ನೆಲದನಿ

ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು ಎರಡು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಒಂದು ರಚನೆ ಮತ್ತೊಂದು ಕ್ರಿಯೆ. ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿ ರೂಪಿಸಿಕೊಂಡ ನುಡಿಯ ರಚನೆ ಮತ್ತು ಕ್ರಿಯೆಯ ವಿಭಿನ್ನ ನೆಲೆಗಳನ್ನು ಸಮಾಜಭಾಷಾಶಾಸ್ತ್ರೀಯ ಮಾದರಿಯಲ್ಲಿ ಬಿಡಿಸಿ ನೋಡಬೇಕಿದೆ.

ಹೀಗೆ ಯಾವುದೇ ನುಡಿಯ ಯಾಜಮಾನಿಕೆ ನೆಲೆಗೊಳ್ಳಲು ಆ ನಾಡಿನ ರಾಜ ಇಲ್ಲವೇ ಅರಸು ಮನೆತನಗಳ ಕೊಡುಗೆಯೂ ಕಾರಣವಾಗಿರದೆ ಇರಲಾರದು. ನುಡಿ ಬಗೆಗಿನ ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಈ ವಿದ್ಯಮಾನಗಳು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳುವ ಮೂಲಕ ನುಡಿಯ ಒಡಲಲ್ಲೇ ಹುದುಗಿರುವ ಅಸಮಾನತೆಗಳನ್ನು ಗುರುತಿಸಬಹುದು.

ಡೈಗ್ಲಾಸಿಂ ಎಂಬ ಅರಿಮೆಪದದ ಮೂಲಕ ನುಡಿಯ ಇಂತಹ ಅಸಮಾನ ನೆಲೆಗಳನ್ನು ಬಿಡಿಸಿ ನೋಡಬಹುದು. ಆದರೆ ಡೈಗ್ಲಾಸಿಯ ಕುರಿತ ಫರ್ಗ್ಯೂಸನ್ (1986:219) ಅವರ ವಿಶ್ಲೇಷಣಾ ಮಾದರಿಗೆ ಸಾಕಷ್ಟು ಮಿತಿಗಳಿರುವುದರಿಂದ ಡೈಗ್ಲಾಸಿಯದ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಇವರ ತಾತ್ವಿಕ ಚೌಕಟ್ಟಿಗೆ ಪರ್ಯಾಯವಾಗಿ ಇನ್ನೊಂದು ಚೌಕಟ್ಟನ್ನು ರೂಪಿಸಿಕೊಂಡು ವಿವರಿಸಬಹುದು.

ಅಂದರೆ ಡೈಗ್ಲಾಸಿಯೆಂಬುದು ಕೇವಲ ಒಂದೇ ನುಡಿಯೊಳಗಣ ಏರುಪೇರುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ನುಡಿಯೊಳಗಿನ ಅಸಮಾನತೆಗೆ ಬೇರೊಂದು ನುಡಿಯೂ ಕಾರಣವಾಗಿರಲೂ ಸಾಧ್ಯವಿದೆ (ಎತ್ತುಗೆಗಾಗಿ ಸಂಸ್ಕೃತ ಕನ್ನಡ ಹಾಗೂ ಸಂಸ್ಕೃತಕ್ಕೆ ಹೊರತಾದ ಕನ್ನಡ ಅಂದರೆ ದೇಶಿ ಕನ್ನಡ). ಆದ್ದರಿಂದ ಯಾವುದೇ ಒಂದು ನುಡಿ ಇಲ್ಲವೇ ಒಳನುಡಿಯು ಬೇರೊಂದು ನುಡಿ ಇಲ್ಲವೇ ಒಳನುಡಿಯ ಪ್ರಾಬಲ್ಯಕ್ಕೆ ಒಳಪಟ್ಟಾಗ ಅಂತಹ ನುಡಿ ರೂಪಾಂತರಗೊಳ್ಳುವ ಬಗೆಗಳು ಯಾವ ಯಾವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಅನ್ನುವ ಪ್ರಕ್ರಿಯೆಯನ್ನೂ ಕೂಡ ಡೈಗ್ಲಾಸಿಯ ಎಂದು ಗುರುತಿಸಿಬಹುದು.

