ದಿನದ ಸುದ್ದಿ
2027ರ ಜನಗಣತಿಗೆ ಸಿದ್ದತೆ ; ಅಧಿಕೃತವಾಗಿ ಆರಂಭ
ಸುದ್ದಿದಿನಡೆಸ್ಕ್:2027ರ ಜನಗಣತಿಗೆ ಸಿದ್ದತೆಗಳು ಅಧಿಕೃತವಾಗಿ ಆರಂಭಗೊಂಡಿದ್ದು, ಕಳೆದ ತಿಂಗಳ 16 ರಂದು ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಗೆ ನಿನ್ನೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಜನಗಣತಿ ಸಂಬಂಧ ಜುಲೈ 3 ಹಾಗೂ 4 ರಂದು ನವದೆಹಲಿಯಲ್ಲಿ ಎರಡು ದಿನಗಳ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಜನಗಣತಿ ಕಾರ್ಯಾಚರಣೆಯ ನಿರ್ದೇಶಕರು, ಜನಗಣತಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಹಾಗೂ ಜನಗಣತಿ ಆಯುಕ್ತರ ಕಾರ್ಯಾಲಯದ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ, ಜನಗಣತಿ ಹಾಗೂ ಸಂಬಂಧಿತ ಚಟುವಟಿಕೆಗಳ ಕುರಿತು ಮಾರ್ಗಸೂಚಿ ಮತ್ತು ದತ್ತಾಂಶ ಸಂಗ್ರಹಣೆ, ನಿರ್ವಹಣೆ, ಆಡಳಿತ ಘಟಕಗಳ ಚೌಕಟ್ಟು ಅಂತಿಮಗೊಳಿಸುವುದು, ಜನಗಣತಿ ಸಿಬ್ಬಂದಿ ತರಬೇತಿ ಸೇರಿದಂತೆ ಇತರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜನಗಣತಿ ಕಾರ್ಯಗಳಿಗೆ ತಂತ್ರಜ್ಞಾನ ಆಧಾರಿತ ನವೀನ ವಿಧಾನಗಳನ್ನು ಜಾರಿಗೆ ತರುವ ಉದ್ದೇಶಿದಿಂದ ಈ ಸಮ್ಮೇಳನ ನಡೆಸಲಾಯಿತು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243