ದಿನದ ಸುದ್ದಿ
‘ನೀನಿಲ್ಲದೆ ನನಗೇನಿದೆ’ ಕವಿ ಎಂ.ಎನ್. ವ್ಯಾಸರಾವ್ ಅಸ್ತಂಗತ
ಸುದ್ದಿದಿನ ಡೆಸ್ಕ್ | ಕವಿ, ಕತೆಗಾರ, ಎಂ. ಎನ್. ವ್ಯಾಸರಾವ (73) ಇಂದು ಬೆಳಗ್ಗೆ (ಜುಲೈ 15) ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ‘ಭಾವಗೀತೆ ಲೋಕದ ಕವಿ’ ಎಂದೇ ಹೆಸರಾಗಿದ್ದ ಇವರು ಪತ್ನಿ, ಪುತ್ರಿ, ಪುತ್ರ ಸೇರಿದಂತೆ ಅವರ ಸಾಹಿತ್ಯದ ಅಭಿಮಾನಿಗಳ ವರ್ಗವನ್ನು ಅಗಲಿದ್ದಾರೆ.
ಕವಿ ವ್ಯಾಸರಾವ್ ಬಗ್ಗೆ ಒಂದಷ್ಟು
ಕವಿ, ಕಾದಂಬರಿಕಾರರಾದ ಎಂ.ಎನ್. ವ್ಯಾಸರಾವ್ ಹುಟ್ಟಿದ್ದು ಮೈಸೂರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ. ಪ್ರಾಥಮಿಕ ಶಿಕ್ಷಣ ಮೈಸೂರು. ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪದವಿ. ಡ್ರಾಮ್ಯಾಟಿಕ್ಸ್‌ನಲ್ಲಿ ಡಿಪ್ಲೊಮ. ಉದ್ಯೋಗಕ್ಕಾಗಿ ಬೆಂಗಳೂರು- ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್. 35 ವರ್ಷ ಸೇವೆಯ ನಂತರ ಸ್ವಯಂ ನಿವೃತ್ತಿ. ನಿರಂತರ ಸಾಹಿತ್ಯರಚನೆ. ಸಿನಿಮಾ ಸಾಹಿತ್ಯದ ಬರಹದ ಒತ್ತಡಕ್ಕೆ ಸಿಕ್ಕಿಬಿದ್ದದ್ದೇ ಹೆಚ್ಚು. ಬೆಳ್ಳಿ ಮೂಡುವ ಮುನ್ನ-ಕವನ ಸಂಕಲನ ; ಮಳೆಯಲ್ಲಿ ನೆನೆದ ಮರಗಳು-ಕಥಾಸಂಕಲನ; ಉತ್ತರ ಮುಖಿ-ಮೂರು ನೀಳ್ಗತೆಗಳ ಸಂಕಲನ. ಸ್ಕಾಟ್ ಡಬಲ್ ಎಕ್ಸ್, ಅಖಲಾ ಮೈ ಡಾರ್ಲಿಂಗ್ ಮುಂತಾದ ಪತ್ತೇದಾರಿ ಕಾದಂಬರಿಗಳು. ನಿರೋಷ, ನದಿಮೂಲ ಮೊದಲಾದ ಸೃಜನಶೀಲ ಕಾದಂಬರಿ. ನಾಟಕ-ಕತ್ತಲಲ್ಲಿ ಬಂದವರು ಪ್ರಕಟಿತ ಕೃತಿಗಳು. ಹಲವಾರು ಕಥೆಗಳು ತೆಲುಗು, ಹಿಂದಿ, ಬಂಗಾಳಿ, ಸಿಂಧಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ಚೀನಿ, ಇಂಗ್ಲಿಷ್, ಐರಿಶ್, ಫ್ರೆಂಚ್,. ಉರ್ದು, ಸಿಂಧಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401