ದಿನದ ಸುದ್ದಿ
ದಾವಣಗೆರೆ | “ಮೇಲೆ ಬಿಳಿ ಬಟ್ಟೆ, ಒಳಗೆ ಖಾಲಿ ಹೊಟ್ಟೆ” : ಸರ್ಕಾರದ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳ ಆಕ್ರೋಶ
ಸುದ್ದಿದಿನ, ದಾವಣಗೆರೆ : “ಮೇಲೆ ಬಿಳಿ ಬಟ್ಟೆ, ಒಳಗೆ ಖಾಲಿ ಹೊಟ್ಟೆ” ಹೀಗೆ ಘೋಷಣೆ ಕೂಗುತ್ತ ಹನ್ನೊಂದು ನಿಮಿಷ ತಟ್ಟೆ ಭಾರಿಸುವ ಮೂಲಕ ಶಿಷ್ಯ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಯದೇವ ಸರ್ಕಲ್ ನಲ್ಲಿ ಗುರುವಾರ ಹನ್ನೊಂದನೆ ದಿನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ ಕಾಲಿಟ್ಟಿದ್ದು 11 ಗಂಟೆ, 11 ನಿಮಿಷ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ ” ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತವನ್ನು ಸರ್ಕಾರವೇ ಈ ಹಿಂದಿನಂತೆ ಭರಿಸಬೇಕಿದೆ, ಆಡಳಿತ ಮಂಡಳಿಯು ಶಿಷ್ಯವೇತನವನ್ನು ನೀಡುವುದಿಲ್ಲ” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 230 ವಿದ್ಯಾರ್ಥಿಗಳ 16 ತಿಂಗಳ 8 ಕೋಟಿ ಶಿಷ್ಯವೇತನ ಬಾಕಿಯಿದ್ದು, ಜೆಜೆಎಂ ಕಾಲೇಜು ಆಡಳಿತ ಮಂಡಳಿ ಮತ್ತು ಸರ್ಕಾರದ ನಿರ್ಲಕ್ಷದಿಂದ ಅಕ್ಷರಶಃ ವಿದ್ಯಾರ್ಥಿಗಳು ಬದುಕು ಅತಂತ್ರವಾಗಿದೆ.
ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನಮಗೆ ಕೇಂದ್ರ ಸರ್ಕಾರ ತಟ್ಟೆ ಭಾರಿಸುವ ಮೂಲಕ ಅಭಿನಂದಿಸತ್ತು, ಆದರೆ ಬಡಕುಟುಂಬದಿಂದ ಬಂದಿರುವ ನಮಗೆ ಶಿಷ್ಯ ವೇತನವಿಲ್ಲದೆ ಓದಿಗೆ ತೊಂದರೆಯಾಗಿದೆ. ಹನ್ನೊಂದು ದಿನವಾದರೂ ಜಾಣ ಮೌನ ವಹಿಸಿರುವ ಸರ್ಕಾರವನ್ನು ಎಚ್ಚರಿಸಲು ಹಾಗೂ ಅವರಿಗೆ ಹೀಗಾದರೂ ನಮ್ಮ ಕೂಗು ಕೇಳಿಸಲಿ ಎಂದು ನಾವು ತಟ್ಟೆ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ’ ಎನ್ನುತ್ತಾರೆ ವೈದ್ಯಕೀಯ ವಿದ್ಯಾರ್ಥಿಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243