ದಿನದ ಸುದ್ದಿ

ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ : ನ್ಯಾಯವಾದಿ ಬಳ್ಳಾರಿ ರೇವಣ್ಣ

Published

on

ಸುದ್ದಿದಿನ,ಮೈಸೂರು : ಕರುನಾಡು ಸೇವಾ ಟ್ರಸ್ಟ್ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ ಎಂದು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಬಳ್ಳಾರಿ ರೇವಣ್ಣನವರು ಅಭಿಪ್ರಾಯಪಟ್ಟರು.

ನಗರದ ರೋಟರಿ ಸಭಾಂಗಣದಲ್ಲಿ “ಸಾಧಕರ ಸಮಾಗಮದ ಪ್ರಜಾ ಭೂಷಣ ಪ್ರಶಸ್ತಿ-2022ನೇಯ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕರುನಾಡು ಸೇವಾ ಟ್ರಸ್ಟ್ ಎಲೆಮರೆ ಕಾಯಿಯಂತಿರುವ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ ಅವರನ್ನ ಅವರ ಕ್ಷೇತ್ರದಲ್ಲಿ ಮತ್ತಷ್ಟು ಕಾರ್ಯ ಕೈಗೊಳ್ಳಲು ಉತ್ತೇಜನ ಪೂರ್ವಕವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಅಭಿನಂದನೀಯ ಎಂದರು.

ಇಂದಿನ ಸ್ವಾರ್ಥ ಸಮಾಜದೊಳಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಟ್ರಸ್ಟಿನ ಪದಾಧಿಕಾರಿಗಳು ಸೇರಿ ಉತ್ತಮವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮದ ಹಿಂದೆ ಟ್ರಸ್ಟಿನ ಅಧ್ಯಕ್ಷರಾದ ಅಭಿನಂದನ್. ಎಂ.ರವರ ಶ್ರಮ ಬಹಳಷ್ಟಿದೆ ಎಂದರು. ಹಾಗೇನೆ ಪ್ರಾಮಾಣಿಕವಾಗಿ, ಹಾಗೂ ನಿಷ್ಪಕ್ಷಪಾತವಾಗಿ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲೆಂದು ಆಶಿಸಿದರು.

ಈ ಸಾಧಕರಲ್ಲಿ ಹಿರಿಯರು, ಕಿರಿಯರು ಎಲ್ಲರೂ ಸಹ ಇದ್ದು, ಈ ಸಾಧಕರ ಸೇವೆ ಅನನ್ಯವಾಗಿದೆ. ಜೊತೆಗೆ ನಮ್ಮ ಮನಸ್ಸನ್ನು ಸದೃಢವಾಗಿ ಇಟ್ಟು ಕೊಳ್ಳಬೇಕಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರವಾಗಿ ಶೋಧಿಸಿ ಸಾಧಕರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ಇಂದಿನ ಪರಿಸ್ಥಿತಿಗೆ ಸಮಸಮಾಜ ನಿರ್ಮಾಣವಾಗಬೇಕಿದೆ. ಹಾಗೇನೇ ಸಹಕಾರ, ಸಾಮರಸ್ಯ, ಸೌಹಾರ್ದತೆ, ಇಂದಿನ ದಿನಗಳಿಗೆ ಅವಶ್ಯಕತೆ ಇದೆಎಂದರು. ಹಾಗೇನೇ ಬಸವಣ್ಣ, ಕನಕದಾಸ ರು, ಪುರಂದರದಾಸರು, ಇವರುಗಳನ್ನು ಒಂದು ಜಾತಿಗೆ ಸೀಮಿತ ಮಾಡದೇ, ಸರ್ವರನ್ನು ಸಮಾನವಾಗಿ ಕಾಣಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿ ಕೆರೆ ಗೋಪಾಲರು ವಹಿಸಿ ಮಾತನಾಡುತ್ತಾ ಸರ್ಕಾರ ಮಾಡಬೇಕಿರುವ ಕೆಲಸವನ್ನು ಕರುನಾಡು ಸೇವಾ ಟ್ರಸ್ಟ್ ತುಂಬಾ ಚೆನ್ನಾಗಿ ಮಾಡಿಕೊಂಡು ಬರುತಿದೆ. ಅವರಿಗೆ ಅಭಿನಂದನೆಗಳು. ಎಂದ ಅವರು ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ ನಿಮ್ಮ ಜೊತೆ ಇರಲಿದೆ ಎಂಬ ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್, ಹಿರಿಯ ಪತ್ರಕರ್ತರಾದ ಡಾ ವೈ. ರಾಮಕೃಷ್ಣಪ್ಪ, ಟ್ರಸ್ಟಿನ ಅಧ್ಯಕ್ಷರಾದ ಅಭಿನಂದನ್. ಎಂ, ಪದಾಧಿಕಾರಿಗಳಾದ ರೇಣುಕಾಂಬ ಕೆ.ಎಂ. ತ್ಯಾಗರಾಜು, ಪ್ರದೀಪ್, ಮಂಜುನಾಥ್, ಹಾಜರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಯುವ ಲೇಖಕಿ ಪ್ರಿಯಾ ಸುಳ್ಯ, ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಭದ್ರಾವತಿಯ ಶಿಕ್ಷಕ ಸಿ. ಎಚ್. ನಾಗೇಂದ್ರಪ್ಪ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುಮಾರು 35 ಜನರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಧಕರಿಗೆ ಪ್ರಜಾ ಭೂಷಣ ಪ್ರಶಸ್ತಿ-2022. ನೀಡಿ ಗೌರವಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version