ಬಹಿರಂಗ

ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕಕ್ಕೂ ಲಗ್ಗೆ ಇಟ್ಟ ಮತೀಯ ರಾಜಕಾರಣ

Published

on

  • ನಾ ದಿವಾಕರ

ಕರ್ನಾಟಕದ ಜಲಿಯನ್‌ವಾಲಾಬಾಗ್‌ ಎಂದೇ ಹೆಸರಾದ ವಿದುರಾಶ್ವತ್ಥ ವಿವಾದದ ಕೇಂದ್ರ ಬಿಂದುವಾಗಲಿದೆಯೇ..?


ರ್ತಮಾನ ಭಾರತದ ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅನಿವಾರ್ಯವಾಗಿ ಸ್ವಾತಂತ್ರ್ಯ ಪೂರ್ವದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳತ್ತ ಗಮನಹರಿಸಬೇಕಾಗುತ್ತದೆ. ಬ್ರಿಟೀಷ್‌ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆಯುವ ಮುನ್ನ ಭಾರತ ಆಂತರಿಕವಾಗಿ ಅನುಭವಿಸಿದ ತುಮುಲಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕ ಚೌಕಟ್ಟಿನಲ್ಲಿ ಮತ್ತು ರಾಜಕೀಯ ಭೂಮಿಕೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಗಾಂಧಿ ಅನುಸರಿಸಿದ ಅಹಿಂಸಾ ಮಾರ್ಗದ ಮೂಲಕವೇ ಭಾರತ ದಾಸ್ಯದಿಂದ ವಿಮೋಚನೆ ಪಡೆದಿದೆ ಎಂಬ ಸಾಮಾನ್ಯ ಗ್ರಹಿಕೆಯ ಹೊರತಾಗಿಯೂ ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ಬ್ರಿಟೀಷ್‌ ವಸಾಹತುಶಾಹಿಯ ದಬ್ಬಾಳಿಕೆಗೆ ನೂರಾರು ಜೀವಗಳು ಬಲಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲೂ ಸಹ ಮತದ್ವೇಷ ಮತ್ತು ಮತಾಂಧತೆಗೆ ಗುರಿಯಾದ ಭಾರತ ಲಕ್ಷಾಂತರ ಸಾವು ನೋವುಗಳನ್ನು ಕಂಡಿದೆ.

ಸಾವಿರಾರು ಜನರ ತ್ಯಾಗ, ಬಲಿದಾನ, ನಿಸ್ವಾರ್ಥ ಹೋರಾಟದ ಪ್ರತಿಫಲವನ್ನು 1947ರ ಸ್ವಾತಂತ್ರ್ಯದಲ್ಲಿ ಕಾಣಬಹುದು. ರಾಜಕೀಯ ಸ್ವಾತಂತ್ರ್ಯ ಪಡೆಯುತ್ತಿದ್ದೇವೆ ಎಂಬ ಹೆಮ್ಮೆಯೊಂದಿಗೇ ಸಾಮಾಜಿಕ ಶೋಷಣೆ ಮತ್ತು ಸಾಂಸ್ಕೃತಿಕ ದಬ್ಬಾಳಿಕೆ ಸ್ವಾತಂತ್ರ್ಯಾನಂತರವೂ ಜೀವಂತವಾಗಿರುತ್ತದೆ ಎಂಬ ಆತಂಕದೊಡನೆಯೇ ಈ ದೇಶದ ಬಹುಸಂಖ್ಯಾತ ಶೋಷಿತ ಜನತೆ ಈ ಸಂಭ್ರಮಾಚರಣೆಯಲ್ಲಿ ತೊಡಗಿದ್ದನ್ನು ಅಲ್ಲಗಳೆಯಳಾಗುವುದಿಲ್ಲ. ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ನಡೆದ ಸುದೀರ್ಘ ಸಂಘರ್ಷದಲ್ಲಿ ಹಲವು ವಿಚಾರಧಾರೆಗಳು ತಮ್ಮದೇ ಆದ ರೀತಿಯಲ್ಲಿ ಜನಜಾಗೃತಿ ಮೂಡಿಸಿವೆ. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸಹ 1885 ರಿಂದ 1935ರವರೆಗಿನ ಯಾತ್ರೆಯಲ್ಲಿ ಹಲವು ರೂಪಾಂತರಗಳನ್ನು ಕಂಡು, ಸವಾಲುಗಳನ್ನೂ ಎದುರಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಸೌಮ್ಯ ಮಾರ್ಗ, ಮೃದು ಮಾರ್ಗ, ರಾಜೀ ಮಾರ್ಗ, ತೀವ್ರಗಾಮಿ ಮಾರ್ಗ ಮತ್ತು ಕ್ರಾಂತಿಕಾರಿ ಧೋರಣೆಗಳ ಹಲವು ವಿಚಾರಧಾರೆಗಳು ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದ್ದನ್ನು ನಿರಾಕರಿಸಲಾಗುವುದಿಲ್ಲ.

