ದಿನದ ಸುದ್ದಿ
ಬೆಳಗಾವಿ ಖಡೇ ಬಜಾರ್ ಪಿಎಸ್ಐ ಗಣಾಚಾರಿ ಬೈಕ್ ಅಪಘಾತದಲ್ಲಿ ನಿಧನ
ಸುದ್ದಿದಿನ,ಬೆಳಗಾವಿ: ಇಲ್ಲಿಯ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ ಗಣಾಚಾರಿ ಅವರು ಬೆಳಗಿನ ಜಾವ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದಾಗ, ಅವರ ದ್ವಿಚಕ್ರವಾಹನ ಸ್ಕಿಡ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಯಳ್ಳೂರು ಹೊರವಲಯ ಕೆ.ಎಲ್.ಇ ಆಸ್ಪತ್ರೆಯ ಬಳಿ ನಸುಕಿನ ಜಾವ 6.30 ರ ಸುಮಾರಿಗೆ ಘಟನೆ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಹೆಚ್ಚಿನ ಸಮಯ ಕೆಲಸ ಮಾಡಬೇಕಾಗಿ ಬಂದಿದೆ. ಇದರಿಂದಾಗಿ ವಿಶೇಷವಾಗಿ ನಿವೃತ್ತಿ ಸಮೀಪದಲ್ಲಿರುವ ಅಥವಾ ಹೆಚ್ಚು ವಯಸ್ಸಾಗಿರುವ ಪೊಲೀಸರಿಗೆ ತೊಂದರೆಯಾಗುತ್ತಿದೆ. ನಿನ್ನೆ ರಾತ್ರಿ ಒಂಭತ್ತೂವರೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಯಳ್ಳೂರಿನಲ್ಲಿರುವ ತಮ್ಮ ಮನೆಗೆ ಹೋಗಿದ್ದ ಗಣಾಚಾರಿ ಅವರು ನಸುಕಿನ ಜಾವ ಮತ್ತೆ ಸೇವೆಗೆ ಹಾಜರಾಗಲು ದ್ವಿಚಕ್ರವಾಹನದ ಮೇಲೆ ಬರುತ್ತಿದ್ದರು. ಬರುವಾಗ ನಾಯಿ ಅಡ್ಡ ಬಂದು ವಾಹನ ಸ್ಕಿಡ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಗಣಾಚಾರಿ ಅವರು ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿ ಪಿಎಸ್ಐ ಆಗಿದ್ದರು. ಸಪ್ಟೆಂಬರ್ ತಿಂಗಳಲ್ಲಿ ನಿವೃತ್ತಿಯಾಗುವವರಿದ್ದರು. ವರ್ಷದ ಹಿಂದಷ್ಟೇ ಯಳ್ಳೂರಿನಲ್ಲಿ ಮನೆ ಕಟ್ಟಿಸಿದ್ದರು. ಅಷ್ಟರೊಳಗೆ ಈ ದುರ್ಘಟನೆ ನಡೆದಿದೆ. ಮೃತರು ಪುತ್ರ, ಹೆಂಡತಿ ಮತ್ತು ತಂದೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243