ಈ ಡೈಗ್ಲಾಸಿಯ ಹುಟ್ಟಿಸುವ ಡೈಕಾಟಮಿಯೂ ಕೂಡ ಒಂದು ನುಡಿ ಹಾಗೂ ಒಳನುಡಿಗಳ ನಡುವೆ ಇರುವ ಅಧಿಕಾರ ಮತ್ತು ಸಾಮಾಜಿಕ ಅಂತಸ್ತನ್ನು ಪ್ರತಿನಿಧಿಸುವ ಬಗೆಯೇ ಹೊರತು ಬೇರೇನು ಇರಲಾರದು. ಕನ್ನಡದ ಪ್ರಮಾಣಭಾಷೆ ಎನ್ನುವುದು ಸಂಸ್ಕೃತ ಭೂಯಿಷ್ಠ ಭಾಷಿಕ ಸ್ವರೂಪ. ಇದನ್ನೇ ಕನ್ನಡದ ಉನ್ನತ (ದಿ ಹೈ ವೆರೈಟಿ) ನುಡಿ ಪ್ರಭೇದವೆಂದು ಪರಿಗಣಿಸಿರುವುದು. ಇಂತಹ ನುಡಿ ಸನ್ನಿವೇಶವು ಕನ್ನಡದ ಇತರೆ ಒಳನುಡಿಗಳನ್ನು ನಿಮ್ನ (ದಿ ಲೋ ವೆರೈಟಿ) ಪ್ರಭೇದಗಳನ್ನಾಗಿ ರೂಪಿಸಿರಲಕ್ಕೂ ಸಾಧ್ಯ.

ಈ ಎರಡೂ ಬಗೆಯ ಪ್ರಭೇಧಗಳ ನಡುವಿನ ವ್ಯತ್ಯಾಸಗಳನ್ನು ಫರ್ಗ್ಯೂಸನ್‌ನು ವಿವರಿಸುವ ಮಾದರಿಯಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಫರ್ಗ್ಯೂಸನ್‌ನ ಪ್ರಕಾರ ಡೈಗ್ಲಾಸಿಯ ಎಂಬುದು ಒಂದೇ ನುಡಿಯ ಬೇರೆ ಬೇರೆ ಪ್ರಭೇದಗಳ ನಡುವಣ ಅಂತರಗಳು. ಈ ಅಂತರಗಳನ್ನೇ ಇವನು ಹೈ ಮತ್ತು ಲೋ ಪ್ರಭೇದಗಳೆಂದು ಗುರುತಿಸಿದ್ದಾನೆ. ಇವುಗಳಲ್ಲಿ ಹೈ ವೆರೈಟಿಯೇ ಈ ಮುಂದಿನ ಎಲ್ಲ ವಲಯಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಈ ವಲಯಗಳನ್ನು ನಿಯೋಗ.

ಪ್ರತಿಷ್ಠೆ, ಸಾಹಿತ್ಯ ಪರಂಪರೆ, ಗ್ರಹಿಕೆ, ಪ್ರಮಾಣೀಕರಣ, ನೆಲೆಗೊಳಿಸುವಿಕೆ, ವ್ಯಾಕರಣ, ಶಬ್ದಕೋಶ ಎಂದು ವರ್ಗೀಕರಿಸಿದ್ದಾನೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸಿದಾಗ ಈ ಎರಡೂ ಪ್ರಭೇದಗಳ ನಡುವಿನ ಕಂದರ ಮೇಲೆ ಪಟ್ಟಿ ಮಾಡಿದ ಎಲ್ಲ ನಿಯೋಗಗಳಲ್ಲಿಯೂ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ ದಿಟ. ಆದರೆ ಫರ್ಗ್ಯೂಸನ್‌ನ ಮಾದರಿಗೆ ಹೊರತಾದ ಕನ್ನಡದ ಡೈಗ್ಲಾಸಿಯ ಮಾದರಿಯನ್ನು ಇಲ್ಲಿ ಕಾಣಬಹುದು.