ಈ ವಿಭಿನ್ನ ವಿಚಾರಧಾರೆ ಮತ್ತು ಹೋರಾಟದ ಮಾರ್ಗಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಭಿನ್ನ ಧೋರಣೆಗಳನ್ನು ವ್ಯಕ್ತಪಡಿಸಿವೆ. 1757ರ ಪ್ಲಾಸಿ ಕದನದಿಂದ 1947ರವರೆಗೆ, ನಂತರ 1961ರ ಗೋವಾ ವಿಮೋಚನೆಯವರೆಗಿನ ಹೋರಾಟದ ಹಾದಿಯಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಸಾಂಸ್ಕೃತಿಕ ಅಥವಾ ಧಾರ್ಮಿಕ ಗಡಿರೇಖೆಗಳನ್ನು ಮರೆತು, ಅಖಂಡ ಭಾರತಕ್ಕಾಗಿ ಜೀವ ಸವೆಸಿದ್ದಾರೆ, ತೆತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌, ಪಾರ್ಸಿ ಹೀಗೆ ವಿಭಿನ್ನ ಮತಧರ್ಮಗಳ ಅನುಯಾಯಿಗಳು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ಶೋಷಿತ ವರ್ಗಗಳು ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ವೀರೋಚಿತ ಹೋರಾಟಗಳನ್ನು ನಡೆಸಿವೆ. ಈ ಎರಡು ಶತಮಾನಗಳ ಇತಿಹಾಸದಲ್ಲೇ ಆಂತರಿಕವಾಗಿ ಜಾತಿ ಶೋಷಣೆಯ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ, ಸಾಮಾಜಿಕ ಅಸಮಾನತೆಗಳ ವಿರುದ್ಧ, ಊಳಿಗಮಾನ್ಯ ದಬ್ಬಾಳಿಕೆಯ ವಿರುದ್ಧ ಶೋಷಿತ ವರ್ಗಗಳ, ರೈತಾಪಿ ವರ್ಗಗಳ ವೀರೋಚಿತ ಹೋರಾಟಗಳನ್ನೂ ಕಾಣಬಹುದು. ಬಿರ್ಸಾ ಮುಂಡಾ ಹೋರಾಟದಿಂದ ತೆಲಂಗಾಣ ರೈತರ ಹೋರಾಟದವರೆಗೆ ಈ ಪರಂಪರೆ ವಿಸ್ತರಿಸುತ್ತದೆ.

ಈ ಹೋರಾಟಗಳ ನಡುವೆಯೇ ಬ್ರಿಟೀಷರೊಡನೆ ವೀರೋಚಿತವಾಗಿ ಹೋರಾಡಿ ಪ್ರಾಣತೆತ್ತ ಅನೇಕ ಪ್ರಾಂತೀಯ ಸಂಸ್ಥಾನಗಳ ಇತಿಹಾಸವನ್ನೂ ದಾಖಲಿಸಲಾಗಿದೆ. ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಸಂಗೊಳ್ಳಿರಾಯಣ್ಣ ಮುಂತಾದವರು ಹುತಾತ್ಮರಾಗಿದ್ದಾರೆ. ಭಾರತ ಅಹಿಂಸಾ ಮಾರ್ಗದ ಮೂಲಕ ರಕ್ತಪಾತ ಇಲ್ಲದೆ ಸ್ವಾತಂತ್ರ್ಯ ಪಡೆದಿದೆ ಎನ್ನುವುದು ಒಟ್ಟಾರೆ ಸ್ವಾತಂತ್ರ್ಯ ಸಂಗ್ರಾಮದ ದೃಷ್ಟಿಯಿಂದ ಸಮರ್ಥನೀಯವೆನಿಸಿದರೂ, ಬ್ರಿಟೀಷರ ಕೋವಿಗಳು ಸಾವಿರಾರು ಭಾರತೀಯರ ರಕ್ತ ಹರಿಸಿಯೇ ತನ್ನ ಆಳ್ವಿಕೆಯನ್ನು ಕೊನೆಗೊಳಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. 20ನೆಯ ಶತಮಾನದ ನಂತರದ ರಕ್ತಸಿಕ್ತ ಇತಿಹಾಸದಲ್ಲಿ ಎರಡು ಪ್ರಮುಖ ಘಟನೆಗಳನ್ನು ನೆನೆಯುವುದಾದರೆ ಮೊದಲನೆಯದಾಗಿ ಜಲಿಯನ್‌ವಾಲಾ ಬಾಗ್‌ ನೆನಪಾದರೆ, ಮತ್ತೊಂದು ಕರ್ನಾಟಕದ ವಿದುರಾಶ್ವತ್ಥ ನೆನಪಾಗುತ್ತದೆ. ಸಹಜವಾಗಿಯೇ ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್‌ವಾಲಾಬಾಗ್‌ ಎಂದೇ ಕರೆಯಲಾಗುತ್ತದೆ.

