ರಾಜಕೀಯ
ಮಾನಹಾನಿಗೆ ರಾಜಕೀಯ ಪಿತೂರಿ ನಡೆಸಲಾಗಿದೆ : ಕೆ.ಎಸ್.ಈಶ್ವರಪ್ಪ
ಸುದ್ದಿದಿನ, ಶಿವಮೊಗ್ಗ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ಅವರು ನಿನ್ನೆ ರಾಜಿನಾಮೆ ಸಲ್ಲಿಸಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜಿನಾಮೆ ಘೋಷಿಸಿದ್ದ ಈಶ್ವರಪ್ಪ ಅವರು, ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಪತ್ರ ಸಲ್ಲಿಸಿದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರ ರಾಜಿನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ರಾಜಿನಾಮೆ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪಕ್ಷ ಮತ್ತು ಕಾರ್ಯಕರ್ತರಿಗೆ ಮುಜುಗರ ತಪ್ಪಿಸುವ ಉದ್ದೇಶದಿಂದ ರಾಜಿನಾಮೆ ನೀಡಿದ್ದಾಗಿ ತಿಳಿಸಿದರು. ತಮ್ಮ ಮಾನಹಾನಿಗೆ ರಾಜಕೀಯ ಪಿತೂರಿ ನಡೆಸಲಾಗಿದ್ದು, ತನಿಖೆ ಮೂಲಕ ಸತ್ಯಾಂಶ ಬಹಿರಂಗಪಡಿಸುವಂತೆ ಈಶ್ವರಪ್ಪ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ತನಿಖೆಯಲ್ಲಿ ತಮಗೆ ಸಂಪೂರ್ಣ ವಿಶ್ವಾಸವಿದ್ದು, ತಮ್ಮ ವಿರುದ್ಧದ ಆರೋಪ ನಿರಾಧಾರ ಎಂಬುದು ಸಾಬೀತಾಗಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243