ಲೈಫ್ ಸ್ಟೈಲ್

ಭಾಗ 1 | ಏನಿದು ಮೆಡಿಕಲ್ ಮಾಫಿಯಾ..?

Published

on

  • ಡಾ. ಎನ್ ಬಿ.ಶ್ರೀಧರ,ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಮಾತೆತ್ತಿದರೆ “ಮೆಡಿಕಲ್ ಮಾಫಿಯಾ ಪ್ರಪಂಚವನ್ನೇ ಆಳುತ್ತಿದೆ. ವೈದ್ಯರೆಲ್ಲಾ ಇದರ ಕೈಗೊಂಬೆಗಳು. ಔಷಧ ಕಂಪನಿಗಳೆಲ್ಲಾ ಧನಪಿಪಾಸುಗಳು, ವೈದ್ಯರೆಲ್ಲಾ ಇವರ ಗುಲಾಮರು. ಕಾರ್ಪೋರೇಟ್ ಆಸ್ಪತ್ರೆಗಳೆಲ್ಲಾ ಮನುಷ್ಯರ ಅನಾರೋಗ್ಯವನ್ನೇ ಶೋಷಣೆ ಮಾಡಿಕೊಂಡು ಹಣಕೀಳುವ ಸಂಸ್ಥೆಗಳು” ಎಂದು ನಾವು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಮತ್ತು ಅನೇಕ ಜನಸಾಮಾನ್ಯರ ಚರ್ಚೆಯಲ್ಲಿ ನೋಡುತ್ತಾ ಜನ ಈ ವ್ಯವಸ್ಥೆಯ ಬಗ್ಗೆ ರೇಜಿಗೆ ಬೆಳೆಸಿಕೊಂಡಿರುವುದನ್ನು ನೋಡುತ್ತೇವೆ.

ಮುಂದುವರೆದು ಸಮಾಜದಲ್ಲಿ ಪ್ರತಿಷ್ಠಿರಾಗಿರುವ ಡಾ: ಬಿ.ಎಂ.ಹೆಗಡೆಯವರೂ ಸಹ ಇದನ್ನು ಪುರಸ್ಕರಿಸಿಯೇ ಮಾತನಾಡುತ್ತಾರೆ. ಇದನ್ನು ಅಲ್ಲಗಳೆಯುವಂತಿಲ್ಲವಾದರೂ ಸಹ ಪೂರ್ಣವಾಗಿ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಮೂಲತ ವೈದ್ಯಕೀಯ ವೃತ್ತಿ ಮತ್ತು ಉಧ್ಯಮ ಇದರಲ್ಲಿ ವ್ಯತ್ಯಾಸವಿದೆ ಎಂಬುದನ್ನು ನಾವು ಅರಿಯಲೇ ಬೇಕು. “ರೋಗ ಗುಣಪಡಿಸುವಿಕೆ ಒಂದು ಕಲೆ, ವೈದ್ಯಕೀಯ ಶಿಕ್ಷಣ ಒಂದು ವೃತ್ತಿ, ಆದರೆ ಆರೋಗ್ಯ ರಕ್ಷಣೆ ಒಂದು ಉಧ್ಯಮ ಎಂಬ” ಘೋಷವಾಖ್ಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು.

ವೈದ್ಯಕೀಯ ಶಿಕ್ಷಣ ಸಾಮಾನ್ಯರ ಪಾಲಿಗೆ ಇಂದು ಗಗನ ಕುಸುಮ. ಎಷ್ಟೇ ಪ್ರತಿಭಾನ್ವಿತರಾದರೂ ಸಹ ಪ್ರತಿಭಾ ಸ್ಪರ್ಧೆಯನ್ನು ಎದುರಿಸಿ, ವೈದ್ಯಕೀಯಕ್ಕೆ ಸೀಟು ಪಡೆದು 5 ವರೆ ವರ್ಷಗಳ ಕಠಿಣ ಪರಿಶ್ರಮವೆದುರಿಸಿ ಪಾಸಾಗಿ ಹೊರಬಂದರೆ ಆತನದು ಮುಗಿಯುವುದು ಎಂಬಿಬಿಎಸ್ ಎಂಬ ಸ್ನಾತಕ ಪದವಿ ಮಾತ್ರ. ಇಂದು ಈ ಪದವಿ ಕೇವಲ ಡೊಲೊ 650 ಮಾತ್ರೆ ಬರೆದು ಕೊಡುವುದಕ್ಕೆ ಸೀಮಿತಗೊಳಿಸಿದೆ ಸಮಾಜ.

