ದಿನದ ಸುದ್ದಿ
ಪರ್ಯಾಯ ಸಂವಿಧಾನ ರಚನೆ ವಿರೋಧಿಸಿ ಪ್ರತಿಭಟನೆ ; ಡಿಸಿಗೆ ಮನವಿ
ಸುದ್ದಿದಿನ,ದಾವಣಗೆರೆ:ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾರತದ ಏಕತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪರ್ಯಾಯ ಸಂವಿಧಾನದ ಕರಡನ್ನು ಸಿದ್ಧಪಡಿಸಿ, ಅದನ್ನು ಸಂಸತ್ತಿನ ಮುಂದೆ ತರುವ ಪ್ರಯತ್ನಕ್ಕೆ ಮುಂದಾಗಿರುವ ಮನುವಾದಿಗಳಿಗೆ ಧಿಕ್ಕಾರವಿರಲಿ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಗಡಿ ಕಿಡಿಕಾರಿದರು.
ನಗರದ ಜಾಗತಿಕ ಲಿಂಗಾಯತ ಮಹಾಸಭಾ, ಜಾಗೃತ ಭಾರತ ವಿಚಾರ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ ಹಾಗೂ ಬಸವಪರ, ದಲಿತಪರ, ಪ್ರಗತಿಪರ ಸಂಘಟನೆಗಳ ವೇದಿಕೆಯ ಪದಾಧಿಕಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಪರ್ಯಾಯ ಸಂವಿಧಾನ ರಚನೆಗೆ ಸಿದ್ದವಾಗಿರುವವರ ವಿರುದ್ಧ ಪ್ರತಿಭಟನೆ ನಡೆಸಿದರು.
ಮೂಲಭೂತವಾದಿಗಳು ಒಂದು ಧರ್ಮವನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಸಂವಿಧಾನ ಬದಲಾವಣೆಗೆ ಮುಂದಾಗಿರುವ ಈ ಕ್ರಮವು ಭಾರತದ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದ್ದು, ಇವರ ಈ ನಡೆಯು ಭಾರತದ ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ ದೇಶದ್ರೋಹಿ ಕೃತ್ಯವೂ ಆಗಿರುತ್ತದೆ ಎಂದು ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಡಾ.ಕೆ.ಎ.ಓಬಳೇಶ್ ಆಕ್ರೋಶವ್ಯಕ್ತಪಡಿಸಿದರು.
ಸಂವಿಧಾನ ವಿರೋಧಿ ಕೃತ್ಯವನ್ನು ದಾವಣಗೆರೆ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ಅತ್ಯಂತ ಉಗ್ರವಾಗಿ ಖಂಡಿಸುತ್ತಿದ್ದು, ಇದು ಹೀಗೆ ಮುಂದುವರೆದರೆ ಇದರ ವಿರುದ್ಧ ದೇಶವ್ಯಾಪ್ತಿ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ರುದ್ರೇ ಗೌಡ ಅವರು ಎಚ್ಚರಿಕೆ ನೀಡಿದರು.
ನಂತರ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಡಿಸಿ ಕಚೇರಿಗೆ ತೆರಳಿ ಮನವಿಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243