ದಿನದ ಸುದ್ದಿ
ಪ್ರಾಣಿಗಳ ಮೇಲೆ ನಡೆಯುವ ಅಮಾನವೀಯ ಕೃತ್ಯಗಳನ್ನು ತಡೆಯಲು ತಿಳಿದುಕೊಳ್ಳಲೇ ಬೇಕಾದ ಪ್ರಾಣಿ ಕಲ್ಯಾಣ ಕಾನೂನುಗಳಿವು : ಮಿಸ್ ಮಾಡ್ದೆ ಓದಿ
- ಡಾ.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ
ಹಿಂದಿನಿಂದಲೂ ತಮ್ಮ ಪಾಡಿಗೆ ತಾವು ಜೀವಿಸುತ್ತಿದ್ದ ವನ್ಯ ಪ್ರಾಣಿಗಳನ್ನು ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೋ ಪ್ರಾಣಿಗಳನ್ನು ಪಳಗಿಸಿ ನಾಡು ಪ್ರಾಣಿಗಳನ್ನಾಗಿ ಪರಿವರ್ತಿಸಿದ್ದೇವೆ. ಮಾತು ಬಾರದ ಮೂಕ ಜೀವಿಗಳನ್ನು ಮನುಷ್ಯರಾದ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ಸ್ವಾರ್ಥಕ್ಕಾಗಿ ಜೀವನ ನಡೆಸಲು, ಆರ್ಥಿಕವಾಗಿ ಸದೃಢವಾಗಲು, ಆಟವಾಡಲು, ನಮ್ಮ ಜೀವನದ ಒಡನಾಡಿಗಳಾಗಿ, ಮನರಂಜನೆ ಪಡೆಯಲು ಹಾಗು ಸಾಂಪ್ರದಾಯಿಕವಾಗಿ ಬಂದಿರುವ ಕಾರ್ಯಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲಾ ಆದರೂ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮಮೇಲೆಯೇ ಇದೆ ಅಲ್ಲವೇ, ಎಲ್ಲವೂ ತಿಳಿದಿದ್ದರು ಸ್ವಾರ್ಥಿಗಳಾದ ಕೆಲವರು ಮಾಡುತ್ತಿರುವುದಾದರು ಏನು?
ಅದುವೆ ಹಿಂಸೆ..!
ಇತ್ತೀಚೆಗಷ್ಟೇ ಕೇರಳ, ಹಿಮಾಚಲ್ ಪ್ರದೇಶ ಹಾಗೂ ಛತ್ತೀಸ್ ಗಡದಲ್ಲಿ ನಡೆದ ಅಮಾನವೀಯ ಕೃತ್ಯಗಳು ಮಾನವೀಯತೆಯನ್ನು ಮೀರಿವೆ. ಛತ್ತೀಸ್ಗಡ ರಾಜ್ಯದ ರಾಯಪುರದ ಲೀಲಾಂಬ ಹಳ್ಳಿಯಲ್ಲಿ ಒಂದು ಹಸುವಿನ ಬಾಯಿಯಲ್ಲಿ, ಹಿಮಾಚಲ್ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ದಹಾದ್ ಗ್ರಾಮದಲ್ಲಿ ಕೂಡ ಒಂದು ಗರ್ಭಿಣಿ ಹಸುವಿನ ಬಾಯಿಯಲ್ಲಿ ಸ್ಪೋಟಕವನ್ನಿಟ್ಟು ಘಾಸಿಗೊಳಿಸಿದ್ದಾರೆ.
ಹಾಗೂ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರ ಅರಸಿ ಬಂದ ಗರ್ಭಿಣಿ ಆನೆಯ ಬಾಯಿಗೆ ತಿನ್ನಲು ಸ್ಪೋಟಕ ತುಂಬಿದ ತೆಂಗಿನಕಾಯಿಯನ್ನಿಟ್ಟು ಹತ್ಯೆಗೈದಿರುವುದು ವಿಶ್ವವ್ಯಾಪಿ ಖಂಡನೆಗೆ ಗುರಿಯಾಗಿದೆ. ಅಷ್ಟೇ ಏಕೆ ನಮ್ಮ ಕಣ್ಣೆದುರಲ್ಲೇ ಎಷ್ಟೋ ಹಿಂಸೆಗಳು ಕಣ್ಮರೆಯಾಗಿ ಹೋಗುತ್ತಿವೆ. ಹೀಗೆಯೇ ಆಗುತ್ತಿದ್ದರೆ ನಮ್ಮ ದೇಶದ ಹೆಸರು ಹಾಗು ಪ್ರಾಣಿ ಸಂಕುಲ ಸಂಪೂರ್ಣವಾಗಿ ನಾಶವಾಗುವುದು ಖಚಿತ.
