ದಿನದ ಸುದ್ದಿ

ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

Published

on

ಸುದ್ದಿದಿನ, ದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಪ್ರಧಾನಮಂತ್ರಿ ಸಂಗ್ರಹಾಲಯ ಉದ್ಘಾಟಿಸಿದರು.

ಸಂಸದೀಯ ವ್ಯವಸ್ಥೆಯ ಮುಖ್ಯ ಜವಾಬ್ದಾರಿ ದೇಶದ ಪ್ರಧಾನ ಮಂತ್ರಿಯ ಕಚೇರಿಯಾಗಿದೆ. ಇಂದು ಪ್ರಧಾನಮಂತ್ರಿ ಸಂಗ್ರಹಾಲಯ ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿಂದು ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲು ನಿರ್ಮಿಸಲಾಗಿರುವ ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆಗೊಳಿಸದ ನಂತರ ಅವರು ಮಾತನಾಡಿದರು.

ದೇಶ ಸ್ವಾತಂತ್ರ್ಯ ಪಡೆದ 75ವರ್ಷಗಳ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವಾಗ ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆ ಉತ್ತಮ ಸ್ಫೂರ್ತಿಯಾಗಿದೆ. ಈ ೭೫ ವರ್ಷಗಳಲ್ಲಿ ದೇಶ ಹಲವು ಹೆಮ್ಮೆಯ ಕ್ಷಣಗಳನ್ನು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಇಡೀ ದೇಶ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಅವರನ್ನು ಗೌರವದಿಂದ ಸ್ಮರಿಸುತ್ತಿದೆ, ಬಾಬಾ ಸಾಹೇಬರು ನೀಡಿದ ಸಂವಿಧಾನ ನಮಗೆ ಸಂಸದೀಯ ವ್ಯವಸ್ಥೆಯ ಆಧಾರ ನೀಡಿದೆ ಎಂದರು. ಸ್ವಾತಂತ್ರ್ಯ ಭಾರತದ ನಂತರ ರಚನೆಯಾದ ಪ್ರತಿಯೊಂದು ಸರ್ಕಾರವೂ ದೇಶವನ್ನು ಇಂದಿನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದೆ. ಇಂದು ಈ ಸಂಗ್ರಹಾಲಯ ಪ್ರತಿ ಸರ್ಕಾರ ನೀಡಿದ ಕೊಡುಗೆಯ ಜೀವಂತ ಪ್ರತಿಬಿಂಬವಾಗಿದೆ ಎಂದರು.

ನಮ್ಮ ಬಹುತೇಕ ಪ್ರಧಾನ ಮಂತ್ರಿಗಳು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವರು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ದೂರದ ಗ್ರಾಮೀಣ ಪ್ರದೇಶಗಳಿಂದ, ಅತ್ಯಂತ ಬಡ ಕುಟುಂಬದಿಂದ, ರೈತ ಕುಟುಂಬದಿಂದ ಪ್ರಧಾನಿ ಹುದ್ದೆಯನ್ನು ತಲುಪುವುದು ಭಾರತೀಯ ಪ್ರಜಾ ಪ್ರಭುತ್ವದ ಶ್ರೇಷ್ಠ ಸಂಪ್ರದಾಯಗಳಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ನುಡಿದರು. ಈ ಮ್ಯೂಸಿಯಂನಲ್ಲಿ ಎಷ್ಟು ಭೂತಕಾಲವಿದೆಯೋ ಅಷ್ಟೇ ಭವಿಷ್ಯವೂ ಇದೆ.

ಈ ವಸ್ತುಸಂಗ್ರಹಾಲಯ ದೇಶದ ಜನರನ್ನು ಭಾರತದ ಅಭಿವೃದ್ಧಿಯ ಪಯಣವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತದೆ. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮುಂದಿನ ಪೀಳಿಗೆಗೆ ಜ್ಞಾನ, ಆಲೋಚನೆಗಳು, ಅನುಭವಗಳ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ.

ಇಲ್ಲಿಗೆ ಬರುವವರು ಪಡೆಯುವ ಮಾಹಿತಿ, ಅವರಿಗೆ ತಿಳಿದಿರುವ ಸಂಗತಿಗಳು ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ದೇಶದ ಪ್ರತಿಯೊಬ್ಬ ಪ್ರಧಾನಿಯೂ ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳ ಈಡೇರಿಕೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವುದೆಂದರೆ ಸ್ವತಂತ್ರ ಭಾರತದ ಪಯಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version