ದಿನದ ಸುದ್ದಿ
ತಾತ್ಕಾಲಿಕ ಸಿಎಂಗೆ ಅಧಿಕಾರ ಕೊಟ್ಟು ಚಿಕಿತ್ಸೆಗಾಗಿ ತೆರಳಲಿರುವ ಪರಿಕ್ಕರ್
ಸುದ್ದಿದಿನ ಡೆಸ್ಕ್: ಪಿತ್ತ ಜನಕಾಂಗ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು ಅವರು ಚಿಕಿತ್ಸೆಗಾಗಿ ನ್ಯೂಯಾರ್ಕ್‍ಗೆ ತೆರಳಲಿದ್ದಾರೆ. ಪ್ರಯಾಣ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿ ಸ್ಥಾನವನ್ನು ಮತ್ತೊಬ್ಬರಿಗೆ ವಹಿಸಿ ಅವರು ಚಿಕಿತ್ಸೆಗೊಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವಾರವಷ್ಟೆ ಅಮೆರಿಕದಿಂಧ ಮರಳಿದ್ದ ಪರಿಕ್ಕರ್ ಅವರು ಗೋವಾದ ಕಾಂಡೋಲಿಂ ಎಂಬಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಶೀಘ್ರವೇ ಅವರು ನ್ಯೂಯಾರ್ಕ್‍ಗೆ ವಾಪಸ್ ತೆರಳುವ ಸಾಧ್ಯತೆಗಳಿವೆ ಎಂದು ಆಪ್ತ ಮೂಲಗಳು ತಿಳಿಸಿವೆ
ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮೊದಲಾದ ನಾಯಕರು ಯೋಗಕ್ಷೇಮ ವಿಚಾರಿಸಿದ್ದಾರೆ.
ಮುಂದಿನ ಸಿಎಂ ಯಾರು?
ಗೋವಾದಲ್ಲಿ ಬಿಜೆಪಿ ಸರಕಾರ ರಚಿಸಲು ಕಾರಣವಾದ ಮಹಾರಾಷ್ಟ್ರ ಗೋಮಂತಕ್ ಪಾರ್ಟಿಯ ರಾಮಕೃಷ್ಣ ಸುದಿನ್ ಅವರು ತಾತ್ಕಾಲಿಕ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಗೋವಾಗೆ ಇಬ್ಬರು ಮೇಲ್ವಿಚಾರಕರ ತಂಡವನ್ನು ಕಳುಹಿಸುತ್ತಿದ್ದ ಪರಿಸ್ಥಿತಿ ಅವಲೋಕಿಸಿ ಸಿಎಂ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.