ದಿನದ ಸುದ್ದಿ
ಚಿತ್ರದುರ್ಗ : ‘ಭೂಮಿಯ ಹಕ್ಕು ಪತ್ರ’ಕ್ಕಾಗಿ ಇಂದಿನಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಭೂಹೀನ ದಲಿತರು, ಬುಡಕಟ್ಟು ಜನರು, ಹಿಂದುಳಿದಿರುವ, ಆರ್ಥಿಕವಾಗಿ ದುರ್ಬಲ ಸಮುದಾಯಗಳು ತಾವು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರಕ್ಕಾಗಿ ನಾಲ್ಕು ದಶಕದಿಂದಲೂ ಹೋರಾಡುತ್ತಿದ್ದಾರೆ.
ರಾಜಕಾರಣಿಗಳಿಂದ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಭರವಸೆ ಮಾತುಗಳು ಬಿಟ್ಟರೆ ಬೇರೆ ಏನೂ ಸಿಕ್ಕಿಲ್ಲ. ಬಡವರಿಗೆ ಈ ಜಿಲ್ಲೆಯಲ್ಲಿ ಭೂಮಿ ಮರಿಚಿಕೆಯಾಗಿಯೇ ಉಳಿದಿದೆ. ದುರಂಕಾರದಿಂದ ಮೆರೆಯುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ನಿರ್ಲಕ್ಷ್ಯ ದ ಕಂದಾಯ ಅಧಿಕಾರಿಗಳು ಇವರ ನಡುವೆ ಸಿಲುಕಿರುವ ಜನರ ಬದುಕುಗಳು ತತ್ತರಿಸಿ ಹೋಗುತ್ತಿವೆ.
ಭೂಮಿಗಾಗಿ ಜೀವನವನ್ನೇ ಸವೆಸುತ್ತಿದ್ದರೂ ಇದನ್ನು ಕಂಡೂ ಕಾಣದಂತೆ ಇರುವ ರಾಜಕಾರಣಿಗಳ ಹೃದಯ ಅದೆಷ್ಟು ಕಟುಕತನದ್ದೆಂದು ಅರ್ಥವಾಗುತ್ತಿದೆ. ಜನರು ಹೋರಾಟ, ಜೈಲುಪಾಲು, ಅಧಿಕಾರಿಗಳೊಂದಿಗೆ ಜಗಳದಲ್ಲೇ ಬದುಕಿಗಾಗಿನ ಭೂಮಿಯು ನಮ್ಮ ಈ ತಲೆಮಾರಿಗೆ ದೊರಕೀತೆ? ಎಂದು ಯೋಚಿಸುತ್ತಲೇ ಇದ್ದಾರೆ. ನಿರಂತರವಾಗಿ ನೂರಾರು ಹೋರಾಟ, ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಅದರೂ ಜನರ ಭೂಮಿಯ ಕನಸಿಗೆ ತಣ್ಣೀರೆರಚುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ.
ಬೇಡಿಕೆಗಳು
- ಸರ್ಕಾರದ ವಿವಿಧ ಹೆಸರಿನಲ್ಲಿರು ಭೂಮಿಯಲ್ಲಿ
ಸಾಗುವಳಿ ಮಾಡುತ್ತಿದ್ದು ಫಾರಂ.ನಂ. 50,53ರಲ್ಲಿ ಅರ್ಜಿ ಸಲ್ಲಿರುವ ಭೂಹೀನರಿಗೆ ಹಕ್ಕುಪತ್ರ ಕೊಡಬೇಕು, - ಅರಣ್ಯ ಹಕ್ಕುಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಕ್ಕುಪತ್ರ ನೀಡಬೇಕು.
- ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು ಅರ್ಜಿ ಸಲ್ಲಿಸದೇ ಇರುವವರಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
- 94ಸಿ, 94ಸಿಸಿ. ಅರ್ಜಿಸಲ್ಲಿಸಿದ ಎಲ್ಲರಿಗೂ ಜಾಗದ ಹಕ್ಕುಪತ್ರ ವಿತರಿಸಬೇಕು.
- ಕಂದಾಯ-ಅರಣ್ಯ ಭೂಮಿಯ ಜಂಟಿಸರ್ವೆ ನಡೆಸಿ ಗೊಂದಲವನ್ನು ನಿವಾರಿಸಬೇಕು.
- ಬಲಾಡ್ಯರ ವಶದಲ್ಲಿರುವ ಸರ್ಕಾರಿ ಗೋಮಾಳ ಇನ್ನಿತರೆ ಭೂಮಿಯನ್ನು ವಶಪಡಿಸಿಕೊಂಡು ಭೂಹೀನರಿಗೆ ಹಂಚಿಕೆ ಮಾಡಬೇಕು.
- ಜಿಲ್ಲೆಯ ಭೂಮಿ-ವಸತಿ ಸಮಸ್ಯೆಗಳನ್ನು ಕಾಲಕಾಲಕ್ಕೆ ಬಗೆ ಹರಿಸಲು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಹೋರಾದ ಪ್ರತಿನಿಧಿಗಳನ್ನೊಳಗೊಂಡ ಜಿಲ್ಲಾ ಸಮಿತಿಯನ್ನು ರಚಿಸಬೇಕು.
ಈ ಮೇಲಿನ ಬೇಡಿಕೆಗಳನ್ನು ಇಟ್ಟುಕೊಂಡು ಸೋಮವಾರದಿಂದ (ಇಂದಿನಿಂದ) ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಆರಂಭಿಸಲಾಗುತ್ತಿದೆ. ಬಡವರ ನ್ಯಾಯಯುತವಾದ ಈ ಹೋರಾಟಕ್ಕೆ ನಾಡಿನ ಎಲ್ಲಾ ಪ್ರಜ್ಞಾವಂತರು ಸಹಕರಿಸಿ ಹೋರಾಟದ ಬೆಂಬಲಕ್ಕೆ ನಿಲ್ಲಬೇಕೆಂದು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಮನವಿ ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243