ಹಾಗಿದ್ದರೆ ಸ್ನಾತಕೋತ್ತರ ಪದವಿ ಪಡೆಯುವುದು ಸುಲಭವೇ ? ಕೊಟ್ಯಾಂತರ ಕೊಟ್ಟು ಸೀಟು ಪಡೆದು ಎಂ ಡಿ ಅಥವಾ ಎಂ ಎಸ್ ಮಾಡಬೇಕು. ಅದರಲ್ಲೂ ಸಹ ಉತ್ತಮ ಶಾಖೆಗಳಲ್ಲಿ ಸ್ನಾತಕ ಪಡವಿ ಪಡೆಯುವುದು ಸುಲಭವೇ? ಜೀವವನ್ನೇ ತೇಯಬೇಕು. ಒಬ್ಬ ವೈದ್ಯ ಎಂ ಡಿ ಅಥವಾ ಎಂ ಎಸ್ ಪದವಿ ಮುಗಿಸಿ ಹೊರಬರಬೇಕಾದರೆ ಕನೀಷ್ಟ 2-3 ಕೋಟಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಸಾಲ ಸೋಲ ಮಾಡಿ ಪದವಿ ಪಡೆದರೆ ಅದರ ಅಸಲು ಮತ್ತು ಬಡ್ಡಿ ತೆರಬೇಕಾಗುವುದು ಪದವಿ ಮುಗಿದ ಕೂಡಲೇ ಪ್ರಾರಂಭವಾಗಿ ಬಿಡುತ್ತದೆ. ಇದಾದ ನಂತರ ಯಾವುದೋ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ಅವರು ಕೊಟ್ಟ ಸಂಬಳ ಪಡೆದು ಒಂದಿಷ್ಟು ವರ್ಷ ಕೆಲಸ ನಿರ್ವಹಿಸಬೇಕು. ಅಲ್ಲಿ ಎಷ್ಟು ವರ್ಷ ಇರಲಿ ಸಾಧ್ಯ? ಪದವಿ ಮುಗಿಸಿದ ಎಲ್ಲರೂ ಜನಪ್ರಿಯರಾಗಲು ಸಾಧ್ಯವೇ? ಕಷ್ಟಪಡಬೇಕಲ್ಲ? ಒಂದಿಷ್ಟು ಹೆಚ್ಚುಕಮ್ಮಿಯಾದರೂ ಸಹ ಜನರಿಂದ ಬೈಗುಳ, ಹೊಡೆತ, ಗ್ರಾಹಕರ ವೇದಿಕೆಯಿಂದ ಕೋಟ್ಯಾಂತರ ದಂಡ ಎಲ್ಲಾ ಗ್ಯಾರಂಟಿ.

ಇದಾದ ಮೇಲೆ ಡಾ: ಬಿ ಎಂ ಹೆಗಡೆಯರಂತ ಪ್ರಖ್ಯಾತ ಪದ್ಮವಿಭೂಷಣರಿಂದ “ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|ಯಮಸ್ತು ಹರತಿ ಪ್ರಾಣಾನ್ ವೈದ್ಯಯೋ ಪ್ರಾಣಾನ್ ಧನಾತಿಚ|” ಅಂದರೆ “ಯಮರಾಜ ಸಹೋದರನಾದ ಓ ವೈದ್ಯರಾಜನೇ, ನಿನಗೆ ನಮಸ್ಕಾರ. ಯಮ ಪ್ರಾಣವನ್ನು ಮಾತ್ರ ಕಿತ್ತುಕೊಳ್ಳುತ್ತಾನೆ. ವೈದ್ಯ ಪ್ರಾಣದೊಂದಿಗೆ ಹಣವನ್ನೂ ಕಿತ್ತುಕೊಳ್ಳುತ್ತಾನೆ” ಎಂಬಂತ ಮಾತು ಕೇಳಿಸಿಕೊಳ್ಳಬೇಕು.