ವಿದುರಾಶ್ವತ್ಥದ ಐತಿಹ್ಯ ಮತ್ತು ಇತಿಹಾಸ

ಅವಿಭಜಿತ ಕೋಲಾರ ಜಿಲ್ಲೆಯ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಮೀಪ ಪಿನಾಕಿನಿ ನದಿಯ ತೀರದಲ್ಲಿರುವ ಒಂದು ಪುಟ್ಟ ಗ್ರಾಮ ವಿದುರಾಶ್ವತ್ಥ. ಪೌರಾಣಿಕ ಐತಿಹ್ಯಗಳಿಂದ ಇತಿಹಾಸ ಪ್ರಸಿದ್ಧವಾಗಿರುವ ಈ ಗ್ರಾಮ ಆಸ್ತಿಕರಿಗೆ ಒಂದು ಪುಣ್ಯಕ್ಷೇತ್ರ ಮತ್ತು ಯಾತ್ರಾಸ್ಥಳವೂ ಹೌದು. ಇಲ್ಲಿನ ಅಶ್ವತ್ಥಮರದ ಪಾದತಳದಲ್ಲಿ ನಾಗರಪ್ರತಿಷ್ಠೆ ಮಾಡುವ ಮೂಲಕ ತಮ್ಮ ಪಾಪಗಳನ್ನು ನಿವೇದಿಸಿಕೊಂಡು ಬದುಕಿನ ಸಂಕಷ್ಟಗಳಿಂದ ಪರಿಹಾರ ಕೋರುವ ಸಾವಿರಾರು ಭಕ್ತಾದಿಗಳು ಈ ಕ್ಷೇತ್ರಕ್ಕೆ ವರ್ಷವಿಡೀ ಬರುತ್ತಲೇ ಇರುತ್ತಾರೆ. ಮಹಾಭಾರತ ಕಾಲದ ಐತಿಹ್ಯ ಇರುವ ಈ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮಾಡಿದರೆ ತಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎಂಬ ಬಲವಾದ ನಂಬಿಕೆಯೇ ಈ ಕ್ಷೇತ್ರವನ್ನು ಕರ್ನಾಟಕದ ಯಾತ್ರಾಸ್ಥಳವನ್ನಾಗಿ ಮಾಡಿದೆ. ಪ್ರತಿವರ್ಷ ಏಪ್ರಿಲ್‌ ಮಾಹೆಯಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಪಿನಾಕಿನಿ ನದಿಯ ತೀರದಲ್ಲಿರುವ ಈ ಗ್ರಾಮ ಆಸ್ತಿಕ ಹಿಂದೂಗಳಿಗೆ ಒಂದು ಪವಿತ್ರ ಕ್ಷೇತ್ರವೂ ಆಗಿದೆ. ಹಾಗೆಯೇ ಭಾರತದ ಬಹುಸಂಸ್ಕೃತಿಯ ಒಂದು ಪ್ರತೀಕವಾಗಿಯೂ ನಡೆದುಬಂದಿರುವ ವಿದುರಾಶ್ವತ್ಥಕ್ಕೆ ಅನ್ಯ ಧರ್ಮದ ಜನರೂ ಭೇಟಿ ನೀಡುವುದನ್ನು ಕಾಣಬಹುದು.

ಮತಶ್ರದ್ಧೆ, ಜನಸಾಮಾನ್ಯರ ನಂಬಿಕೆ ಮತ್ತು ಪೌರಾಣಿಕ ಐತಿಹ್ಯಗಳ ಹೊರತಾಗಿಯೂ ವಿದುರಾಶ್ವತ್ಥ ಚಾರಿತ್ರಿಕವಾಗಿ ಭಾರತದ ಭೂಪಟದಲ್ಲಿ ಒಂದು ಶಾಶ್ವತ ಸ್ಥಾನ ಗಳಿಸಿರುವುದೂ ಹೌದು. ಭಕ್ತಿ, ನಂಬಿಕೆ, ಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳು ನಿರಂತರವಾಗಿ ಹರಿಯುತ್ತಿದ್ದ ಪಿನಾಕಿನಿ ನದಿ ತೀರದ ಈ ಪುಟ್ಟ ಗ್ರಾಮದಲ್ಲಿ ಬ್ರಿಟೀಷ್‌ ವಸಾಹತುಶಾಹಿಯು ರಕ್ತದ ಹೊಳೆ ಹರಿಸಿದ ರಕ್ತಸಿಕ್ತ ಚರಿತ್ರೆ ಇಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಈಸೂರು, ಶಿವಪುರ ದಾಖಲಾಗಿರುವಂತೆಯೇ ವಿದುರಾಶ್ವತ್ಥವೂ ಸಹ ಧ್ವಜ ಸತ್ಯಾಗ್ರಹ ಕೇಂದ್ರವಾಗಿ, ಬ್ರಿಟೀಷರ ಕ್ರೌರ್ಯಕ್ಕೆ ಬಲಿಯಾದ ಹುತಾತ್ಮರ ಕತೆಯನ್ನು ಸಾರುತ್ತದೆ. 1938ರ ಏಪ್ರಿಲ್‌ 25ರಂದು ಇದೇ ಸ್ಥಳದಲ್ಲೇ ಬ್ರಿಟೀಷರ ಗುಂಡೇಟಿಗೆ 32 ಸ್ವಾತಂತ್ರ್ಯ ಸಂಗ್ರಾಮಿಗಳು ಹುತಾತ್ಮರಾಗಿದ್ದರು. ಈ ಹುತಾತ್ಮರನ್ನು ಸಾರ್ವಕಾಲಿಕವಾಗಿ ಸ್ಮರಿಸಲೆಂದೇ ಇಲ್ಲೊಂದು ಸ್ಮಾರಕವನ್ನೂ ನಿರ್ಮಿಸಲಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ 200 ವರ್ಷಗಳ ಇತಿಹಾಸವನ್ನು ದಾಖಲಿಸುವ ಒಂದು ಚಿತ್ರ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ.

