ದಿನದ ಸುದ್ದಿ

ಬಾಹ್ಯಾಕಾಶ, ಪರಮಾಣು ಕ್ಷೇತ್ರದಲ್ಲೂ ಬಂಡವಾಳ ಹೂಡಿಕೆಗೆ ಖಾಸಗಿ ವಲಯ ಆಸಕ್ತಿ : ನಿರ್ಮಲಾ ಸೀತಾರಾಮನ್

Published

on

ಸುದ್ದಿದಿನ ಡೆಸ್ಕ್ : ಸಾರ್ವಜನಿಕ ಒಡೆತನದ ಕಂಪನಿಗಳಿಂದ ಬಂಡವಾಳ ವಾಪಸ್ ಪಡೆಯುವುದು ಎಂದರೆ ಅವುಗಳನ್ನು ಮುಚ್ಚಲಾಗುತ್ತದೆ ಎಂಬ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಸಂಸ್ಥೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತದಿಂದ ನಾವೀನ್ಯತೆ ಮತ್ತು ವೃತ್ತಿಪರತೆ ಹೆಚ್ಚಾಗಿ, ವೆಚ್ಚ ಕಡಿಮೆಯಾಗಿ ಅಂತಹ ಘಟಕಗಳಲ್ಲಿ ಉತ್ಪಾದನೆ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಾರ್ವಜನಿಕ ಸ್ವತ್ತು ನಿರ್ವಹಣಾ ಸಂಸ್ಥೆ ಹೊರತಂದ ಭಾರತ್ ಇಟಿಎಫ್ ಬಾಂಡ್‌ಗಳು, ಬಂಡವಾಳ ಮಾರುಕಟ್ಟೆ ಮೂಲಕ 53 ಸಾವಿರ ಕೋಟಿ ರೂಪಾಯಿ ಹೂಡಿಕೆ ತಂದಿವೆ ಎಂದು ಅವರು ಹೇಳಿದರು.

1991ರಲ್ಲಿ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯಿಂದಾಗಿ ಹಲವು ಖಾಸಗಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದರು. 1994-2004 ನಡುವೆ ಬಂಡವಾಳ ಹಿಂತೆಗೆತ ನಿರ್ಣಯದಿಂದ ಇಂದು ಆ ಸಂಸ್ಥೆಗಳು ಉತ್ತಮವಾಗಿವೆ ಎಂದು ಹಣಕಾಸು ಸಚಿವರು ಹೇಳಿದರು.

ಬಾಹ್ಯಾಕಾಶ ಮತ್ತು ಪರಮಾಣು ಕ್ಷೇತ್ರಗಳಲ್ಲೂ ಇಂದು ಖಾಸಗಿ ಸಂಸ್ಥೆಗಳು ಹೆಚ್ಚಿನ ಪಾತ್ರ ವಹಿಸುತ್ತಿರುವುದು ಇಂದಿನ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದರು. ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ 75 ನಗರಗಳಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version