ಈಗಾಗಲೇ ಚರ್ಚಿಸಿದಂತೆ ಕನ್ನಡ ಸನ್ನಿವೇಶದಲ್ಲಿ ಹೈ ವೆರೈಟಿ ಅಂದರೆ ಅದು ಸಂಸ್ಕೃತ ಕನ್ನಡವೇ ಆಗಿರುತ್ತದೆ ಹಾಗೂ ಲೋ ವೆರೈಟಿ ಎಂಬುದು ಅದು ದೇಶಿ ಕನ್ನಡವೇ ಆಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಇಂತಹ ಕನ್ನಡವನ್ನೇ ಮಾರ್ಗ ಹಾಗೂ ದೇಶಿ ಎಂದೂ ವಿಂಗಡಿಸಿರಬಹುದು. ಹೀಗೆ ರೂಪುಗೊಂಡ ಈ ಆಯಾಮಗಳು ಸಾಂಸ್ಕೃತಿಕ, ರಾಜಕೀಯ ಪಲ್ಲಟಕ್ಕೂ ಕಾರಣವಾಗಿವೆ ಎಂಬುದು ಗಮನಾರ್ಹ. ಫರ್ಗ್ಯೂಸನ್‌ನ ಪ್ರಕಾರ ಹೈ ಹಾಗೂ ಲೋ ವೆರೈಟಿಗಳ ನಡುವಣ ಅಂತರ ಯಾವಾಗಲೂ ಅದು ಸ್ಥಿರವಾಗಿರುತ್ತದೆ.

ಅಂದರೆ ಇವನ ಪ್ರಕಾರ ಡೈಗ್ಲಾಸಿಯವನ್ನು ಕುರಿತು ಚರ್ಚಿಸುವುದೆಂದರೆ ಪ್ರಮಾಣ ನುಡಿಯೊಂದರ ಬೆಳವಣಿಗೆ ಹಾಗೂ ಲಕ್ಷಣಗಳನ್ನು ಕುರಿತು ಚರ್ಚಿಸುವುದೇ ಆಗಿದೆ. ಆದರೆ ಬಕ್ತಿನ್‌ನ ಹೆಟ್ರೋಗ್ಲಾಸಿಯ ಪರಿಕಲ್ಪನೆಯೊಟ್ಟಿಗೆ ಡೈಗ್ಲಾಸಿಯವನ್ನು ಹೋಲಿಸಿ ನೋಡಿದರೆ ದಿಟವಾಗಿಯೂ ನುಡಿಯ ಒಡಲ ಉರಿ ಎಂತಹದು ಎಂಬುದು ನಿಚ್ಚಳವಾಗುತ್ತದೆ.

ಬಕ್ತಿನ್‌ನ ಪ್ರಕಾರ ಹೆಟ್ರೋಗ್ಲಾಸಿಯ ಎನ್ನುವುದು ಲೋ ವೆರೈಟಿಯ ಬಹುಳತೆಯನ್ನು ಕುರಿತಾಗಿದೆ ಅಂದರೆ ಹೆಟ್ರೋಗ್ಲಾಸಿಯ ಎಂಬುದು ಅಂಕೆಯಲ್ಲಿಟ್ಟ ನುಡಿ (ಒವರ್‌ರ‍್ಚಿಂಗ್) ಹಾಗೂ ಸಾಹಿತ್ಯಕ ಇಲ್ಲವೇ ಮೇಲ್ಮಟ್ಟದ ನುಡಿ (ಲಿಟರರಿ ಆರ್‌ಎನ್‌ನೋಬೆಲ್ಡ್)ಗಳ ನಡುವಣ ತಿಕ್ಕಾಟವೇ ಆಗಿರುತ್ತದೆ. ಇದನ್ನು ಹೀಗೂ ಹೇಳಬಹುದು, ನುಡಿಯ ಏಕೀಕರಣ ಹಾಗೂ ವಿಕೇಂದ್ರಿಕರಣದ ನಡುವಿನ ತಿಕ್ಕಾಟವೂ ಆಗಿರುತ್ತದೆ. ಸಂವಿಧಾನಬದ್ಧ ಮಾನ್ಯತೆಯನ್ನು ಪಡೆದಿರುವ ಈ ಕೆಳಗಿನ ವಿಂಗಡನೆಯನ್ನು ಗಮನಿಸಿದರೆ ಬಕ್ತಿನ್‌ನ ಈ ಪರಿಕಲ್ಪನೆಯ ಮಹತ್ವದ ಆಯಾಮಗಳು ಯಾವವು ಎಂಬುದು ಎದ್ದುಕಾಣುತ್ತವೆ.

