ಲೈಫ್ ಸ್ಟೈಲ್
ಶಿಲೀಂಧ್ರ ತಗುಲಿದ ಧಾನ್ಯ ತರಕಾರಿಗಳನ್ನು ಬಳಸುವಾಗ ಎಚ್ಚರ..!
ಬೆಳಿಗ್ಗೆ,ಮಧ್ಯಾಹ್ನ ಸಾಯಂಕಾಲ ಮತ್ತು ರಾತ್ರಿ ಯಾವಾಗಲಾದರೂ, ಊಟವಿರಲಿ-ಉಪಹಾರವಿರಲಿ ಏನನ್ನಾದರೂ ತಿನ್ನುವಾಗ ನನಗೆ ನಂಜಿಕೊಳ್ಳಲು ಈರುಳ್ಳಿ ಬೇಕೇಬೇಕು. ತುತ್ತಿಗೊಮ್ಮೆ ಕಚ್ಚಿ ತಿಂತಾನೇ ಇರುತ್ತೇನೆ.ಅಪ್ಪ-ಅವ್ವನಿಂದ ಬಂದ ಚಾಳಿ ಅದು. ಮೊನ್ನೆ ಖಾನಾವಳಿಯಲ್ಲಿ ಊಟಮಾಡುವಾಗ ಜೊತೆಗೆ ತಂದಿಟ್ಟ ಈರುಳ್ಳಿಯನ್ನು ನೋಡಿ ಎಲ್ಲರಿಗೂ ಕೇಳುವಂತೆ.”ಈರುಳ್ಳಿಗೆ ಶಿಲೀಂಧ್ರ ಹತ್ತಿದೆ.
ಇದನ್ನು ತಿಂದರೆ ಗಿರಾಕಿಯ ಆರೋಗ್ಯದ ಗತಿಯೇನು? ಸ್ವಚ್ಚವಾಗಿ ತೊಳೆದು ಹೆಚ್ಚಿ. ಗಿರಾಕಿಗಳೇ ದೇವರಲ್ಲವೇ ನಿಮಗೆ.ಅವರ ಆರೋಗ್ಯ ನಿಮಗೆ ಇಂಫಾರ್ಟೆಂಟು ಅಲ್ಲವಾ?” ಎಂದು ಉಸಿರು ಬಿಡದೇ ಹೇಳಿಬಿಟ್ಚೆ. ತಕ್ಷಣ ಎಚ್ಚೆತ್ತುಕೊಂಡ ಹುಡುಗನೊಬ್ಬ ಅದನ್ನು ತಗೆದು ಬೇರೆ ತಂದಿಟ್ಟ.ಈರುಳ್ಳಿ ಅಷ್ಟೇ ಅಲ್ಲ ಬೇರೆಬೇರೆ ಹಸಿಯಾಗಿ, ಕುದಿಸದೇ ತಿನ್ನುವ ಅನೇಕ ಧಾನ್ಯ ತರಕಾರಿಗಳಿಗೂ ಶಿಲೀಂಧ್ರ ತಗುಲಿರುತ್ತವೆ. ಅವುಗಳಿಂದ ಏನೇನು ಸಮಸ್ಯೆ ಉಂಟಾಗುತ್ತೋ ಏನೋ? ಎಂದು ಚಿಂತಿಸುತ್ತಿದ್ದಾಗ ಡಾ. ಸಂತೆಕಡೂರು ಪ್ರಸನ್ನ ಸರ್ ಅವರ ವಾಲ್ ಲ್ಲಿ ಈ ಬರಹ ಕಂಡಿತು. ನೀವೂ ಓದಿ ಸಾಧ್ಯವಾದಷ್ಟು Share ಮಾಡಿ. ಎಲ್ಲರೂ ವಿಷವನ್ನೇ ತಿನ್ನುತ್ತಿದ್ದಾರೆ.