ತಮಗಾದ ಒಂದಿಷ್ಟು ಕಹಿ ಅನುಭವವನ್ನು ಆಧರಿಸಿ ಇಡೀ ಆಧುನಿಕ ವೈದ್ಯಕೀಯ ವಿಜ್ಞಾನ ವ್ಯವಸ್ಥೆಯನ್ನೇ ಅತ್ಯಂತ ಹೀನಾಯವಾಗಿ ತೆಗಳುವ ಜನಕ್ಕೆ ಈ ಶುಭಾಷಿತ ವೇದ ವಾಕ್ಯವೇ ಆಗಿದೆ !.ಇದನ್ನೇ ಹೆಗಡೆಯವರು ಮೇಲಿಂದ ಮೇಲೆ ಉಲ್ಲೇಖಿಸಿ ಸಾರಾಸಗಾಟವಾಗಿ ಇಡೀ ವೈದ್ಯ ಕುಲವನ್ನು ಬಾಯಿಗೆ ಬಂದAತೆ ದೂಷಿಸುವುದು !

ರೋಗಿಗಳನ್ನೇ ದೇವರೆಂದು ತಿಳಿದು ಹಗಲು ರಾತ್ರಿ ಅವರ ಸೇವೆಯನ್ನೇ ಪ್ರಾಣದ ಹಂಗು ತೊರೆದು ದೇವರ ಸೇವೆಯೆಂದು ಮಾಡುವ ವೈದ್ಯರಿಲ್ಲವೇ? ಇವರ ಸಂಖ್ಯೇನು ಕಡಿಮೆಯೇ? ಅವರು ಆಧುನಿಕ ವೈದ್ಯತಿಯನ್ನು ಸಾರಾಸಾಗಾಟಾಗಿ ಪಕ್ಕಾ ದುಡ್ಡು ಮಾಡುವ ದಂಧೆಯೆಂದು ಕರೆಯುವುದು ಅನೇಕರಿಗೆ ಅಪ್ಯಾಯಮಾನವಾಗಿ ಕಂಡು ಬಿಡುತ್ತದೆ. ಆದರೆ ವ್ಯವಸ್ಥೆಯಲ್ಲಿ ಯಾರ ಹತ್ತಿರವೂ ಹೇಳಲಾರದ ಮೂಕವೇದನೆ ಅನುಭಿಸುವ ವೈದ್ಯರು ಅವರ ದು:ಖವನ್ನು ರೋಗಿಗಳ ಸೇವೆ ಮಾಡುವಲ್ಲಿ ಮರೆಯುತ್ತಾರೆ.

ಅವರು ಹೇಳುವುದು ಅರ್ಧ ಸತ್ಯ ಮಾತ್ರ. ನೆನಪಿರಲಿ ! ತಾಂತ್ರಿಕ ಶಬ್ಧಗಳನ್ನು ಸರಳಗೊಳಿಸಿ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಯಪಡಿಸಿ ಉಳಿದೆಲ್ಲವನ್ನು ಮೂಢನಂಬಿಕೆಯ ಆಸುಪಾಸು ಒಯ್ಯುವುದು ಅವರ ಹವ್ಯಾಸ. ಪದ್ಮಭೂಷಣ, ಖ್ಯಾತ ಹೃದಯ ತಜ್ಜ, ವಿದೇಶದಲ್ಲಿ ಓದಿರುವವರು, ಪ್ರಖ್ಯಾತ ವಿಶ್ವವಿದ್ಯಾಲಯವೊಂದರ ವಿಶ್ರಾಂತ ಕುಲಪತಿಗಳು ಎಂಬೆಲ್ಲಾ ವಿಶೇಷಣಗಳಿರುವುದರಿಂದ ಅವರ ಮಾತಿಗೆ ಬಹಳ ಬೆಲೆ. ಲಕ್ಷಾಂತರ ಅಭಿಮಾನಿಗಳನ್ನು ಮತ್ತು ಆರಾಧಕರನ್ನು ಹೊಂದಿರುವುದು ಇವರ ಹೆಗ್ಗಳಿಕೆ. ಇವರ ಮಾತಿಗೆ ಅದರದೇ ಆದ ತೂಕವಿದೆ !

