ದಿನದ ಸುದ್ದಿ
ಬೆಳಗಿನ ಪ್ರಮುಖ ಸುದ್ದಿಗಳು
ಬೆಳಗಿನ ಪ್ರಮುಖ ಸುದ್ದಿಗಳು
- ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹಣೆಯಲ್ಲಿ ಗಣನೀಯ ಸುಧಾರಣೆಯಾಗಿದ್ದು, ಕಳೆದ ಜೂನ್‌ನಲ್ಲಿ ಒಂದು ಲಕ್ಷದ 44 ಸಾವಿರದ 616 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ಕಳೆದ ಜೂನ್‌ನಲ್ಲಿ 5 ಸಾವಿರದ 103 ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, ಈ ವರ್ಷದ ಜೂನ್‌ನಲ್ಲಿ 8 ಸಾವಿರದ 845ಕೋಟಿ ರೂಪಾಯಿ ಸಂಗ್ರಹವಾಗಿ, ಶೇಕಡ 73ರಷ್ಟು ಬೆಳವಣಿಗೆಯಾಗಿದೆ.
- ಭೂ ಸವಕಳಿ ಮತ್ತು ಅಂತರ್ಜಲ ಸಂರಕ್ಷಣೆಯಂತಹ ಅಭಿವೃದ್ಧಿ ಸವಾಲುಗಳನ್ನು ಎದುರಿಸುವಲ್ಲಿ ಭೂ ವೈಜ್ಞಾನಿಕ ಮಾಹಿತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಲೋಕಾರ್ಪಣೆಯಾಗಿರುವ ಜಿಎಸ್‌ಐ ಪ್ರಯೋಗಾಲಯ ಎಲ್ಲ ಸಂಸ್ಥೆಗಳಿಗೆ ಅತ್ಯಾಧುನಿಕ ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಸೌಲಭ್ಯ ಕಲ್ಪಿಸಲು ಬೆನ್ನೆಲುಬಾಗಿದೆ ಎಂದು ಹೇಳಿದರು.
- ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇಂದಿನಿಂದ ಆರಂಭವಾಗಲಿದೆ.
- ರಾಜ್ಯದಲ್ಲಿ ರಸಗೊಬ್ಬರ ಅಭಾವವಿಲ್ಲ. ಒಂದು ವೇಳೆ ಕೊರತೆ ಉಂಟಾದರೆ ಅಗತ್ಯ ಪ್ರಮಾಣದಲ್ಲಿ ಪೂರೈಕೆ ಮಾಡುತ್ತೇವೆ, ಕೇಂದ್ರದಿಂದ ಶೇ 15 ರಷ್ಟು ಹೆಚ್ಚುವರಿ ರಸಗೊಬ್ಬರ ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬ ಹೇಳಿದ್ದಾರೆ.
- ರಾಜ್ಯದಲ್ಲಿ ನಿನ್ನೆಯಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವಾಗಿದ್ದು, ಪ್ಲಾಸ್ಟಿಕ್ ಬಳಕೆ ಮೇಲೆ ಕಣ್ಗಾವಲು ಹಾಕುವಂತೆ ಮಾಲೀನ್ಯ ನಿಯಂತ್ರಣ ಮಂಡಳಿ ನಗರ ಇತರೆ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರಿಸರ ರಕ್ಷಣೆಗೆ ತೆಗೆದುಕೊಂಡ ನಿರ್ಣಯದ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅಧ್ಯಕ್ಷ ಡಾ. ಶಾಂತ ವಿ. ತಿಮ್ಮಯ್ಯ ತಿಳಿಸಿದ್ದಾರೆ.
- ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲ ಪೌರ ಕಾರ್ಮಿಕರಿಗೆ ಬಜೆಟ್ ಘೋಷಣೆಯ ಅನುಸಾರ ಮಾಸಿಕ 2ಸಾವಿರ ರೂಪಾಯಿಗಳ ಭತ್ಯೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಸಂಕಷ್ಟ ಪರಿಹಾರ ಭತ್ಯೆ ನೀಡುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243