ದಿನದ ಸುದ್ದಿ
ಲೇಖಕಿ ಅರುಂಧತಿ ರಾಯ್ ಗೆ ‘PEN Pinter’ ಪ್ರಶಸ್ತಿ
ದಿಟ್ಟ ಮನಸ್ಸಿನ ಗಟ್ಟಿ ಲೇಖಕಿ ಅರುಂಧತಿ ರಾಯ್ ಅವರಿಗೆ ಈ ಬಾರಿಯ PEN Pinter Prize ಲಭಿಸಿದೆ.”ಅಳುಕದ ಹಾಗೂ ವಿಚಲಿತಗೊಳ್ಳದ” (Unflinching and Unswerving) ಅವರ ಬರಹಗಳನ್ನು ಗಮನಿಸಿದ PEN International ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. PEN ಅಂದರೆ Poets, Essayists, Novelists ಎಂಬುದರ ಸಂಕ್ಷಿಪ್ತ ರೂಪ. ಆದರೆ ಅದು ಈಗ Poets, playwrights, Editors, Essayists, Novelists, Jurnalists ಮತ್ತು Historians ಗಳನ್ನೂ ಸಹ ಒಳಗೊಂಡಿದೆ.
ಈ ಸಂಸ್ಥೆಯು 1921ರಲ್ಲಿಯೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರವಾದ ಸಂಘಟನೆಯಾಗಿ ರಚನೆಯಾಗಿತ್ತು. ಈ ಸಂಸ್ಥೆಯು ಖ್ಯಾತ ಬ್ರಿಟಿಷ್ ನಾಟಕ ರಚನಾಕಾರ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಟರಾಗಿದ್ದ ಹೆರಾಲ್ಡ್ ಪಿಂಟರ್ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿದೆ. ಪಿಂಟರ್ ಅವರು ತಮ್ಮ ಸೇವೆಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದವರು.
ಅರುಂಧತಿ ರಾಯ್ ಅವರು ಹಲವಾರು ವರ್ಷಗಳಿಂದ ಜನಪರ ಲೇಖಕರಾಗಿ, ಚಿಂತಕರಾಗಿ, ಭಾಷಣಕಾರ್ತಿಯಾಗಿ ಪ್ರಗತಿಪರ ಮನಸ್ಸುಗಳಲ್ಲಿ ಮೆಚ್ವುಗೆಯ ಸ್ಥಾನ ಪಡೆದಿರುವವರು. ಕಳೆದ 14 ವರ್ಷಗಳ ಹಿಂದಿನ ಕಾಶ್ಮೀರ ಕುರಿತ ಹೇಳಿಕೆಗಾಗಿ ಕಾನೂನು ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಬಂಡವಾಳಶಾಹಿಗಳ ಕರ್ಮಕಾಂಡವನ್ನು ದಾಖಲೆ ಸಹಿತ ಬಯಲುಗೊಳಿಸಿದವರು ಅರುಂಧತಿ ರಾಯ್ ಅವರು ಆದಿವಾಸಿಗಳ, ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಪರವಾಗಿ ಸದಾ ಹೋರಾಡುತ್ತಾ ಬಂದಿದ್ದಾರೆ.
ಜೂನ್ 27 ರ ಇಂದು ಪ್ರಶಸ್ತಿ ಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಯ್ ” PEN Pinter ಪ್ರಶಸ್ತಿ ಸ್ವೀಕರಿಸಲು ನನಗೆ ಅತೀವ ಸಂತೋಷವಾಗಿದೆ. ಪ್ರಪಂಚ ಇಂದು ಅನುಭವಿಸುತ್ತಿರುವ ಬಹುತೇಕ ಗ್ರಹಿಕೆಗೆ ಸಿಗದ ತಿರುವುಗಳ ಬಗ್ಗೆ ಬರೆಯುವಾಗ ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗೆ ಇದ್ದಾರೆ ಎಂದೇ ನಾನು ಭಾವಿಸುತ್ತೇನೆ. ಅವರಿಲ್ಲದ, ಅವರ ಸ್ಥಾನವನ್ನು ತುಂಬಲು ನಮ್ಮಲ್ಲಿ ಕೆಲವರಾದರೂ ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕಾಗಿದೆ” ಎಂದು 62 ವರ್ಷ ವಯಸ್ಸಿನ ಅರುಂಧತಿ ರಾಯ್ ತಿಳಿಸಿದ್ದಾರೆ. ( ಬಹರ ಕೃಪೆ : Barukolu ಫೇಸ್ಬುಕ್ ಪೇಜ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243