ಹೆಗಡೆಯಂತಹ ಅತ್ಯಂತ ಗಣ್ಯರು, ಅದೂ ಅವರೇ ಕುಲಪತಿಗಳಾದ ಮಣಿಪಾಲ ಅಕಾಡೆಮಿಯಲ್ಲೇ ಈ ಕ್ಯಾಪಿಟೇಶನ್ ಹಾವಳಿ ತಡೆದು ಬಡವರಿಗೆ ವೈದ್ಯಕೀಯ ಶಿಕ್ಷಣ ದಾನ ಮಾಡಿ ತಾವೇ ದೇಶಕ್ಕೆ ಮಾದರಿಯಾಗಿ ಉಪದೇಶ ಮಾಡಬಹುದಿತ್ತಲ್ಲ? ಎನ್ನುತ್ತಾರೆ ಜನ ಸಾಮಾನ್ಯರು.

ವೈದ್ಯಕೀಯ ವೃತ್ತಿಯನ್ನು ಹಿಗ್ಗಾ ಮುಗ್ಗಾ ಟೀಕಿಸುವ ಭರದಲ್ಲಿ ಹೆಗಡೆಯವರು ಅವರು ಧನದಾಹಿಗಳಾಗಲು ಕಾರಣವಾದ ವೈದ್ಯಕೀಯ ಶಿಕ್ಷಣದ ವ್ಯವಸ್ಥೆಯ ವಾಣಿಜ್ಯೀಕರಣದ ಬಗ್ಗೆ ಒಂದು ಕಾಲದಲ್ಲಿ ಅವರೇ ಅದರ ಭಾಗವಾದದ್ದರ ಬಗ್ಗೆ ಮರೆತು ಜಾಣ ಕುರುಡು ಮತ್ತು ಜಾಣ ಕಿವುಡು ಪ್ರದರ್ಶಿಸುತ್ತಾರೆ !!. ಅದರಲ್ಲೂ ಅವರಿಗೆ ಇದು ನೆನಪು ಬಂದಿದ್ದು ಅವರು ನಿವೃತ್ತರಾದ ಮೇಲೆ ಅಲ್ಲವೇ?

ಪದ್ಮವಿಭೂಷಣದಂತ ಉನ್ನತ ಗೌರವ ಪಡೆದ ಅವರು ಶಿಕ್ಷಣದಲ್ಲಿ ಬೃಹತ್ ಆಗಿ ಆಳವಾಗಿ ಬೇರು ಬಿಟ್ಟಿರುವ ಕ್ಯಾಪಿಟೇಶನ್ ಲಾಬಿಯನ್ನು ತಡೆಯಬಹುದಿತ್ತಲ್ಲ! ವೃತ್ತಿಯಲ್ಲಿದ್ದಾಗ ಯಾರ ವಿರುದ್ಧವೂ ತುಟಿ ಪಿಟಕ್ ಎನ್ನದ ಇವರು ನಿವೃತ್ತಿಯಾದ ಕೂಡಲೇ ವೈದ್ಯಕೀಯ ವೃತ್ತಿಯನ್ನೇ ಹಾಸ್ಯಕ್ಕೀಡು ಮಾಡಿ ಅವರು ಹೆಸರು ಗಳಿಸಲು ಕಾರಣವಾದ ವಿದ್ಯೆಯನ್ನೇ ಹೀಗಳೆಯುವುದು ಇವರ ಜನಪ್ರಿಯತೆಯ ಹಪಹಪಿಕೆ ಮನ್ನಣೆಯ ದಾಹದ ಒಂದು ಮುಖ ಎಂದು ಹೇಳದೇ ಬೇರೆ ದಾರಿಯೇ ಇಲ್ಲ.

