ದಿನದ ಸುದ್ದಿ
ಪಿಎಸ್‌ಐ ಅಕ್ರಮ ನೇಮಕಾತಿ : ಶಾಸಕ ಎಂ.ವೈ.ಪಾಟೀಲ್ ಗನ್ ಮ್ಯಾನ್ ಬಂಧನ ; ಅಕ್ರಮ ಮಾಡಿಲ್ಲ ಎಂದ ಅಭ್ಯರ್ಥಿಗಳು
ಸುದ್ದಿದಿನ,ಕಲಬುರಗಿ: ಅಫ್ಜಲ್‌ಪುರ ಎಂಎಲ್‌ಎ ಎಂ.ವೈ.ಪಾಟೀಲ್ ಗನ್‌ಮ್ಯಾನ್‌ನನ್ನು ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ.
ಶಾಸಕ ಎಂ.ವೈ.ಪಾಟೀಲ್ ಅವರು ಮದುವೆಗೆ ಹೋಗುತ್ತಿದ್ದ ವೇಳೆ, ಕಲಬುರಗಿ ನಗರದ ರಾಮಮಂದಿರ ಬಳಿ ಗನ್‌ಮ್ಯಾನ್ ಅಣ್ಣಯ್ಯ ದೇಸಾಯಿಯನ್ನು ಅರೆಸ್ಟ್ ಮಾಡಲಾಗಿದೆ.
ಪಿಎಸ್‌ಐ ಪರೀಕ್ಷೆಯ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಇದುವರೆಗೆ ಮೂವರು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನು, ನಾಲ್ವರು ಅಭ್ಯರ್ಥಿಗಳು ಹಾಗೂ ಜ್ಞಾನಜೋತಿ ಇಂಗ್ಲಿಷ್ ಶಾಲೆ ಅಧ್ಯಕ್ಷ ರಾಜೇಶ್ ಹಾಗರಗಿ ಸೇರಿ 8 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪೈಕಿ 6 ಆರೋಪಿಗಳನ್ನು 3 ದಿನಗಳ ಕಾಲ ವಿಚಾರಣೆ ನಡೆಸಿದರೂ ಅಭ್ಯರ್ಥಿಗಳು ಸತ್ಯ ಹೇಳಿಲ್ಲ ಎನ್ನಲಾಗಿದೆ.
ನಮಗೆ ಅಕ್ರಮದ ಬಗ್ಗೆ ಗೊತ್ತಿಲ್ಲ, ನಾವು ಅಕ್ರಮ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವೀರೇಶ್ ಎಂಬ ಅಭ್ಯರ್ಥಿಯು ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಕಿಂಗ್‌ಪಿನ್ ಮಂಜುನಾಥ ಎಂಬವನಿಗೆ 39 ಲಕ್ಷ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಅಕ್ರಮದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತ ಅಭ್ಯರ್ಥಿಗಳ ಬ್ಯಾಂಕ್ ಡಿಟೈಲ್ಸ್, ಹಣದ ವರ್ಗಾವಣೆ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243