ದಿನದ ಸುದ್ದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ; ಜರ್ಮನ್ ಚಾನ್ಸಲರ್ ಓಲಫ್ ಸ್ಕೋಲ್ಜ್ ನಡುವೆ ಬರ್ಲಿನ್‌ನಲ್ಲಿ 6ನೇ ಹಂತದ ಮಹತ್ವದ ಸಭೆ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜರ್ಮನ್ ಚಾನ್ಸಲರ್ ಓಲಫ್ ಸ್ಕೋಲ್ಜ್ ಅವರು ಬರ್ಲಿನ್‌ನಲ್ಲಿ ನಿನ್ನೆ 6ನೇ ಹಂತದ ಭಾರತ-ಜರ್ಮನಿ ಅಂತರ್ ಸರ್ಕಾರಗಳ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡರು.
ದ್ವೈವಾರ್ಷಿಕ ಐಜಿಸಿ ಸಮಾಲೋಚನಾ ಸಭೆಯಲ್ಲಿ ಉಭಯ ದೇಶಗಳ ಸಚಿವರು ಪಾಲ್ಗೊಂಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದು ಮೊದಲ ಸಭೆಯಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಜರ್ಮನ್ ಸರ್ಕಾರಕ್ಕೂ ಸಹ ಇದು ಚೊಚ್ಚಲ ಸಭೆಯಾಗಿದೆ.
ಯೂರೋಪ್‌ನ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಚರಣದಲ್ಲಿ ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿನ್ನೆ ಅಲ್ಲಿನ ಫೆಡರಲ್ ಚಾನ್ಸಲರಿ ಸಾಂಪ್ರದಾಯಿಕ ಸ್ವಾಗತ ಕೋರಿತು. ಭಾರತೀಯ ಸಮುದಾಯದವರು ಪ್ರಧಾನಿ ಅವರಿಗೆ ಭವ್ಯ ಸ್ವಾಗತ ಕೋರಿದರು. ಇದೇ ವೇಳೆ ಪ್ರಧಾನಿ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದರು.
ವಿದೇಶಗಳಲ್ಲಿನ ಭಾರತೀಯ ಸಮುದಾಯದವರ ಸಾಧನೆ ದೇಶಕ್ಕೆ ಹೆಮ್ಮೆ ಮೂಡಿಸಿದ್ದು, ಭಾರತೀಯ ಸಮುದಾಯದವರೊಂದಿಗಿನ ಸಂವಾದ ಪ್ರೇರಣಾದಾಯಕ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸಲರ್ ಓಲಫ್ ಸ್ಕೋಲ್ಜ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಭಾರತ ಮತ್ತು ಜರ್ಮನಿ ಸಮಾನ ಮೌಲ್ಯಗಳನ್ನು ಹೊಂದಿದ್ದು, ಪರಸ್ಪರ ಹಿತಾಸಕ್ತಿಯಿಂದಾಗಿ ಭಾರತ-ಜರ್ಮನಿಯ ದ್ವಿಪಕ್ಷೀಯ ಬಾಂಧವ್ಯ ಹಲವು ವರ್ಷಗಳಿಂದ ಗಣನೀಯ ಪ್ರಗತಿ ಸಾಧಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಅವರು, ಆರಂಭಿಕ ಹಂತದಿಂದಲೂ ಕದನ ವಿರಾಮವನ್ನು ಭಾರತ ಪ್ರತಿಪಾದಿಸುತ್ತಿದೆ. ಇದಕ್ಕಾಗಿ ಮಾತುಕತೆಯೊಂದೇ ಮಾರ್ಗ. ಸಂಘರ್ಷದಲ್ಲಿ ಯಾವುದೇ ಪಕ್ಷ ಗೆಲುವು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಭಾರತ ಶಾಂತಿಯನ್ನು ಪ್ರತಿಪಾದಿಸುತ್ತಿದೆ. ಈ ಯುದ್ಧದಲ್ಲಿ ಮಾನವೀಯ ಪರಿಣಾಮಗಳ ಬಗ್ಗೆ ಭಾರತ ಕಳವಳ ಹೊಂದಿದೆ ಎಂದು ಹೇಳಿದರು.
ಜರ್ಮನ್ ಚಾನ್ಸಲರ್ ಓಲಫ್ ಸ್ಕೋಲ್ಜ್ ಮಾತನಾಡಿ, ಜರ್ಮನಿಗೆ ನರೇಂದ್ರ ಮೋದಿ ಅವರು ಭೇಟಿ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಂತರ್ ಸರ್ಕಾರಗಳ ಸಮಾಲೋಚನಾ ಸಭೆ ಭಾರತ – ಜರ್ಮನಿ ನಡುವಿನ ಸಹಭಾಗಿತ್ವಕ್ಕೆ ಹೊಸ ದಿಕ್ಕು ನೀಡಿದೆ. ಭಾರತದ ಹಸಿರು ಗುರಿ ಯೋಜನೆಗಳಿಗೆ ಜರ್ಮನಿ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜರ್ಮನಿ ಚಾನ್ಸಲರ್ ಓಲಫ್ ಸ್ಕೋಲ್ಜ್ ಅವರು ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಸಹಭಾಗಿತ್ವ ಸ್ಥಾಪಿಸುವ ಜಂಟಿ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಎರಡೂ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಈ ಭೇಟಿ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಅವರು, ಪ್ರವಾಸದ ಎರಡನೇ ಚರಣದಲ್ಲಿ ಇಂದು ಡೆನ್ಮಾರ್ಕ್‌ನ ಕೋಪನ್ ಹೇಗನ್‌ಗೆ ತೆರಳಲಿದ್ದಾರೆ. ನಾಳೆ ನಡೆಯಲಿರುವ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಡೆನ್ಮಾರ್ಕ್, ಐಸ್ಲೆಂಡ್, ಫಿನ್‌ಲೆಂಡ್, ಸ್ವೀಡನ್ ಮತ್ತು ನಾರ್ವೆ ದೇಶಗಳ ಪ್ರಧಾನಿಗಳೂ ಸಹ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
I had wide-ranging discussions with Chancellor Scholz. Today’s talks covered trade, commerce, innovation, culture and people-to-people linkages. India and Germany are working together on several subjects. This partnership will benefit our entire planet. @Bundeskanzler pic.twitter.com/bNQWtESzmv
— Narendra Modi (@narendramodi) May 2, 2022
Die 6. Deutsch-Indischen Regierungskonsultationen waren produktiv. @Bundeskanzler Scholz u. ich erörterten zusammen mit Ministern u. Beamten aus 🇮🇳 / 🇩🇪 Möglichkeiten zur Förderung der Zusammenarbeit, u.a. in Bereichen nachhaltige Entwicklung, Mobilität u. Wirtschaftswachstum. pic.twitter.com/bWIbtR5x6C
— Narendra Modi (@narendramodi) May 2, 2022
Met leading business leaders in Berlin and discussed ways to deepen trade linkages between India and Germany. pic.twitter.com/o9UvpQVYzw
— Narendra Modi (@narendramodi) May 2, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243