1938ರಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನವು ಕರ್ನಾಟಕದ ಸ್ವಾತಂತ್ರ್ಯ ಚಳುವಳಿಗೆ ಚಾಲನೆ ನೀಡಿದ ಒಂದು ಘಟನೆ. ಧ್ವಜಾರೋಹಣೆಯ ಮೂಲಕ ಭಾರತದ ಸಾರ್ವಭೌಮತ್ವವನ್ನು ಸಾರುವ ನಿಟ್ಟಿನಲ್ಲಿ ಸಂಸ್ಥಾನದ ವಿವಿಧೆಡೆಗಳಲ್ಲಿ ಧ್ವಜ ಸತ್ಯಾಗ್ರಹಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಶಿವಪುರದಲ್ಲಿ ನಡೆಯಬೇಕಿದ್ದ ಮೂರು ದಿನದ ಅಧಿವೇಶನಕ್ಕೆ ಮೈಸೂರು ಸರ್ಕಾರ ಅಡ್ಡಿಪಡಿಸಿದ ಕಾರಣ ಈ ಸಂದರ್ಭದಲ್ಲಿ ಶಿವಪುರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ನಿಷೇಧಾಜ್ಞೆಯನ್ನು ಉಲ್ಲಂಘಿಸುವ ಸತ್ಯಾಗ್ರಹಿಗಳ ಮೇಲೆ ಗುಂಡಿನ ದಾಳಿ ನಡೆಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆಜ್ಞಾಪಿಸಿದ್ದರೂ, ಶಾಂತಿಯುತವಾಗಿ ನಡೆಯುತ್ತಿರುವ ಸಭೆಯ ಮೇಲೆ ಗುಂಡು ಹಾರಿಸಲು ನಿರಾಕರಿಸಿದ ಜಿಲ್ಲಾಧಿಕಾರಿ ಇನಾಯತ್‌ ಉಲ್ಲಾ ಮೇಕ್ರಿ ವರ್ಗಾವಣೆಯ ಶಿಕ್ಷೆ ಎದುರಿಸಬೇಕಾಯಿತು. ಮೂರು ದಿನವೂ ಸಭೆ ನಡೆದು ನಂತರ ಹಲವಾರು ನಾಯಕರು ಬಂಧನಕ್ಕೊಳಗಾಗಿದ್ದರು.

ಇದೇ ಸ್ಫೂರ್ತಿಯೊಂದಿಗೆ ವಿದುರಾಶ್ವತ್ಥದಲ್ಲೂ ಧ್ವಜ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ 1938ರ ಏಪ್ರಿಲ್‌ 18ರಂದು ದೇಶಭಕ್ತರ ದಿನಾಚರಣೆಯನ್ನು ಆಚರಿಸಲು ಸ್ಥಳೀಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದರು. ಏಪ್ರಿಲ್‌ 14 ರಿಂದ 29ರವರೆಗೆ ಇಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲೇ ಈ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಏಕೆಂದರೆ ಈ ಜಾತ್ರೆಯಲ್ಲಿ ದನದ ಜಾತ್ರೆಯೂ ನಡೆಯುವುದರಿಂದ ಲಕ್ಷಾಂತರ ಜನರು ಸೇರುತ್ತಿದ್ದರು. ಏಪ್ರಿಲ್‌ 18ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆಗೇ ಜಿಲ್ಲಾಡಳಿತವು ಇಡೀ ಪ್ರದೇಶದಲ್ಲಿ 15 ದಿನಗಳ ಕಾಲ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆಯನ್ನು ಹೇರಿತ್ತು. ಆದರೆ ಇದಾವುದನ್ನೂ ಲೆಕ್ಕಿಸದ ಸ್ಥಳೀಯ ಕಾಂಗ್ರೆಸ್‌ ನಾಯಕರು ಧ್ವಜಸತ್ಯಾಗ್ರಹದ ಅಧ್ಯಕ್ಷರಾದ ಎನ್‌ ಸಿ ನಾಗಯ್ಯರೆಡ್ಡಿ ನೇತೃತ್ವದಲ್ಲಿ ಶಾಂತಿಯುತ ಸಭೆ ನಡೆಸಿದ್ದರು. ಏಪ್ರಿಲ್‌ 22ರಂದು ನಾಗಯ್ಯರೆಡ್ಡಿ ಮುಂದಾಳತ್ವದಲ್ಲಿ ಸತ್ಯಾಗ್ರಹಿಗಳು ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ಆಗಮಿಸಿ ಅಲ್ಲಿ ಕರಪತ್ರಗಳನ್ನು ಹಂಚುವುದರ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ದಿಟ್ಟ ಹೋರಾಟಕ್ಕೆ ಚಾಲನೆ ನೀಡಿದ್ದರು. ಈ ಘಟನೆಯಲ್ಲಿ ನಾಗಯ್ಯರೆಡ್ಡಿ ಅವರೊಂದಿಗೆ ಶ್ರೀಪಾಲಯ್ಯ, ನಾರಾಯಣಪ್ಪ, ಹೆಚ್‌ ಎಲ್‌ ವೆಂಕಟ್ರಾಮರಾವ್‌ ಮುಂತಾದ ಹಲವು ನಾಯಕರನ್ನು ಬಂಧಿಸಲಾಯಿತು. ಕ್ಷಮೆ ಯಾಚಿಸಲು ನಿರಾಕರಿಸಿದ ಈ ಹೋರಾಟಗಾರರಿಗೆ ಬಿಡುಗಡೆಯೂ ದೊರೆಯಲಿಲ್ಲ.

