ದಿನದ ಸುದ್ದಿ
ಹಸಿವುಮುಕ್ತ ರಾಜ್ಯವನ್ನಾಗಿಸಲು ಆದ್ಯತೆ : ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭಗೊಂಡಿತು.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ಬಡಜನರ ಕಲ್ಯಾಣಕ್ಕೆ ಸರ್ಕಾರ ಶ್ರಮಿಸಲಿದ್ದು, ಹೊಸ ಆಡಳಿತ ಮಾದರಿಯನ್ನು ದೇಶಕ್ಕೆ ಪರಿಚಯಿಸುತ್ತದೆ. ಆಡಳಿತವನ್ನು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ ಎಂದು ಹೇಳಿದರು.
ರೈತರ ಪಾರಂಪರಿಕ ಜ್ಞಾನ ಹಾಗೂ ಆಧುನಿಕ ವೈಜ್ಞಾನಿಕ ಪದ್ಧತಿ ಸಮ್ಮಿಲನಗೊಂಡ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ಕೃಷಿ ವಲಯದ ಸುಧಾರಣೆ ಮಾಡಲಾಗುವುದು; ಜೊತೆಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮರುನಿರ್ಮಾಣ, ಎಪಿಎಂಸಿಗಳ ಸುಧಾರಣೆ, ರೈತಸ್ನೇಹಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.
ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಪದವೀಧರ ನಿರುದ್ಯೋಗಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯಿಂದ ಯುವಜನರಿಗೆ ಅನುಕೂಲವಾಗಲಿದೆ. ಮಕ್ಕಳ ಆರೋಗ್ಯ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ವಿಶೇಷ ಒತ್ತು ನೀಡಲಿದೆ ಎಂದು ತಿಳಿಸಿದರು.
ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಸಿಂಹಪಾಲು ನೀಡುತ್ತಿರುವ ಬೆಂಗಳೂರನ್ನು ಸಹನೀಯವಾದ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸಲು ಕ್ರಮಕೈಗೊಳ್ಳಲಾಗುವುದು. ’ಬ್ರಾಂಡ್ ಬೆಂಗಳೂರು’ ಅಭಿವೃದ್ಧಿಯ ಮೂಲಕ ಮತ್ತೊಮ್ಮೆ ಇಡೀ ವಿಶ್ವದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.
ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧ. ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಸಿದ್ಧವಿದೆ ಎಂದರು.
ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಪದವೀಧರ ನಿರುದ್ಯೋಗಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯಿಂದ ಯುವಜನರಿಗೆ ನೆರವು ಸಿಗಲಿದೆ. ಮಕ್ಕಳ ಆರೋಗ್ಯ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಉತ್ತಮ ಆರ್ಥಿಕ ನೀತಿಯೊಂದಿಗೆ ಒಟ್ಟಾರೆ ಆಧುನಿಕ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243