ದಿನದ ಸುದ್ದಿ

ಪಿಎಸ್ಐ ನೇಮಕಾತಿ ಅಕ್ರಮ | ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ನಾಪತ್ತೆ ; ಸಿಐಡಿ ದಾಳಿ

Published

on

ಸುದ್ದಿದಿನ,ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‍ಐ) ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಂಡಿದ್ದು, ಹಲವರನ್ನು ಬಂಧಿಸಿದ ಪೊಲೀಸರು ಭಾನುವಾರ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಮುಖಂಡೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದೆ.

ರಾಜ್ಯದಲ್ಲಿ 545 ಪಿಎಸ್‍ಐ ಹುದ್ದೆಯ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪವಿರುವ ಕಾರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ತನಿಖೆಯನ್ನು ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಿಐಡಿ ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡ ಬಿಜೆಪಿ ಮುಖಂಡೆ ಹಾಗೂ ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಮನೆ ತಪಾಸಣೆಗೆ ಮುಂದಾಗಿದೆ.

ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದ ಜ್ಞಾನಜೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು. ಇದೇ ಶಾಲೆಯ ಮೂವರು ಮಹಿಳಾ ಕೊಠಡಿ ಮೇಲ್ವಿಚಾರಕರು, ಇದೇ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ನಾಲ್ವರು ಅಭ್ಯರ್ಥಿಗಳು ಸೇರಿ ಒಟ್ಟು ಏಳು ಜನರನ್ನು ಈಗಾಗಲೇ ಸಿಐಡಿ ತಂಡ ಬಂಧನಕ್ಕೊಳಪಡಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ಸಿಐಡಿ ತಂಡ ದಿವ್ಯಾ ಹಾಗರಗಿ ಪತಿ ರಾಜೇಶ್‍ನನ್ನು ವಿಚಾರಣೆ ನಡೆಸುತ್ತಿದ್ದಾರೆ. ದಿವ್ಯಾ ಹಾಗರಗಿ ವಿಜಯಪುರಕ್ಕೆ ಹೋಗಿದ್ದಾರೆ ಎಂದು ರಾಜೇಶ್ ಸಿಐಡಿ ತಂಡಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version