ಏಪ್ರಿಲ್‌ 23ರಂದು ಗೌರಿಬಿದನೂರಿನಿಂದ ರಾಮಯ್ಯ ಶೆಟ್ಟಿ ಮತ್ತು ಜ್ವಾಲನಯ್ಯವರ ಮುಂದಾಳತ್ವದಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ವಿದುರಾಶ್ವತ್ಥಕ್ಕೆ ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಈ ಇಬ್ಬರೂ ನಾಯಕರನ್ನು ಬಂಧಿಸಲಾಯಿತು. ಈ ಬಂಧನಗಳ ಸುದ್ದಿ ವ್ಯಾಪಿಸುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಶಭಕ್ತಿಯ ಅಲೆ ಪ್ರವಹಿಸಲಾರಂಭಿಸಿತ್ತು. ಕೋಲಾರ ಜಿಲ್ಲೆಯ ಹಲವು ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಧ್ವಜ ಸತ್ಯಾಗ್ರಹ ನಡೆಯಲಿದ್ದ ವಿದುರಾಶ್ವತ್ಥದ ಕಡೆ ಹೆಜ್ಜೆ ಹಾಕತೊಡಗಿದರು. ನೆರೆಯ ಆಂಧ್ರ ಪ್ರದೇಶದ ಹಿಂದೂಪುರದಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಕಲ್ಲೂರು ಸುಬ್ಬರಾವ್‌ ಮುಂದಾಳತ್ವದಲ್ಲಿ ಇಲ್ಲಿಗೆ ಆಗಮಿಸಿದರು. ಇಲ್ಲಿ ನೆರೆದ ಸಾವಿರಾರು ಕಾರ್ಯಕರ್ತರು ತಾವು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಧ್ವಜಸತ್ಯಾಗ್ರಹ ನಡೆಸುವುದಾಗಿ ಪಣತೊಟ್ಟರು. ಏಪ್ರಿಲ್‌ 25ರಂದು ಗೌರಿಬಿದನೂರು ಮತ್ತು ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ವಿದುರಾಶ್ವತ್ಥದೆಡೆಗೆ ಹೆಜ್ಜೆ ಹಾಕಲಾರಂಭಿಸಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಂದು ಧ್ವಜಸತ್ಯಾಗ್ರಹದಲ್ಲಿ ಭಾಗವಹಿಸಲು 25 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು ಎನ್ನಲಾಗುತ್ತದೆ.

ಈ ಸಂದರ್ಭದಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ವಿಶ್ರಮಿಸುತಿದ್ದ, ಅಲ್ಲಿ ನೆರೆದಿದ್ದ ಜನರ ಮೇಲೆ ಮ್ಯಾಜಿಸ್ಟ್ರೇಟರ ಆದೇಶದ ಮೇರೆಗೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಚದುರಲಾರಂಭಿಸಿದ ಜನರು ಕಲ್ಲು ತೂರಾಟದಲ್ಲಿ ತೊಡಗಿದ್ದರು. ಈ ಗಲಭೆಯ ನಡುವೆಯೇ ಅಲ್ಲಿ ನೆರೆದಿದ್ದ 80ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯ ರೈಫಲ್‌ ಪಡೆಗೆ ಗುಂಡುಹಾರಿಸಲು ಆಜ್ಞಾಪಿಸಲಾಯಿತು. ಮೂರು ಬಾರಿ ನಡೆದ ಈ ಗುಂಡಿನ ದಾಳಿಯಲ್ಲಿ ಪೊಲೀಸರು 96 ಸುತ್ತು ಗುಂಡುಗಳನ್ನು ಹಾರಿಸಿದ್ದರು. ಈ ಗುಂಡಿನ ದಾಳಿಗೆ ಸ್ಥಳದಲ್ಲೇ 32 ಜನರು ಹುತಾತ್ಮರಾದರು. 48 ಮಂದಿ ಗಾಯಗೊಂಡಿದ್ದರು. ಸರ್ಕಾರದ ವರದಿಯ ಪ್ರಕಾರ 15 ಜನರು ಮೃತರಾಗಿರುವುದಾಗಿ ದಾಖಲಾಗಿದ್ದರೂ, ಕೆಲವು ಪತ್ರಿಕಾ ವರದಿಗಳು ಮತ್ತು ಬಿಬಿಸಿ ವರದಿಯ ಪ್ರಕಾರ ಕನಿಷ್ಟ 32 ಜನರು ಹುತಾತ್ಮರಾಗಿದ್ದರು. ಈ ಮಾರಣಹೋಮದಿಂದ ಪುಣ್ಯಕ್ಷೇತ್ರವಾಗಿದ್ದ ವಿದುರಾಶ್ವತ್ಥ ಭೀಕರ ಮಸಣವಾಯಿತು. ಪಿನಾಕಿನಿ ನದಿಯ ನೀರಿನೊಂದಿಗೇ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಹೊಳೆಯೂ ಹರಿದಿತ್ತು. ಪಿನಾಕಿನಿ ನದಿಯು ಸ್ವಾತಂತ್ರ್ಯ ಸಂಗ್ರಾಮಿಗಳ ರಕ್ತದ ಮಡುವಿಗೆ ಸಾಕ್ಷಿಯಾಯಿತು. ಈ ಘಟನೆಯಲ್ಲಿ ಭಾಗಿಯಾಗಿದ್ದ ಪ್ರತ್ಯಕ್ಷದರ್ಶಿಗಳಾಗಿ ಮೂವರು ಮಹನೀಯರು, ಇತ್ತೀಚಿನವರೆಗೂ ಜೀವಂತವಾಗಿದ್ದರು.