ವೈದ್ಯಕೀಯ ಸೇವೆಯಲ್ಲಿದ್ದಾಗ ಚಕಾರ ಶಬ್ಧವೆತ್ತದ ಅವರು ನಿವೃತ್ತಿಯಾದ ಕೂಡಲೇ ಅವರ ವೃತ್ತಿಯನ್ನೇ ನಿಂದಿಸುತ್ತಾ, ಆಧುನಿಕ ವೈದ್ಯಕೀಯ ಪದ್ಧತಿಯ ವೈದ್ಯರನ್ನೆಲ್ಲಾ ಹಣ ಪಿಪಾಸುಗಳು, ರಕ್ತದಾಹಿಗಳು, ಬ್ರಹ್ಮರಾಕ್ಷಸರು, ಕರುಣೆಯಿಲ್ಲದವರು ಎಂದೆಲ್ಲಾ ಬಿಂಬಿಸುತ್ತಾ ಮದುಮೇಹ, ಕೊಲೆಸ್ಟೆರಾಲ್ ಇತ್ಯಾದಿಗಳಿಗೆ ಇರುವ ಔಷಧಗಳೆಲ್ಲಾ ಔಷಧ ಕಂಪನಿಗಳ ಲಾಬಿ ಎಂದೆಲ್ಲಾ ಆಧಾರವಿಲ್ಲದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಒಂದಿಷ್ಟು ಸೋಜಿಗವೇ ಸರಿ. ಅದರಲ್ಲಿಯೂ ಸಹ ವೈದ್ಯಕೀಯ ವೃತ್ತಿ ಮತ್ತು ವೈದ್ಯಕೀಯ ಉಧ್ಯಮ ಎರಡನ್ನೂ ಸಹ ಪ್ರತ್ಯೇಕವಾಗಿ ನೋಡುವ ಸಾಹಸಕ್ಕೇ ಹೋಗಲಿಲ್ಲ ಹೆಗಡೆಯಂತಹ ಅನೇಕ ಗಣ್ಯರು !!.

ಹಾಗೆಯೇ ಗಿಡಮೂಲಿಕೆ ಔಷಧಿಗಳಲ್ಲಿನ ಲಾಭಕೋರತನ, ಗುಣ ಮಟ್ಟ ಪರೀಕ್ಷೆಯ ಕೊರತೆ, ಸಂಶೋಧನೆಯ ಕೊರತೆ, ಅಜ್ಞಾನ ಇವೆಲ್ಲವೂ ಇವರ ಕಣ್ಣಿಗೆ ಕಾಣುವುದೇ ಇಲ್ಲ..!!. ಕೊಬ್ಬರಿ ಎಣ್ಣೆ ಅತ್ಯಂತ ಲಾಭಕರ, ಅಲೋವಿರಾ ಎಲ್ಲದಕ್ಕೂ ದಿವ್ಯೌಷ್ಯದಿ ಎಂದೆಲ್ಲಾ ಹೇಳುವುದು ಒಂದಿಷ್ಟು ಸತ್ಯಕ್ಕೆ ಸಮೀಪ ಆದರೆ ಇದೆಲ್ಲಾ ಸಂಶೋಧನೆಯ ಮೂಲಕವೇ ಸಾಬೀತಾಗಬೇಕು ಎಂದು ಸಂಶೋಧನೆಯ ಅನುಭವವಿರುವವರಿಗೆ ಗೊತ್ತಿರುವ ಸಂಗತಿ ಈ ಗಣ್ಯಮಾನ್ಯರಿಗೆ ತಿಳಿದಿಲ್ಲವೇ?.