1. ಪ್ರಮುಖ ನುಡಿಗಳು / ರಾಷ್ಟ್ರೀಯ ನುಡಿಗಳು
2. ಪ್ರಾದೇಶಿಕ ನುಡಿಗಳು / ಮೈನಾರಿಟಿ ನುಡಿಗಳು
3. ಶಾಸ್ತ್ರೀಯ / ವಿಶೇಷ ಮಾನ್ಯತೆ ಪಡೆದ ನುಡಿಗಳು

ಸ್ಟೀವರ್ಟ್ (ಲ್ಯಾಂಗ್ವೇಜ್ ಆಪ್ ಟೈಪಾಲಜಿ:1962: ಇಂಟರ್‌ನೆಟ್)ನ ಮಾದರಿಯೂ ಫರ್ಗ್ಯೂಸನ್‌ ನ ಮಾದರಿಯನ್ನು ಮತ್ತಷ್ಟೂ ಸುಧಾಹರಿಸಿ ನುಡಿ ಸನ್ನಿವೇಶದ ಮತ್ತೊಂದು ಬಗೆಯ ನುಡಿಯ ಅಸಮಾನತೆಯನ್ನು ತೋರಿಸುತ್ತದೆ.

ನುಡಿ ಪ್ರಕಾರಗಳು,ಟೈಪ್ಸ್
ವಿಶೇಷತೆಗಳು, ಆ್ಯಟ್ರಿಬ್ಯೂಟ್ಸ್

1. ಪ್ರಮಾಣ ನುಡಿ
2. ದೇಶಿ ನುಡಿ
3. ಒಳನುಡಿ

ವಿಶೇಷತೆಯ ವಿವರಗಳು

1. ಪ್ರಮಾಣ, 2. ಸ್ವಾಯತ್ತತೆ, 3. ಚಾರಿತ್ರಿಕತೆ, 4. ಚೈತನ್ಯಶೀಲತೆ

ಈ ಮಾದರಿಯು ನುಡಿ ಹಾಗೂ ಒಳನುಡಿಗಳ ನಡುವಣ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಕನ್ನಡ ಇಲ್ಲವೇ ಭಾರತದ ಯಾವುದೇ ಒಂದು ನುಡಿಯ ಒಳನುಡಿಗಳಲ್ಲಿಯೇ ತಾರತಮ್ಯದ ನೆಲೆಗಳನ್ನು ಕಾಣಬಹುದು. ಆದ್ದರಿಂದ ಕ್ಲಾಸಿಕಲ್ ನುಡಿಗೆ ಇನ್ನೂ ಹೆಚ್ಚಿನ ಪಾವಿತ್ರö್ಯತೆಯನ್ನು ಆರೋಪಿಸುವ ಹುನ್ನಾರಗಳು ನಡೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೋಶ್ವಾ ಫಿಶ್‌ಮನ್ (1980: ಇಂಟರ್‌ನೆಟ್) ಡೈಗ್ಲಾಸಿಯವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸುತ್ತಾನೆ. ಇವನ ಪ್ರಕಾರ ಡೈಗ್ಲಾಸಿಯ ಎಂಬುದು ಕೇವಲ ಒಂದೇ ನುಡಿಯ ಪ್ರಭೇದಗಳ ನಡುವಿನ ಸನ್ನಿವೇಶ ಮಾತ್ರವಾಗದೇ ಅದು ಬೇರೆ ಬೇರೆ ನುಡಿಗಳ ನಡುವಣ ನುಡಿ ಸನ್ನಿವೇಶವೂ ಆಗಿರುತ್ತದೆ.