ಸ್ಮಾರಕ ಮತ್ತು ಚಾರಿತ್ರಿಕ ಸ್ಮರಣೆ

ಕರ್ನಾಟಕದ ಜಲಿಯನ್‌ವಾಲಾ ಬಾಗ್‌ ಎಂದೇ ಹೆಸರಾದ ಈ ಚಾರಿತ್ರಿಕ ಘಟನೆಯು 1973ರಲ್ಲಿ ಸ್ಥಾಪಿಸಿದ ಸ್ಮಾರಕ ಶಿಲೆ ಮತ್ತು 2004ರಲ್ಲಿ ಸ್ಥಾಪಿತವಾದ ವೀರಸೌಧದ ಮೂಲಕ ಇಂದಿಗೂ ಅಂದಿನ ಕರಾಳ ಚರಿತ್ರೆಯನ್ನು ನೆನಪಿಸುತ್ತಿವೆ. ಈ ಚರಿತ್ರಾರ್ಹ ಘಟನೆಯನ್ನು ಸಾರ್ವಕಾಲಿಕವಾಗಿ ಸ್ಮರಿಸಲು ನೆರವಾಗುವಂತಹ ಒಂದು ಚಿತ್ರ ಗ್ಯಾಲರಿಯನ್ನು ರೂಪಿಸಲಾಗಿದೆ. ಚರಕದ ಆಕಾರದಲ್ಲಿರುವ ಒಂದು ಸುಂದರ ವಿನ್ಯಾಸದ ಕಟ್ಟಡದಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವನ್ನೂ ನಿರ್ಮಿಸಲಾಗಿದೆ. ಸ್ಥಳೀಯ ಶಾಸಕರಾದ ಶಿವಶಂಕರ ರೆಡ್ಡಿ ಮತ್ತು ಗೌರಿಬಿದನೂರಿನ ನಿವೃತ್ತ ಪ್ರಾಧ್ಯಾಪಕ, ಲೇಖಕ ಬಿ ಗಂಗಾಧರಮೂರ್ತಿ ಮತ್ತು ಕೆಲವು ಸಮಾನಾಸಕ್ತ ಗೆಳೆಯರ ಪರಿಶ್ರಮದೊಂದಿಗೆ ಈ ಗ್ಯಾಲರಿ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗಿದೆ. 1757ರ ಪ್ಲಾಸಿ ಕದನದಿಂದ 1961ರ ಗೋವಾ ವಿಮೋಚನೆಯವರೆಗೆ ಭಾರತದ ವಸಾಹತುವಿರೋಧಿ ಹೋರಾಟದ ವಿವಿಧ ಮಗ್ಗುಲುಗಳನ್ನು ಬಿಂಬಿಸುವ 104 ವರ್ಣಚಿತ್ರ ಫಲಕಗಳನ್ನು ಈ ಗ್ಯಾಲರಿಯಲ್ಲಿ ಕಾಲಾನುಕ್ರಮವಾಗಿ ಜೋಡಿಸಲಾಗಿದೆ.

ಈ ಅವಧಿಯಲ್ಲಿ ನಡೆದ ಹೋರಾಟಗಳು, ದಂಗೆಗಳು, ಆಂದೋಲನಗಳು, ಯುದ್ಧಗಳು ಎಲ್ಲವನ್ನೂ ಈ ವರ್ಣಚಿತ್ರಗಳಲ್ಲಿ ಸಂಕ್ಷಿಪ್ತ ವಿವರಗಳೊಂದಿಗೆ ಬಿಂಬಿಸಲಾಗಿದೆ. ಕಿತ್ತೂರು ರಾಣಿ, ಝಾನ್ಸಿ ರಾಣಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಟಿಪ್ಪು, ಸಂಗೊಳ್ಳಿ ರಾಯಣ್ಣ, ಬಿರ್ಸಾ ಮುಂಡಾ ಹೀಗೆ ಹಲವು ಮಜಲುಗಳ ಬ್ರಿಟೀಷ್‌ ವಿರೋಧಿ ಹೋರಾಟಗಾರರನ್ನು ಬಿಂಬಿಸಲಾಗಿದ್ದು ದಾಖಲಿತ ಅಧಿಕೃತ ಇತಿಹಾಸದಲ್ಲಿರುವ ಚಾರಿತ್ರಿಕ ಸಂಗತಿಗಳನ್ನು ಇಲ್ಲಿ ಬಿತ್ತರಿಸಲಾಗಿದೆ. ಸಹಜವಾಗಿಯೇ 20ನೆಯ ಶತಮಾನದಲ್ಲಿ ರೂಪುಗೊಂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾಣಬಹುದಾದ ವೈವಿಧ್ಯಮಯ ವಿಚಾರಧಾರೆಗಳು, ಹೋರಾಟದ ಧೋರಣೆಗಳು, ಮಾರ್ಗಗಳು ಇಲ್ಲಿ ಬಿಂಬಿತವಾಗಿವೆ. ಸೈದ್ಧಾಂತಿಕ, ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಐಕಮತ್ಯದೊಂದಿಗೆ, ಐಕ್ಯತೆಯಿಂದ ಬ್ರಿಟೀಷ್‌ ವಸಾಹತುಶಾಹಿಯ ಸಂಕೋಲೆಗಳನ್ನು ಕಿತ್ತು ಹಾಕಿದ ರಾಷ್ಟ್ರನಾಯಕರ ಸ್ಮರಣೆ ಇಲ್ಲಿ ವಸ್ತುನಿಷ್ಠತೆಯಿಂದ ದಾಖಲಾಗಿದೆ. ಆ ಸಂದರ್ಭದಲ್ಲೇ ಕಂಡುಬಂದಿದ್ದ ಎಡಪಂಥೀಯ, ಬಲಪಂಥೀಯ, ತೀವ್ರಗಾಮಿ, ರಾಷ್ಟ್ರೀಯವಾದಿ ಹೋರಾಟಗಳ ವಿಭಿನ್ನ ಮಜಲುಗಳನ್ನೂ ಪರಿಚಯಿಸಲಾಗಿದೆ.

