ದಿನದ ಸುದ್ದಿ
ಮೋದಿ ಅವಧಿಯಲ್ಲಿ ಹೆಚ್ಚಿನ ಆರ್ಟಿಐ ಅರ್ಜಿ ಸಲ್ಲಿಕೆ; ಎಷ್ಟು ತಿರಸ್ಕೃತ, ಎಷ್ಟಕ್ಕೆ ಪ್ರತಿಕ್ರಿಯೆ
ಸುದ್ದಿದಿನ ಡೆಸ್ಕ್: ದೇಶದ ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿ ಕೋರಿ ಸಾವಿರಾರು ಸಂಖ್ಯೆಯಲ್ಲಿ ಆರ್ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಹಿಂದಿನ ಸರ್ಕಾರದ ಅವಧಿಗಿಂತ ಮೋದಿ ಅವಧಿಯಲ್ಲಿ ಅತಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಪಿಟಿಐ ವರದಿಗಾರನೊಬ್ಬ ಸಲ್ಲಿಸಿದ್ದ ಆರ್ಟಿಐಗೆ ಪಿಎಂಒ ನೀಡಿರುವ ಮಾಹಿತಿಯ ಗಮನಿಸಿದಾಗ ನಾಗರಿಕರು ಸಲ್ಲಿಸಿದ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬ ಅಂಶ ತಿಳಿಯುತ್ತದೆ. 2016-17ನೇ ಸಾಲಿನಲ್ಲಿ 12,500 ಅರ್ಜಿಗಳು ಸಲ್ಲಿಕೆಯಾಗಿವೆ. ಇದು 2012ಕ್ಕಿಂತ ಅಧಿಕವಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
2016-17ನೇ ಸಾಲಿನಲ್ಲಿ 12,787, 2015-16ರಲ್ಲಿ 11,138, 2014-15ನೇ ಸಾಲಿನಲ್ಲಿ 12,674 ಅರ್ಜಿಗಳು ಸಲ್ಲಿಕೆಯಾಗಿವೆ. 2013-14ರಲ್ಲಿ 7,077 ಮತ್ತು 2012-13ರಲ್ಲಿ 5,828 ಪ್ರಶ್ನೆಗಳನ್ನು ಕೇಳಲಾಗಿದೆ. 2013ರಿಂದ 2018 ವರೆಗೆ ಪಿಎಂಒಗೆ ಸಲ್ಲಿಕೆಯಾಗಿರುವ ಆರ್ಟಿಐ, ತಕರಾರು ಅರ್ಜಿಗಳ ವಿವರ ನೀಡುವಂತೆ ಪಿಟಿಐ ಕರೆಸ್ಪಾಂಡೆನ್ಸ್ ಸಲ್ಲಿಸಿದ್ದ ಅರ್ಜಿಗೆ ಪಿಎಂಒ ಉತ್ತರಿಸಿದೆ.
ತಿರಸ್ಕೃತ ಅರ್ಜಿಗಳು:
ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಯಾವ ವರ್ಷ ಎಷ್ಟು ಅರ್ಜಿ ತಿರಸ್ಕರಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. 2016-17ರಲ್ಲಿ 1,306, 2015-16ರಲ್ಲಿ 2,234, 2014-15ರಲ್ಲಿ 2,795 ಆರ್ಟಿಐ ಅರ್ಜಿಗಳು ತಿರಸ್ಕೃತಗೊಂಡಿವೆ. 2013-14ನೇ ಸಾಲಿನಲ್ಲಿ 1,450, 2012-13ರಲ್ಲಿ 1,130 ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ. ಮಾಹಿತಿ ಹಕ್ಕು ಕಾಯಿದೆಯ ನಿಬಂಧನೆಗಳ ಪ್ರಕಾರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿದೆ.
ಭಾರತೀಯ ನಾಗರಿಕರು RTI ಕಾಯ್ದೆಯಡಿ ಸರ್ಕಾರದ ಇಲಾಖೆಗಳಿಂದ ಆಡಳಿತ ಸಂಬಂಧಿತ ಮಾಹಿತಿಯನ್ನು ಕಾಲ ಮಿತಿಯೊಳಗೆ ಪಡೆದುಕೊಳ್ಳಬಹುದು. ಸರ್ಕಾರ ನೀಡಿದ ಮಾಹಿತಿಯನ್ನು ಅರ್ಜಿದಾರರಿಗೆ ತೃಪ್ತಿ ಆಗದಿದ್ದರೆ ಸಂಬಂಧಿತ ಇಲಾಖೆಗೆ ತಕರಾರು ಅರ್ಜಿ ಸಲ್ಲಿಸಬಹುದು.
2016-17ರಲ್ಲಿ 1,592, 2015-16ರಲ್ಲಿ 1,478, 2014-15ರಲ್ಲಿ 1,306, 2013-14ರಲ್ಲಿ 701 ಹಾಗೂ 2012-13ರಲ್ಲಿ 632 ತಕರಾರು ಅರ್ಜಿ ಸಲ್ಲಿಕೆಯಾಗಿವೆ. ಇವುಗಳಲ್ಲಿ 2016-17ರಲ್ಲಿ 1,098, 2015-16ರಲ್ಲಿ 1,155, 2014-15ರಲ್ಲಿ 1,035, 2013-14 ಮತ್ತು 2012-13ನೇ ಸಾಲಿನಲ್ಲಿ ಕ್ರಮವಾಗಿ 506, 493 ತಕರಾರು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಪಿಎಂಒ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401