ಕ್ರೀಡೆ
ಬೆಳಗಿನ ಪ್ರಮುಖ ಸುದ್ದಿಗಳು
ಬೆಳಗಿನ ಪ್ರಮುಖ ಸುದ್ದಿಗಳು
- ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ನಿನ್ನೆ ಪ್ರಮಾಣ ವಚನ ಸ್ವೀಕರಿದ್ದು, ಅವರಿಗೆ ದೇಶ-ವಿದೇಶಗಳಿಂದ ಅಭಿನಂದನೆ ಮಹಾಪೂರವೇ ಹರಿದು ಬರುತ್ತಿದೆ. ಬಳಿಕ ಮಾತನಾಡಿದ ನೂತನ ರಾಷ್ಟ್ರಪತಿ ಅವರು, ದೇಶ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವಾಗ ದೇಶ ತಮ್ಮನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದೆ ಎಂದು ನುಡಿದರು. ಕಾರ್ಗಿಲ್ ವಿಜಯ ದಿವಸ್ ಮುನ್ನಾದಿನವಾದ ನಿನ್ನೆ ದೇಶದ ಜನತೆಗೆ ಶುಭಾಶಯ ಕೋರಿ, ಈ ದಿನ ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಸಂಕೇತವಾಗಿದೆ ಎಂದರು.
- ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಕಾರ್ಕಳದ ಮಣಿ ರಾಜ ಶೆಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಗೆ ಭಟ್ಕಳದ ಗೋವಿಂದ ಜಟ್ಟಪ್ಪ ನಾಯ್ಕ, ಮೃಗಾಲಯ ಪ್ರಾಧಿಕಾರಕ್ಕೆ ಮೈಸೂರಿನ ಕುವೆಂಪು ನಗರದ ಎಂ. ಶಿವಕುಮಾರ್, ಅರಣ್ಯ ಅಭಿವೃದ್ಧಿ ನಿಗಮಕ್ಕೆ ಶಿಕಾರಿಪುರದ ಎನ್. ರೇವಣ್ಣಪ್ಪ ಕೊಳಗಿ, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷರನ್ನಾಗಿ ಮಡಿಕೇರಿಯ ಎಂ.ಎನ್. ರವಿ ಕಾಳಪ್ಪ, ಎಂ.ಸಿ ಅಂಡ್ ಎ ಗೆ ಗದಗದ ಕುರ್ತಕೋಟೆಯ ಎಂ.ಎಸ್. ಕರಿಗೌಡ್ರ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಶಂಕರ ಬಿ ಪಾಟೀಲ್ ಮುನೇನ ಕೊಪ್ಪ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಕೆ.ವಿ. ನಾಗರಾಜ್ ನೇಮಕ ಮಾಡಲಾಗಿದೆ.
- ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ರಾಜ್ಯಸಭೆಗೆ ನಿನ್ನೆ ತಿಳಿಸಿದ್ದಾರೆ. ಈ ಕುರಿತು ಲಿಖಿತ ಉತ್ತರ ನೀಡಿರುವ ಅವರು, 2020-21ನೇ ಸಾಲಿನಲ್ಲಿ 716 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದ್ದು, ಕಳೆದ ವರ್ಷ 778 ದಶಲಕ್ಷ ಟನ್‌ಗೆ ಏರಿಕೆಯಾಗಿದೆ. ಈ ವರ್ಷದ ಜೂನ್ ಅಂತ್ಯದ ವೇಳೆಗೆ 204ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 166 ದಶಲಕ್ಷ ಟನ್ ಉತ್ಪಾದನೆಯಾಗಿತ್ತು. ಕಲ್ಲಿದ್ದಲು ಉತ್ಪಾದನೆಗೆ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಕೋಲ್ ಇಂಡಿಯಾ ಲಿಮಿಟೆಡ್ ಮೂಲಕ ಕಳೆದ ವರ್ಷ 52 ಕಲ್ಲಿದ್ದಲು ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- ಇಂದು ಕಾರ್ಗಿಲ್ ವಿಜಯ ದಿವಸ. ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕ ಟ್ರಸ್ಟ್‌ನಿಂದ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಬೆಳಗ್ಗೆ 4.45ಕ್ಕೆ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುತಾತ್ಮ ವೀರಯೋಧರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
- ದೇಶದ ೭೫ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಗಸ್ಟ್ 11 ರಿಂದ 15 ನೇ ತಾರೀಖಿನವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ದೇಶಭಕ್ತಿ ಮೆರೆಯಲು ಬೆಂಗಳೂರು ನಗರ ವ್ಯಾಪ್ತಿಗೆ ರಾಜ್ಯ ಸರ್ಕಾರ 2 ಲಕ್ಷ ರಾಷ್ಟ್ರಧ್ವಜಗಳನ್ನು ಬಿಬಿಎಂಪಿಗೆ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರದ ಹರ್ ಘರ್ ಮೆ ತಿರಂಗಾ ಎಂಬ ಅಭಿಯಾನದಡಿ ರಾಷ್ಟ್ರಧ್ವಜಗಳನ್ನು ಪಾಲಿಕೆಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.
- ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಫಲಿತಾಂಶವನ್ನು ಇದೇ 30ರಂದು ಪ್ರಕಟಿಸಲಾಗುವುದು ಎಂದು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ನಿನ್ನೆ ಹೇಳಿದ್ದಾರೆ. ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿತ್ತು’ ಎಂದರು.
- ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಒಟ್ಟಿಗೆ ಸೇರಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಹಂತ-ಹಂತವಾಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
- ಇಂದಿನ ಸ್ವಾತಂತ್ರ್ಯದ ಫಲ, ನಮ್ಮ ಹಿರಿಯರ ತ್ಯಾಗ, ಬಲಿದಾನದ ಸಂಕೇತವಾಗಿದೆ. ಭವಿಷ್ಯದ ಅರಿವು ಮೂಡಬೇಕಾದರೆ, ಇತಿಹಾಸದ ಅವಲೋಕನ ಮಾಡಿಕೊಳ್ಳಬೇಕು ಎಂದು ಗಣಿ, ಭೂ ವಿಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
- ವಿಶ್ವ ಅಥ್ಲಿಟಿಕ್ ಚಾಂಪಿಯನ್ ಶಿಪ್‌ನ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಸಾಧನೆಗೆ ಲೋಕಸಭೆಯಲ್ಲಿ ನಿನ್ನೆ ಸ್ಪೀಕರ್ ಓಂ ಬಿರ್ಲಾ, ಪ್ರಶಂಸೆ ವ್ಯಕ್ತಪಡಿಸಿದರು. ಅಥ್ಲಿಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ಪ್ರಥಮ ಬೆಳ್ಳಿ ಪದಕವಾಗಿದೆ. ಈ ಗೆಲುವಿನಿಂದ ದೇಶಾದ್ಯಂತ ಜನರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಚೋಪ್ರಾ ಅವರಿಗೆ ಸದನದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243