ದಿನದ ಸುದ್ದಿ

ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ

Published

on

ಸುದ್ದಿದಿನ ಡೆಸ್ಕ್ : ಕೋಲ್ಕತಾದ ಹೌರಾದಲ್ಲಿ ಸಿಲುಕಿರುವ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರ್ನಾಟಕಕ್ಕೆ ಕರೆ ತರಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.

ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಎಲ್ಲರೂ ಆಗಮಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೋಲ್ಕತಾದಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.

ಮುಂಜಾನೆ ಹೊರಡಲಿರುವ ಇಂಡಿಗೊ ವಿಮಾನ ಬೆಂಗಳೂರಿಗೆ ಬರಲಿದೆ. ಕೋಲ್ಕತಾದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರರೂ ಈ ರೈಲುಗಳಲ್ಲಿ ವಾಪಸಾಗುವ ವೇಳೆ ಈ ದುರಂತ ಸಂಭವಿಸಿದ್ದು, ತರಬೇತುದಾರರು ಸೇರಿ 32 ಜನರನ್ನು ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗಾಗಿ ಸಚಿವ ಸಂತೋಷ್ ಲಾಡ್ ಅವರನ್ನು ಘಟನಾ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ಘೋರ, ದುರದೃಷ್ಟಕರ ಘಟನೆ. ಅಪಘಾತ ಸುದ್ದಿಯಿಂದ ಅತೀವ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಅಪಘಾತದಲ್ಲಿ ಕನ್ನಡಿಗರ ಸಾವು – ನೋವಿನ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ಕನ್ನಡಿಗರ ರಕ್ಷಣೆಗೆ ಹಾಗೂ ಅಗತ್ಯ ನೆರವು ಒದಗಿಸಲು ಘಟನಾ ಸ್ಥಳಕ್ಕೆ ಸಚಿವ ಸಂತೋಷ್ ಲಾಡ್ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದುರಂತದಲ್ಲಿ ಸಿಲುಕಿದ್ದ ಕನ್ನಡಿಗರೊಂದಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಗತ್ಯ ನೆರವು ಒದಗಿಸಿ, ಸುರಕ್ಷಿತವಾಗಿ ವಾಪಸ್ ಕರೆ ತರಲಾಗುವುದು ಎಂದು ಧೈರ್ಯ ತುಂಬಿದರು. ರಾಜ್ಯ ಸರ್ಕಾರದ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1070ಅಥವಾ
080-22253707 ಅಥವಾ 080 – 22340676 ಅನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version