ಬಹುಭಾಷಿಕ ಸನ್ನಿವೇಶದಲ್ಲಂತೂ ಹೈ ಹಾಗೂ ಲೋ ವೆರೈಟಿಗಳು ಯಾವುದೇ ಜೈವಿಕ ನಂಟಸ್ತಿಕೆಯನ್ನು ಹೊಂದದ ನುಡಿ ಪ್ರಭೇದಗಳೂ ಆಗಿರುತ್ತವೆ, ಎತ್ತುಗೆಗಾಗಿ ಸಂಸ್ಕೃತ ಇಲ್ಲವೇ ಸಂಸ್ಕೃತ ಕನ್ನಡ (ಹೈ ವೆರೈಟಿ) ಹಾಗೂ ಕನ್ನಡ (ಲೋ ವೆರೈಟಿ) ಆಗಿರುತ್ತವೆ. ಫಿಶ್‌ಮನ್‌ನ ಈ ವಿಶ್ಲೇಷಣೆಯನ್ನು ವಿಸ್ತೃತ ಡೈಗ್ಲಾಸಿಯ ಓದು ಎಂದು ಗುರುತಿಸಲಾಗಿದೆ. ದ್ವಿಭಾಷಿಕ, ಬಹುಭಾಷಿಕ ಸನ್ನಿವೇಶದಲ್ಲಿಯ ಡೈಗ್ಲಾಸಿಯ ಕುರಿತು ಇವನ ಓದುಗಳು ಹೊಸ ಬಗೆಯ ದಾರಿಗಳನ್ನು ತೋರಿಸಿವೆ ಎಂದೇ ಹೇಳಬೇಕಾಗುತ್ತದೆ.

ಒಂದು ಕಡೆಗೆ, ಸಾರ್ವತ್ರಿಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ ಕನ್ನಡದ ಗುರುತನ್ನು ನೆಲೆಗೊಳಿಸುವ ಹಂಬಲದಲ್ಲಿ ಹೊರಟ ಕವಿರಾಜಮಾರ್ಗಕಾರನಿಗೆ ಬೇಕಾದಷ್ಟು ಸಾಂಸ್ಕೃತಿಕ ರಾಜಕೀಯ ಗುರಿಗಳೂ ಇದ್ದಿರಬಹುದು. ಈ ಗುಂಗಿನಿಂದ ಮಾರ್ಗಕಾರನು ಕನ್ನಡದ ರಾಚನಿಕ ಸ್ವರೂಪವನ್ನು ಪುರ‍್ರಚಿಸುವ ಮಹತ್ತರ ಉದ್ದೇಶವನ್ನು ಇಟ್ಟಿಕೊಂಡಿದ್ದರಬಹುದು. ಆದರೆ ಈ ಬಗೆಯ ನುಡಿಯ ಧೋರಣೆಯನ್ನು ಕೂಡ ಸಂಸ್ಕೃತ ವಿದ್ವಾಂಸರು ಲೆಕ್ಕಿಸದೆ ಮಾರ್ಗಕಾರನನ್ನು ಕೇವಲ ಅನ್ಯಭಾಷೆಗಳಿಂದ ಪಡೆಯುವ ಜಾಗದಲ್ಲಿ ನಿಲ್ಲಿಸಿದ್ದಾದರೆ.

ಈ ಮಾತುಗಳನ್ನು ಗಮನಿಸಿದರೇ ಇದು ಇನ್ನೂ ನಿಚ್ಚಳಗೊಳ್ಳುತ್ತದೆ. “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತಿçಯ ಮನ್ನಣೆ ದೊರಕದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ” (ಶೆಲ್ಡನ್ ಪೊಲಾಕ್: 2000: ಪುಟ:11). ಎಂದೂ ವಿಶ್ಲೇಷಿಸಿದ ಬಗೆ ಸಂಸ್ಕೃತ ತನ್ನೆಲ್ಲ ನುಡಿಯ ಕಸುವನ್ನು ಕನ್ನಡಕ್ಕೆ ದತ್ತಿಯಾಗಿ ಕೊಟ್ಟಿದೆ ಎನ್ನುವಂತಿದೆ. ಇಂತಹ ಭಾಷಿಕ ಅಧಿಕಾರ ಮತ್ತು ಯಜಮಾನಿಕೆಯನ್ನು ಸಂಸ್ಕೃತವು ಚರಿತ್ರೆ ಉದ್ದಕ್ಕೂ ಕನ್ನಡದಂತಹ ನುಡಿಗಳ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದಿದೆ.

