್ವಾಂಸರ’ ಪಡೆ ನಿರಂತರ ಕ್ನನಡದ ‘ಪರನೋ-ವಿರೋಧನೋ’ ಎನ್ನುವ ಭಾಷಿಕ ಸಾಂಸ್ಕೃತಿಕ ವೈರುಧ್ಯ ಮತ್ತು ಅಪಾಯವನ್ನು ಹುಟ್ಟಿಸಿದ್ದಾರೆ. ರಾಷ್ಟçಪ್ರಭುತ್ವವು ಕನ್ನಡವನ್ನು, ನೇರವಾಗಿ ಸಂಸ್ಕೃತದ ಅಂಕೆಗೆ ತಂದುಕೊಂಡು, ತಮ್ಮ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅವಿರತ ಪ್ರಯತ್ನ ಮಾಡುತ್ತವೆ ಎನ್ನುವ ‘ಸಾಮಾಜಿಕ ಸಮ್ಮತಿ’ಯು ಕನ್ನಡದ ಸ್ವಂತಿಕೆ ಮತ್ತು ಅನನ್ಯತೆಯ ನಿರ್ಮಾಣದ ಕುಗ್ಗುವಿಕೆಗೆ ಕಾರಣವಾಗಿವೆ.

ಭಾಷಾನೀತಿ ಎನ್ನುವುದು ಯಾವಾಗಲೂ ತಾರತಮ್ಯದ ನೆಲೆಯಿಂದಲೇ ಕೂಡಿದೆ. ಪ್ರಭುತ್ವದ ಭಾಷಾ ನೀತಿ ಮತ್ತು ಸಾಮಾನ್ಯ ಜನರ ಭಾಷಾ ಬಳಕೆಯ ನಡುವೆ ಒಂದು ಸಂಘರ್ಷದ ನೆಲೆ ಇದ್ದೆ ಇರುತ್ತೆ. ಈ ಸಂಘರ್ಷವು ಪ್ರಭುತ್ವ ಮತ್ತು ಸಾಮಾನ್ಯರ ನಡುವಿನ ಅಂತರವನ್ನು ನಿರಂತರವಾಗಿ ಗೋಚರಿಸುತ್ತಲೇ ಬಂದಿರುವುದನ್ನು ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೋಡುತ್ತೇವೆ. ಇಂತಹ ಸಾಂಸ್ಕೃತಿಕ ವ್ಯಂಗ್ಯಕ್ಕೆ ಏನೆಂದು ಹೇಳಬೇಕು? ಭಾಷಿಕ ನಿಲುವುಗಳು ಈ ಬಗೆಯ ಸಾಂಸ್ಕೃತಿಕ ಹುನ್ನಾರಕ್ಕೆ ಬಲಿಪಶುವಾಗುವುದನ್ನು ಹೇಗೆ ತಪ್ಪಿಸಬೇಕು ಎನ್ನುವುದನ್ನು ನಾವೆಲ್ಲ ಯೋಚಿಸುವ ಅಗತ್ಯವಿದೆ ಎಂದು ಮಾತ್ರ ಹೇಳಿದರೆ ಸಾಲದು!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version