ಕಂಡದ್ದೆನ್ನಾ ಕುರುಡಾಗಿ ನಂಬುವವರಿಗೆ ಅವರ ನಂಬಿಕೆಯನ್ನು ಅತ್ಯಂತ ದೊಡ್ಡ ಹಿನ್ನೆಲೆಯ ವ್ಯಕ್ತಿ ಹೇಳಿದಾಗ ಅಪ್ಯಾಯಮಾನವಾಗಿ ತೋರುವುದರಲ್ಲಿ ಸಂಶಯವಿಲ್ಲ. ಜೀವನ ಶೈಲಿಯ ಬದಲಾವಣೆ, ಉತ್ತಮ ಆಹಾರ ಪದ್ಧತಿ, ಯೋಗದ ಸಾಧನೆ ಎಂಬುದನ್ನೆಲ್ಲಾ ಸಮರ್ಥಿಸುವ ಅವರು ಆಧುನಿಕ ವೈದ್ಯಕೀಯ ವಿಜ್ಞಾನಿಕ ವಿಧಾನವನ್ನು ಟೀಕಿಸುವ ಭರದಲ್ಲಿ ಮೂಢನಂಬಿಕೆಯತ್ತ ಜಾರಿ ಬಿಡುತ್ತಾರೆ. ಭಾಷಣ ಮಾಡುವಾಗ ಬರುವ ಚಪ್ಪಾಳೆಗಳು ಅವರಿಗೆ ಬಹುಶ: ಅತ್ಯಂತ ಖುಷಿ ತಂದಿರಬೇಕು. ಹಾಗೆಂದ ಮಾತ್ರಕ್ಕೆ ಅವರು ಹೇಳಿದ್ದೆಲ್ಲಾ ನಿಜವಲ್ಲ. ಬಹುಷ: ಅವರಿಗೆ ವಯಸ್ಸಾಗಿರುವುದರಿಂದ ವಯೋಸಹಜ ಅರುಮರು ಬಂದಿರಬಹುದು ಎಂದುಕೊಳ್ಳಬೇಕು ಅಷ್ಟೇ!!

ಇವರು ಹೇಳುವಂತೆ ಕಾಯಿಲೆಗಳು ಬರಲು ದ್ವೇಷ ಕಾರಣವಂತೆ! ಇದು ಮನುಷ್ಯರ ಮಟ್ಟಿಗೆ ನಿಜ. ಹಾಗೆಂದರೆ ಯಾರನ್ನೂ ಜೀವನದಲ್ಲೇ ದ್ವೇಷಿಸದ ಗಿಡ, ಮರ, ಪ್ರಾಣಿ, ಪಕ್ಷಿ ಮತ್ತು ಹಸುಗೂಸು, ಬುದ್ಧಿ ಮಾಂಧ್ಯರಿಗೆಲ್ಲಾ ಕಾಯಿಲೆಯೇ ಬರಬಾರದಿತ್ತು. ಅಷ್ಟೇ ಯಾಕೆ ? ನಮಗೆ ಕಾಯಿಲೆ ತರುವ ಬ್ಯಾಕ್ಟೀರಿಯಾ ಮತ್ತು ವೈರಾಣುಗಳಿಗೂ ಸಹ ಕಾಯಿಲೆ ಬರುತ್ತವೆ. ಇವುಗಳಿಗೇ ಕಾಯಿಲೆ ತರುವ ಬೇರೆ ಬ್ಯಾಕ್ಟಿರಿಯಾ ಮತ್ತು ವೈರಸ್‌ಗಳಿವೆ. ಇವು ಯಾರನ್ನು ದ್ವೇಷಿಸಿವೆ?

ಇವರು ಮೇಲಿಂದ ಮೇಲೆ ಹೇಳುವ ಸಂಸ್ಕೃತದ “ವೈದ್ಯರಾಜೋ ನಮಸ್ತುಭ್ಯಂ ಯಮರಾಜ ಸಹೋದರ” ಎಂಬುದು ಅನೇಕರಿಗೆ ಅಪ್ಯಾಯಮಾನ !!. ಇದರಲ್ಲಿ ಇತರ ಎಲ್ಲ ಪದ್ಧತಿಯ ವೈದ್ಯರನ್ನೂ ಅವರು ಜಾಣತನದಿಂದ ಅವರು ಸೇರಿಸುವುದೇ ಇಲ್ಲ. ಅಥವಾ ಅವರ ಪ್ರಕಾರ ಅವರು ವೈದ್ಯರಲ್ಲವೇನೋ?


ಹಾಗಿದ್ದರೆ ಏನಿದು ಮೆಡಿಕಲ್ ಮಾಫಿಯಾ? ವೈದ್ಯಕೀಯ ವೃತ್ತಿ ಮತ್ತು ವೈದ್ಯಕೀಯ ಉಧ್ಯಮಗಳ ನಡುವಿನ ವ್ಯತ್ಯಾಸ ತಿಳಿಯಬೇಕೆ? ಭಾಗ-2 ಓದಲು ಸಿದ್ಧರಾಗಿ.


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version