ತನ್ನ ಅಧಿಕಾರ ಹಾಗೂ ಯಜಮಾನಿಕೆಯನ್ನು ಸಾಧಿಸಿರುವ ರೀತಿಯನ್ನು ಈ ಮೇಲಿನ ಪೊಲಾಕ್ ಅವರ ಮಾತುಗಳಿಂದ ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಧೋರಣೆ ಕನ್ನಡದ ಅನನ್ಯತೆ ಕಟ್ಟುವ ಮಾರ್ಗಕಾರನ ತಾತ್ವಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಹುಸಿಗೊಳಿಸುವ ಸೂಚನೆಯನ್ನೂ ನೀಡುತ್ತದೆ. ಇದು ಕನ್ನಡದಂತಹ ನುಡಿಯ ಜೀವಂತಿಕೆ ಮತ್ತು ಸ್ವಂತಿಕೆಯನ್ನು ನಾಶಮಾಡಿ ತನ್ನ ಭಾಷಿಕ ಅಧಿಕಾರವನ್ನು ಮುಂದುವರಿಸುವ ಅಪಾಯದ ಸೂಚನೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡದ ಅರಸು ಮನೆತನಗಳಾದ ರಾಷ್ಟçಕೂಟ, ಚಾಲುಕ್ಯ, ಹೊಯ್ಸಳ ಇವರು ತಮ್ಮ ರಾಜಕೀಯ-ಸಾಂಸ್ಕೃತಿಕ ಸಂವಹನೆಗಾಗಿ ಕನ್ನಡ ನುಡಿಗೆ ಮನ್ನಣೆ ನೀಡಿದ ಕಾರಣ ಈ ನುಡಿಯು ತನ್ನೆಲ್ಲ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ತನ್ನದೇ ಆದ ಸಾಹಿತ್ಯಿಕ-ರಾಜಕೀಯ ಅನನ್ಯತೆಯನ್ನು ಕಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಎಂಬ ನಂಬಿಕೆಗಳೂ ನೆಲೆನಿಂತಿವೆ. ಇರಲಿ ಹೀಗೆ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಂಸ್ಕೃತ ನುಡಿಯ ಗಮನವು ಹೇಗೆ ಒಂದು ನುಡಿಯ ಒಟ್ಟು ಸಾಮಾಜಿಕ ಸಂದರ್ಭದಲ್ಲಿ ತನ್ನ ಗುರುತುಗಳನ್ನು ನೆಲೆಗೊಳಿಸುವ ಹುನ್ನಾರವನ್ನು ಮಾಡಿದೆ ಅನ್ನುವುದನ್ನು ಇಲ್ಲಿ ಕಾಣಬಹುದು. ಅಂದರೆ ಆಯಾ ಭಾಷಿಕ ಸನ್ನಿವೇಶ ಮತ್ತು ಬಳಕೆಯ ನಿಲುವುಗಳನ್ನು ನಿಯಂತ್ರಿಸಿದ ಮಾದರಿಗಳು ನಮ್ಮ ಕನ್ನಡ ವ್ಯಾಕರಣ, ಮೀಮಾಂಸೆ, ಸಂಸ್ಕೃತಿ ಚಿಂತನೆ, ಶೈಕ್ಷಣಿಕ ಪರಂಪರೆಗಳು ರೂಪಗೊಂಡ ಬಗೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಗಳಿಂದ ಇನ್ನೂ ನಿಚ್ಚಳವಾಗಿ ಕಾಣಲು ಸಾಧ್ಯವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version