ಇಲ್ಲಿರುವ ಈರುಳ್ಳಿಯ ಚಿತ್ರವನ್ನು ಕಳಿಸಿದವರು ಕಥೆಗಾರರಾದ ಕರ್ಕಿ ಕೃಷ್ಣಮೂರ್ತಿಯವರು. ಸು ಕಾದಂಬರಿ ಓದಿ ಮೆಚ್ಚಿಕೊಂಡು ಕೃಷ್ಣಮೂರ್ತಿಯವರು ಇತ್ತೀಚೆಗೆ ಕರೆ ಮಾಡಿದ್ದರು. ನಾವು ಕಾದಂಬರಿಯ ಬಗ್ಗೆ ಚರ್ಚಿಸುವಾಗ ಈ ರೀತಿ ಶಿಲಿಂಧ್ರದಿಂದ ಕೊಳೆತಿರುವ ಈರುಳ್ಳಿಯ ಬಗ್ಗೆ ಮಾತು ಬಂತು. ಇದೆ ವಿಷಯವನ್ನು ಪ್ರೊಫೆಸರ್ ಮಲ್ಲಿಕಾರ್ಜುನ ಹಿರೇಮಠರು ಮತ್ತು ಅಪ್ರತಿಮ ಓದುಗರಾದ ರಾಜು ಹಗ್ಗದ ಅವರು ಕೂಡ ಕೇಳಿದ್ದರು. ಎಲ್ಲರ ಮನೆಯಲ್ಲೂ ಈ ರೀತಿ ಕೊಳೆತಿರುವ ಈರುಳ್ಳಿ ನೋಡಿರುತ್ತೇವೆ. ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಮತ್ತು ಕಡ್ಲೆಕಾಯಿಯನ್ನು ಹೆಚ್ಚಾಗಿ ಬಳಸುವುದರಿಂದ ಅಲ್ಲಿ ಜನ ಇವುಗಳನ್ನು ಇನ್ನು ಹೆಚ್ಚಾಗಿ ಕಾಣಬಹುದು.
ನಮ್ಮ ಮನೆಗಳಲ್ಲಿ ಈ ರೀತಿ ಕೊಳೆತಿರುವ ಈರುಳ್ಳಿ, ಕಡ್ಲೆಕಾಯಿ, ಜೋಳ ಮತ್ತು ಇನ್ನಿತರೇ ಆಹಾರ ಪದಾರ್ಥಗಳು ಕಂಡಾಗ ಕೆಲವರು ಅದನ್ನು ತೆಗೆದು ಕಸಕ್ಕೆ ಹಾಕುತ್ತಾರೆ. ಇನ್ನು ಕೆಲವರು ತೊಳೆದು ಬಳಸಬಹುದು. ಇನ್ನು ಕೆಲವರು ಏನೂ ಆಗುವುದಿಲ್ಲವೆಂದು ತಿನ್ನಲೂ ಬಹುದು. ಈ ಶಿಲಿಂಧ್ರಗಳು ಸಾಮಾನ್ಯ ಶಿಲಿಂಧ್ರಗಳಲ್ಲ. ಇವುಗಳನ್ನು ಅಪ್ಪಿತಪ್ಪಿಕೂಡ ಬಳಸಲು ಹೋಗಬಾರದು. ಅದರಲ್ಲೂ ಈರುಳ್ಳಿ ಸಿಪ್ಪೆಯ ಮೇಲ್ಪದರದಲ್ಲಿ ಕಪ್ಪಗಿದ್ದರೆ ಅದನ್ನು ತೆಗೆದು ತೊಳೆದು ಬಳಸಬಹುದು.
ಅದು ತೀರಾ ಆಳಕ್ಕೆ ಇಳಿದಿದ್ದರೆ ಅದನ್ನು ಬಿಸಾಕುವುದು ಒಳ್ಳೆಯದು. ಇಲ್ಲದಿದ್ದರೆ ನಮಗೆ ಅದರಲ್ಲಿರುವ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುವಿನಿಂದ ತೊಂದರೆಯಾಗಬಹುದು. ಅದರಲ್ಲೂ ಕೊಳೆತ ಕಡ್ಲೆಕಾಯಿಯನ್ನು ಜೋಳವನ್ನು ತಿನ್ನಲೂ ಬಾರದು ಅಥವಾ ಎಣ್ಣೆ ತೆಗೆಯಲು ಬಳಸಲೂ ಬಾರದು. ಅದರಿಂದ ಲಿವರ್ ಕ್ಯಾನ್ಸರ್ ಬರಬಹುದು. ಇಲ್ಲಿ ಕೊಳೆತ ಕಾಫಿ ಬೀಜದಿಂದ ಹೇಗೆ ನಮ್ಮ ದೇಹದ ಅಂಗಗಳಿಗೆ ತೊಂದರೆಯಾಗುತ್ತದೆ ಎಂದು ಚಿತ್ರದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಆದ್ದರಿಂದ ನಾವು ತಿನ್ನುವ ಆಹಾರದ ಬಗ್ಗೆಯೂ ತುಂಬಾ ಹುಷಾರಾಗಿರಬೇಕು. ಆಧುನಿಕ ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪೊಕ್ರೇಟಿಸ್ ಹೇಳಿರುವ ಪ್ರಕಾರ ನಮ್ಮ ಆಹಾರವೇ ಔಷದವಾಗಬೇಕು. ಔಷಧವೇ ನಮ್ಮ ಆಹಾರವಾಗಬೇಕು. ಕೊಳೆತ ಆಹಾರಗಳು ನಮ್ಮ ಆರೋಗ್ಯಕ್ಕೆ ಕಂಟಕ ತರಬಹುದು.
-ಪ್ರಸನ್ನ ಸಂತೇಕಡೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243