1905ರಲ್ಲಿ ಕ್ರಾಂತಿಕಾರಿಗಳ ಜೊತೆಗಿದ್ದ ಸಾವರ್ಕರ್‌ ಅವರ ಚಿತ್ರ ಇರುವಂತೆಯೇ, ಗಾಂಧಿ ಹತ್ಯೆಯ ನಂತರ ನಡೆದ ಬೆಳವಣಿಗೆಗಳಲ್ಲೂ ಅವರ ಚಿತ್ರ ಇಲ್ಲಿ ಕಾಣುತ್ತದೆ. ಹಾಗೆಯೇ ಭಗತ್‌ ಸಿಂಗ್‌ ಮುಂತಾದವರ ಎಡಪಂಥೀಯ ಕ್ರಾಂತಿಕಾರಿ ಹೆಜ್ಜೆಗಳ ನಡುವೆಯೇ ಉಗಮಿಸಿದ್ದ ಹಿಂದೂ ಮಹಾಸಭಾ ಮುಂತಾದ ಬಲಪಂಥೀಯ ಸಂಘಟನೆಗಳ ಪ್ರಸ್ತಾಪವನ್ನೂ ಕಾಣಬಹುದು. ಭಾರತದ ಶೋಷಿತ ಜನಸಮುದಾಯಗಳಿಗೆ ಬೆಳಕಿನ ಕಿಂಡಿ ತೋರಿ ಒಂದು ಸಮಸಮಾಜ ನಿರ್ಮಾಣಕ್ಕೆ ಪೂರಕವಾದ ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರೂ ಇಲ್ಲಿ ಜ್ವಲಿಸುತ್ತಾರೆ. ಗಾಂಧಿ ಮಾರ್ಗವನ್ನು ಒಪ್ಪುವ ಮತ್ತು ಒಪ್ಪದಿರುವ ಎಲ್ಲ ವಿಚಾರಧಾರೆಗಳನ್ನು ಚಾರಿತ್ರಿಕ ಮಾಹಿತಿಯೊಂದಿಗೆ ಸಚಿತ್ರವಾಗಿ ಈ ಗ್ಯಾಲರಿಯಲ್ಲಿ ಬಿಂಬಿಸಲಾಗಿದೆ. 200 ವರ್ಷಗಳ ಸುದೀರ್ಘ ಇತಿಹಾಸವನ್ನು ಮತ್ತು ಈ ಚರಿತ್ರೆಯ ಹಾದಿಯಲ್ಲಿ ಆಗಿಹೋದ ನೂರಾರು ಹುತಾತ್ಮರನ್ನು ಮತ್ತೆ ಮತ್ತೆ ನೆನಪಿಸುವ ರೀತಿಯಲ್ಲಿ ಈ ಗ್ಯಾಲರಿಯನ್ನು ರೂಪಿಸಲಾಗಿದೆ. ದೇಶದ ಹಲವಾರು ರಾಜಕೀಯ ನಾಯಕರು, ಪಕ್ಷಾತೀತವಾಗಿ ಇಲ್ಲಿಗೆ ಭೇಟಿ ನೀಡಿ, ಈ ಗ್ಯಾಲರಿಯನ್ನು ಪ್ರಶಂಸಿಸಿ ದಾಖಲಿಸಿದ್ದಾರೆ.