ಪ್ರಾಣಿಗಳು ಕೇವಲ ಆಟವಾಡುವ ವಸ್ತುವಲ್ಲ ಅವುಗಳಿಗೂ ನಮ್ಮಷ್ಟೇ ಜೀವಿಸುವ ಹಕ್ಕಿರುವುದು, ಜೀವಿಗಳಲ್ಲೆ ಹೆಚ್ಚು ಸ್ವಾರ್ಥಿಯಾಗಿರುವ ಹಾಗೂ ಪ್ರಾಣಿ ಸಂಕುಲದ ಸ್ಥಳವನ್ನು ಅಕ್ರಮಿಸುತ್ತಿರುವ ನಾವುಗಳು ಪ್ರಾಣಿಗಳ ಜೀವ ರಕ್ಷಣೆ ಮಾಡಬೇಕೆ ಹೊರತು ಅವುಗಳ ಜೀವಕ್ಕೆ ಕುತ್ತು ತರಬಾರದು. ಇಷ್ಟೆಲ್ಲಾ ಆದಮೇಲಾದರು ನಾವುಗಳು ಪ್ರಾಣಿಗಳ ರಕ್ಷಣೆಗೆ ಸಜ್ಜಾಗಬೇಕು, ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಅದರ ವಿವಿಧ ಕಾನೂನಿನ ಬಗ್ಗೆ ಅರಿವು ಮುಡಿಸಿಕೊಳ್ಳಲೇಬೇಕು.
ಮುಖ್ಯವಾಗಿರುವ ಪ್ರಾಣಿ ಕಲ್ಯಾಣ ಕಾನೂನುಗಳು ಹೀಗಿವೆ
- Prevention of Cruelty to Animals Act – 1960,
- Wild Life Protection Act – 1972,
- Transport of Animal Rules – 1975, -Performing Animals Registration (Amendment) Rules 2001
ಈ ಕಾನೂನುಗಳ ಪ್ರಕಾರ ಈ ಕೆಳಕಂಡ ಅಮಾನವೀಯ ಕೃತ್ಯಗಳ ಮೇಲೆ ಕ್ರಮ ಜರುಗಿಸಬಹುದು..
ಪ್ರಾಣಿಗಳನ್ನು ಹೊಡಿಯೋದು, ಒದಿಯೋದು, ಧೀರ್ಘಕಾಲ ಸವಾರಿ ಮಾಡೋದು, ಹೆಚ್ಚುಭಾರ ಹೆರೋದು ಹಾಗು ಚಿತ್ರಹಿಂಸೆ ನೀಡೋದು ಮಾಡಿದರೆ PCA – 1960, ಸೆಕ್ಷನ್ 11 (1) (a) ಪ್ರಕಾರ ಕಾನೂನು ಕ್ರಮ ಜರುಗಿಸಬಹುದಾಗಿದೆ.
- ವಯಸ್ಸಾಗಿರುವ, ಗಾಯವಾಗಿರುವ ಹಾಗೂ ಅನರ್ಹ ಪ್ರಾಣಿಯನ್ನು ಕೆಲಸಕ್ಕೆ ಬಳಸುವ ಹಾಗಿಲ್ಲ.
- ಹಾನಿಕಾರಕ ಔಷಧವನ್ನು ಪ್ರಾಣಿಗಳ ಮೇಲೆ ಬಳಸುವ ಹಾಗಿಲ್ಲ.
- ಅಸ್ವಸ್ಥತೆ ಹಾಗೂ ನೋವು ಮೂಡಿಸುವಹಾಗೆ ಪ್ರಾಣಿಯನ್ನು ವಾಹನದಲ್ಲಿ ಸಾಗಣೆ ಮಾಡುವ ಹಾಗಿಲ್ಲ.
- ಕಾನೂನಿನ ಪ್ರಕಾರ ಶಿಫಾರಸ್ಸು ಮಾಡಿರುವ ಪಂಜರಕ್ಕಿಂತ ಸಣ್ಣ ಪಂಜರಗಳಲ್ಲಿ ಪ್ರಾಣಿಗಳನ್ನು ಇಡುವ ಹಾಗಿಲ್ಲ.
- ಪ್ರಾಣಿಗಳನ್ನು ದೊಡ್ಡ ಸರಪಣಿ ಹಾಗು ಅಸಮಂಜಸ ಸಮಯದವರೆಗೆ ಕಟ್ಟಿ ಹಾಕುವ ಹಾಗಿಲ್ಲ.
