ದಿನದ ಸುದ್ದಿ
ಪ್ರಧಾನಿ ಮೋದಿ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ದೇಶಗಳಿಗೆ ಅಧಿಕೃತ ಪ್ರವಾಸ : ದ್ವಿಪಕ್ಷೀಯ ಮಾತುಕತೆಗಳಲ್ಲಿ ಭಾಗಿ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆಯಿಂದ ಇದೇ 4ರವರೆಗೆ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಈ ಮೂರು ದೇಶಗಳಿಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವರ್ಷ ಪ್ರಧಾನಮಂತ್ರಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಪ್ರವಾಸದ ಮೊದಲ ಚರಣದಲ್ಲಿ ಬರ್ಲಿನ್‌ಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರು ಜರ್ಮನ್ ಚಾನ್ಸ್‌ಲರ್ ಓಲಾಫ್ ಶೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಲ್ಲದೆ ಉಭಯ ನಾಯಕರು 6ನೇ ಆವೃತ್ತಿಯ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆ ಸಭೆಯ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡು ದೇಶಗಳ ಹಲವು ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನರೇಂದ್ರ ಮೋದಿ ಮತ್ತು ಓಲಾಫ್ ಶೋಲ್ಜ್ ಅವರು ಉದ್ದಿಮೆದಾರರ ಕಾರ್ಯಕ್ರಮವನ್ನು ಉದ್ದೇಶಿಸಿಯೂ ಜಂಟಿ ಭಾಷಣ ಮಾಡಲಿದ್ದಾರೆ. ಜರ್ಮನಿ ಪ್ರವಾಸದ ಬಳಿಕ 2ನೇ ಚರಣದಲ್ಲಿ ಡೆನ್ಮಾರ್ಕ್‌ಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅಲ್ಲಿನ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್‌ರಿಕ್ಸನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಡೆನ್ಮಾರ್ಕ್ ಅತಿಥ್ಯದಲ್ಲಿ ನಡೆಯಲಿರುವ 2ನೇ ಇಂಡಿಯಾ-ನಾರ್ಡಿಕ್ ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ. ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಭಾರತ-ಡೆನ್ಮಾರ್ಕ್ ಉದ್ದಿಮೆದಾರರ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಲ್ಲದೆ, ಆ ದೇಶದಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿಯೂ ಭಾಷಣ ಮಾಡಲಿದ್ದಾರೆ.
ಡೆನ್ಮಾರ್ಕ್ ದೇಶದ ಭೇಟಿಯಿಂದ ಉಭಯ ದೇಶಗಳ ನಡುವಿನ ಪ್ರಗತಿಗೆ ಉತ್ತಮ ಅವಕಾಶ ದೊರೆತಂತಾಗಿದೆ. ಪ್ರವಾಸದ ಕೊನೆಯ ಚರಣದಲ್ಲಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಅಲ್ಲಿನ ಅಧ್ಯಕ್ಷ ಇಮಾನ್ಯೂಲ್ ಮ್ಯಾಕ್ರೋಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಭಾರತ ಮತ್ತು ಫ್ರಾನ್ಸ್ ಈ ವರ್ಷ ರಾಜತಾಂತ್ರಿಕ ಬಾಂದವ್ಯದ 75ನೇ ವರ್ಷಾಚರಣೆಯ ಸಂಭ್ರಮದಲ್ಲಿವೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಮಂತ್ರಿಗಳು ಮಾತುಕತೆ ನಡೆಸುವ ಮೂಲಕ ಕಾರ್ಯತಂತ್ರ ಪಾಲುದಾರಿಕೆಯ ಮಹತ್ವಾಕಾಂಕ್ಷಿ ಅಜೆಂಡಾಗೆ ಉತ್ತೇಜನ ನೀಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243