ಆದರೆ ಇತ್ತೀಚೆಗೆ ಕೆಲವು ಬಲಪಂಥೀಯ ಗುಂಪುಗಳು ಗ್ಯಾಲರಿಯಲ್ಲಿರುವ ಕೆಲವು ವರ್ಣಚಿತ್ರಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿ ತಿಳಿದುಬಂದಿದೆ. ಮಹಾತ್ಮ ಗಾಂಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು, ಸಾವರ್ಕರ್‌ಗೆ ಅಪಮಾನವಾಗುವಂತೆ ಚಿತ್ರಿಸಿರುವುದು, ಪ್ರತಿಯೊಂದು ಫಲಕದಲ್ಲೂ ಮುಸ್ಲಿಂ ಸಂಗ್ರಾಮಿಗಳನ್ನು ಬಿಂಬಿಸಿರುವುದು, ಟಿಪ್ಪು ಸುಲ್ತಾನ್‌ನನ್ನು ಬಿತ್ತರಿಸಿರುವುದು, ಹಿಂದೂ ರಾಷ್ಟ್ರೀಯವಾದಿಗಳನ್ನು ಬಲಪಂಥೀಯರು ಎಂದು ಗುರುತಿಸಿರುವುದು ಇವೇ ಮುಂತಾದ ಕೆಲವು ಆಕ್ಷೇಪಗಳು ವ್ಯಕ್ತವಾಗಿದ್ದು, ಕೆಲವು ಗುಂಪುಗಳಿಂದ ಗ್ಯಾಲರಿಗೆ ಹಾನಿ ಉಂಟುಮಾಡುವ ಬೆದರಿಕೆಯೂ ಕೇಳಿಬಂದಿದೆ. ಇತಿಹಾಸ ಎಂದಿಗೂ ಸಾರ್ವತ್ರಿಕ ಸಮ್ಮತಿ ಪಡೆಯುವುದಿಲ್ಲ. ನೋಡುಗರ, ಓದುಗರ ದೃಷ್ಟಿಯೇ ಚರಿತ್ರೆಯ ಸರಿ ತಪ್ಪುಗಳನ್ನು ನಿಷ್ಕರ್ಷೆ ಮಾಡುವುದನ್ನು ಕಾಣುತ್ತಲೇ ಬಂದಿದ್ದೇವೆ. ಆಕ್ಷೇಪಗಳು, ಆರೋಪ ಪ್ರತ್ಯಾರೋಪಗಳ ನಡುವೆಯೇ ಚರಿತ್ರೆಯನ್ನು ನೋಡುತ್ತಾ, ಹೊಸ ಚರಿತ್ರೆಯನ್ನು ಕಟ್ಟುವುದು ನಾಗರಿಕ ಮಾನವ ಸಮಾಜದ ಆದ್ಯತೆಯಾಗಬೇಕು.

ಕೆಲವೇ ವ್ಯಕ್ತಿಗಳ, ಹಲವು ವರ್ಷಗಳ ಪರಿಶ್ರಮದಿಂದ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯ ಸಂಗ್ರಾಮದ ಗ್ಯಾಲರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಮತ್ತು ನಾಗರಿಕರ ಜವಾಬ್ದಾರಿಯೂ ಹೌದು. ವಿದುರಾಶ್ವತ್ಥ ಬ್ರಿಟೀಷ್‌ ವಸಾಹತು ಕಾಲದ ರಕ್ತಸಿಕ್ತ ಇತಿಹಾಸವನ್ನು ಸಾರಿ ಸಾರಿ ಹೇಳುತ್ತದೆ. ಸ್ಥಳೀಯರು ಈ ಚರಿತ್ರೆಯ ಪುಟಗಳೊಡನೆಯೇ ಇಲ್ಲಿನ ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ. 27 ವರ್ಷಗಳ ಕಾಲ ಬತ್ತಿಹೋಗಿದ್ದು ಮರಳುಗಣಿಗಾರಿಕೆಯ ಮಾಫಿಯಾಗಳಿಗೆ ಚಿನ್ನದ ಗಣಿಯಂತಾಗಿದ್ದ ಪಿನಾಕಿನಿ ನದಿ ಈ ವರ್ಷ ತುಂಬಿ ಹರಿಯುತ್ತಿದೆ. ಈ ನದಿಯ ಝುಳುಝಳು ನಾದದೊಂದಿಗೆ , ಅಶ್ವತ್ಥ ವೃಕ್ಷದಲ್ಲಿ ನಲಿಯುವ ಹಕ್ಕಿಗಳ ಕಲರವದೊಂದಿಗೇ, ಕರ್ನಾಟಕದ ಮತ್ತು ನೆರೆ ರಾಜ್ಯಗಳ ಶ್ರದ್ಧಾಭಕ್ತಿಗಳ ಪ್ರಾರ್ಥನೆಯೊಂದಿಗೇ, ಈ ಚಿತ್ರ ಗ್ಯಾಲರಿಯನ್ನು ಜೀವಂತವಾಗಿರಿಸಿ, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆ ಗುರುತುಗಳನ್ನು ಜೀವಂತಿಕೆಯಿಂದಿರಿಸುವ ಹೊಣೆ ನಮ್ಮದಾಗಿದೆ.

ಕೆಲವೇ ಬಲಪಂಥೀಯ ಸಂಘಟನೆಗಳ ಮತಾಂಧತೆಗೆ ಈ ಗ್ಯಾಲರಿ ಬಲಿಯಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲಿದೆ. ಬ್ರಿಟೀಷರು ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್‌ವಾಲಾಬಾಗ್‌ ಮಾಡಿ ಕರಾಳ ಛಾಯೆಯನ್ನು ಹರಡಿ ಹೋಗಿದ್ದಾರೆ. ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿದುರಾಶ್ವತ್ಥದ ಸ್ವಾತಂತ್ರ್ಯ ಸಂಗ್ರಾಮದ ಗ್ಯಾಲರಿ ಮತ್ತೊಂದು ಕಂಬಾಲಪಲ್ಲಿ ಆಗುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version