- ಶ್ವಾನವನ್ನು ದೀರ್ಘಕಾಲ ದೇಹಕ್ಕೆ ವ್ಯಾಯಾಮವಿಲ್ಲದೆ ಒಂದೇ ಸ್ಥಳದಲ್ಲಿ ಕಟ್ಟಿ ಹಾಕಿ ಬಂದಿಸುವ ಹಾಗಿಲ್ಲ.
- ಪ್ರಾಣಿಗಳನ್ನು ಸಾಕುವವರು ಅವುಗಳಿಗೆ ಊಟ, ನೀರು ಹಾಗೂ ಆಶ್ರಯ ಕಡ್ಡಾಯವಾಗಿ ನೀಡಲೇಬೇಕಿದೆ
- ಸಾಕುಪ್ರಾಣಿಗಳನ್ನು ಅವುಗಳ ವಯಸ್ಸಾದಮೇಲೆ ಅಥವಾ ಖಾಯಿಲೆಬಿದ್ದರೆ ಹಾಗೆಯೇ ತ್ಯಜಿಸುವ ಹಾಗಿಲ್ಲ.
- ಪ್ರಾಣಿಗಳನ್ನು ಅಮಾನವೀಯವಾಗಿ ವಿರೂಪಗೊಳಿಸುವ ಅಥವಾ ಸಾಯಿಸುವಹಾಗಿಲ್ಲ.
- ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯ ಜೊತೆಗೆ ಜಗಳವಾಡಲು ಪ್ರೇರೇಪಿಸುವಹಾಗಿಲ್ಲ.
- ಒಂದು ಪ್ರಾಣಿಗೆ ಇನ್ನೊಂದು ಜೀವಂತ ಪ್ರಾಣಿಯನ್ನು ತಿನ್ನಲು ಕೊಡುವುದು ಅಥವಾ ತಿನ್ನಲು ಪ್ರೇರೇಪಿಸುವ ಹಾಗಿಲ್ಲ.
- ಹೆಣ್ಣು ಪ್ರಾಣಿಗಳು ಹಾಲು ಜಾಸ್ತಿ ನೀಡುವ ಹಾಗೆ ಹಾನಿಕಾರಕ ಔಷಧ (Oxytocin) ನೀಡುವ ಹಾಗಿಲ್ಲ.
- ಪ್ರಾಣಿಗಳಿಗೆ ತರಬೇತಿ ಹಾಗು ಪ್ರದರ್ಶನ ನೀಡಲು Animal Welfare Board of India ಮಂಡಳಿಯಿಂದ ನೋಂದಣಿ ಕಡ್ಡಾಯವಾಗಿ ಮಾಡಿಸಬೇಕು.
- ಹುಲಿ, ಸಿಂಹ, ಕೋತಿ, ಚಿರತೆ, ಕರಡಿ, ಎತ್ತು ಹಾಗೂ ಇನ್ನಿತರ ಪ್ರಾಣಿಗಳನ್ನು ಬೀದಿಗಳಲ್ಲಿ ಪ್ರದರ್ಶಿಸಲು ಬಳಸುವ ಹಾಗಿಲ್ಲ.
- ಪ್ರಾಣಿಗಳ ಜೊತೆಗೆ ದೈಹಿಕ ಸಂಪರ್ಕ ಅಥವಾ ಅನೈತಿಕ ಸಂಬಂಧ ಹೊಂದುವ ಹಾಗಿಲ್ಲ.
ಈ ರೀತಿ ಯಾವುದಾದರು ಆಪತ್ತಿನಲ್ಲಿರುವ ಪ್ರಾಣಿಗಳು ಕಂಡುಬಂದಲ್ಲಿ ಪುರಾವೆಯ (ಫೋಟೋ / ವಿಡಿಯೋ) ಸಮೇತ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.
(ಡಾ.ಕಮಲೇಶ್ ಕುಮಾರ್ ಕೆ ಎಸ್
ಪಶುವೈದ್ಯಾಧಿಕಾರಿಗಳು
ಪಶುಚಿಕಿತ್ಸಾಲಯ, ಮತ್ತೂರು,
ಶಿವಮೊಗ್ಗ.
ಈ ಮೇಲ್ : kskamalesh93@gmail.com
ಫೋನ್ : 9164282969)
ಸುದ್ದಿದಿನ.ಕಾಂ|ವಾಟ್ಸಾಪ್|9980346243