ದಿನದ ಸುದ್ದಿ
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಯಡಿ ಪಿಂಚಣಿದಾರರ ನೊಂದಣಿ
ಸುದ್ದಿದಿನ, ಧಾರವಾಡ : ಕೇಂದ್ರ ಕಾರ್ಮಿಕ ಮಂತ್ರಾಲಯದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ವಯೋಮಾನದ ನಂತರ ದೊರೆಯುವ ಮಾಸಿಕ ರೂ.3.000/-ದೊರೆಯುವ ಯೋಜನೆಗೆ ಗುರುತಿನ ಪತ್ರ ವಿತರಿಸುವ ಕಾರ್ಯಕ್ಕೆ ಇಂದು ಧಾರವಾಡದಲ್ಲಿ ಚಾಲನೆ ನೀಡಲಾಯಿತು.
ಅಸಂಘಟಿತ ವಲಯದಲ್ಲಿ ಬರುವ ಆಟೋ ಚಾಲಕರು, ಮನೆಗೆಲಸದವರು, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲರು ಸೇರಿದಂತೆ ನಿಶ್ಚಿತ ಆದಾಯ ಹೊಂದಿರದ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಾಲಯವು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಮಾಸಿಕ ರೂ.15,000/- ಕ್ಕಿಂತ ಹೆಚ್ಚು ಆದಾಯ ಹೊಂದಿರದ, ಪಿಎಫ್, ಇಎಸ್‌ಐ, ಎನ್‌ಪಿಎಸ್ ಯೋಜನೆಗಳಡಿ ಫಲಾನುಭವಿಗಳಾಗದಿರುವ 18 ವರ್ಷದಿಂದ 40ವರ್ಷದೊಳಗಿನ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯಡಿನೊಂದಾಯಿಸಿಕೊಳ್ಳಬಹುದಾಗಿದೆ.
ಪಿಂಚಣಿ ಯೋಜನೆಯಡಿ ನೊಂದಾಯಿತ ಕಾರ್ಮಿಕರು ತಮ್ಮ60 ವರ್ಷ ಆಗುವವರೆಗೆ ಪ್ರತಿ ತಿಂಗಳು ಗರಿಷ್ಠ ರೂ.200/- ಗಳ ಕಂತನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳು ಪಾವತಿಸಬೇಕಾದ ಮೊತ್ತ ಅವರು ಹೊಂದಿರುವ ವಯೋಮಾನಕ್ಕೆ ಅನುಗುಣವಾಗಿ ನಿಗದಿಯಾಗುತ್ತದೆ.
ಧಾರವಾಡ ವಲಯದ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯ ಗುರುತಿನ ಪತ್ರ ವಿತರಣೆ ಕಾರ್ಯವನ್ನು ಕಾರ್ಮಿಕ ಇಲಾಖೆಯ ಧಾರವಾಡ ಕಚೇರಿಯಲ್ಲಿ ಇಂದು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಂ ಬಂಗಾಲಿ, ಹಿರಿಯ ಕಾರ್ಮಿಕ ನಿರೀಕ್ಷಕ ಬಿ.ಆರ್. ಜಾಧವ, ಭುವನೇಶ್ವರ ಕೋಟಿಮಠ, ಕಚೇರಿ ಸಿಬ್ಬಂದಿಗಳಾದ ದಾವಲಬಿ ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಲಿಂಕ್ ಕೆಳಗಿನ ಕ್ಲಿಕ್ ಮಾಡಿ
https://nvshq.org/scheme/pm-shramyogi-mandhan-pension-yojana/
ಸುದ್ದಿದಿನ.ಕಾಂ|ವಾಟ್ಸಾಪ್|9986715401